ಜೈಲಿನಲ್ಲಿರಲಿ, ಹೊರಗಿರಲಿ ನನ್ನ ಜೀವನ ದೇಶಕ್ಕೆ ಸಮರ್ಪಿತ: ಕೇಜ್ರಿವಾಲ್‌

Public TV
1 Min Read

ನವದೆಹಲಿ: ಜೈಲಿನ ಒಳಗಿರಲಿ ಅಥವಾ ಹೊರಗಿರಲಿ, ನನ್ನ ಜೀವನವು ದೇಶಕ್ಕಾಗಿ ಸಮರ್ಪಿತವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಹೇಳಿದ್ದಾರೆ.

ಮದ್ಯ ಹರಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿಯನ್ನು ಇಂದು ರೋಸ್ ಅವೆನ್ಯೂ ನ್ಯಾಯಾಲಯಕ್ಕೆ (Rouse Avenue Court) ಹಾಜರುಪಡಿಸುವ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಈ ರೀತಿಯಾಗಿ ಪ್ರತಿಕ್ರಿಯಿಸಿದರು. ಜೈಲಿನಲ್ಲಿದ್ದರೂ ಹೊರಗಿದ್ದರೂ ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವುದಾಗಿ ತಿಳಿಸಿದ್ದಾರೆ.

ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಲ್ಲಿ ಪಾತ್ರ ವಹಿಸಿದ್ದಕ್ಕಾಗಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಗುರುವಾರ ಕೇಜ್ರಿವಾಲ್ ಅವರನ್ನು ಬಂಧಿಸಿದ್ದಾರೆ. ಬಳಿಕ ಇಂದು 10 ದಿನಗಳ ಕಸ್ಟಡಿಗೆ ಕೋರಿದೆ. ಇದನ್ನೂ ಓದಿ: ಕೇಜ್ರಿವಾಲ್‌ ಅಕ್ರಮದ ಬಗ್ಗೆ ಸಾಕ್ಷ್ಯಗಳೊಂದಿಗೆ ಕಾಂಗ್ರೆಸ್‌ ದೂರು ನೀಡಿತ್ತು: ಬಿಜೆಪಿ ತಿರುಗೇಟು

ಇತ್ತ ಕೇಜ್ರಿವಾಲ್ ಬಂಧನ ಪ್ರತಿಭಟನೆಗೆ ಕಾರಣವಾಯಿತು. ‌ಪ್ರತಿಭಟನೆಯ ವೇಳೆ ದೆಹಲಿ ಸಚಿವ ಸೌರಭ್ ಭಾರದ್ವಾಜ್ ಅವರು ಕೇಜ್ರಿವಾಲ್ ಅವರ ಕುಟುಂಬವನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಕೇಜ್ರಿವಾಲ್ ಅವರ ತಾಯಿ ಆರೋಗ್ಯವಾಗಿಲ್ಲ ಮತ್ತು ಇತ್ತೀಚೆಗಷ್ಟೇ ಅವರು ಆಸ್ಪತ್ರೆಯಿಂದ ವಾಪಸ್ಸಾಗಿದ್ದಾರೆ. ಕುಟುಂಬದ ಸದಸ್ಯರಿಗೆ ಯಾರನ್ನೂ ಭೇಟಿಯಾಗಲು ಅವಕಾಶವಿಲ್ಲ ಎಂದು ಕಿಡಿಕಾರಿದ್ದಾರೆ.

ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡುತ್ತಿಲ್ಲ. ಪಕ್ಷದ ಕಾರ್ಯಕರ್ತರಿಗೆ ಪ್ರತಿಭಟನೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ. ಇದು ಸಂಪೂರ್ಣ ಸರ್ವಾಧಿಕಾರ. ಲೋಕಸಭಾ ಚುನಾವಣೆ ಗೆಲ್ಲಲು ಹೀಗೆ ಮಾಡಲಾಗುತ್ತಿದೆ. ಜನರು ಎಲ್ಲೇ ಇದ್ದರೂ ಪ್ರತಿಭಟನೆ ಮಾಡುತ್ತಾರೆ, ಇದು ನಿಲ್ಲುವುದಿಲ್ಲ. ಕ್ರಾಂತಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಅವರು ಆಕ್ರೋಶದ ಮಾತುಗಳನ್ನಾಡಿದ್ದಾರೆ.

Share This Article