ಕುಸಿದ ಭತ್ತದ ಬೆಲೆ-ಬರಗಾಲಕ್ಕೆ ತತ್ತರಿಸಿದ ರೈತರು ಈಗ ಸಂಪೂರ್ಣ ಅತಂತ್ರ

Public TV
2 Min Read

ರಾಯಚೂರು: ಒಂದು ಕಡೆ ಕಬ್ಬು ಬೆಳೆಗಾರರು ಬಾಕಿ ಹಣ ಸಿಗ್ತಿಲ್ಲ ಅಂತ ಹೋರಾಟ ನಡೆಸುತ್ತುದ್ದರೆ, ಇತ್ತ ರಾಯಚೂರಿನಲ್ಲಿ ರೈತರು ತಾವು ಬೆಳೆದ ಭತ್ತಕ್ಕೆ ಸೂಕ್ತ ಬೆಲೆ ಸಿಗ್ತಿಲ್ಲ ಅಂತ ಪರದಾಡುತ್ತಿದ್ದಾರೆ. ಈ ಬಾರಿ ಭತ್ತದ ಬೆಲೆ ಹಿಂದೆಂದೂ ಕಾಣದಷ್ಟು ಕುಸಿದಿದ್ದು, ಮೊದಲೇ ಬರಗಾಲಕ್ಕೆ ತತ್ತರಿಸಿದ ರೈತರು ಈಗ ಸಂಪೂರ್ಣ ಅತಂತ್ರರಾಗಿದ್ದಾರೆ. ಸಿಕ್ಕಷ್ಟು ಬೆಲೆಗೆ ಭತ್ತ ಮಾರಾಟ ಮಾಡುವುದೋ ಅಥವಾ ಸೂಕ್ತ ಬೆಲೆಗಾಗಿ ಕಾಯುವುದೋ ಅನ್ನೋ ಗೊಂದಲದಲ್ಲೆ ದಿನಗಳನ್ನು ಮುಂದೂಡುತ್ತಿದ್ದಾರೆ.

ರಾಯಚೂರು, ಹೇಳಿ ಕೇಳಿ ಬಿಸಿಲನಾಡು. ಇಲ್ಲಿನ ರೈತರು ತುಂಗಾಭದ್ರಾ, ಕೃಷ್ಣ ನದಿಗಳನ್ನು ನಂಬಿಕೊಂಡು ಹೇಗೋ ಕಷ್ಟಪಟ್ಟು ಭತ್ತ ಬೆಳೆಯುತ್ತಾರೆ. ಆದರೆ ಅವರು ಕಷ್ಟಪಟ್ಟು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆಯೇ ಸಿಗುತ್ತಿಲ್ಲ. ಸರ್ಕಾರ ಭತ್ತಕ್ಕೆ 1,750 ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡಿದರೂ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಗುಣಮಟ್ಟದ ನೆಪವೊಡ್ಡಿ ಕೇವಲ 1100 ರೂಪಾಯಿಗೆ ಖರೀದಿ ಮಾಡುತ್ತಿದ್ದಾರೆ.

ಒಂದು ಎಕರೆ ಭತ್ತ ಬೆಳೆಯಲು ರೈತರು 30 ರಿಂದ 40 ಸಾವಿರ ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ಇವರಿಗೆ ಸಿಗೋ ಬೆಲೆಯಲ್ಲಿ ಕನಿಷ್ಠ ಬೀಜ, ಗೊಬ್ಬರಕ್ಕೆ ಖರ್ಚು ಮಾಡಿದ ಹಣವೂ ಮರಳಿ ಬರುತ್ತಿಲ್ಲ. ಹೀಗಾಗಿ ಕೃಷ್ಣಾ ಹಾಗೂ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಲಕ್ಷಾಂತರ ಎಕರೆಯಲ್ಲಿ ಭತ್ತ ಬೆಳೆದ ರೈತರು ಮಾರಾಟಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಸಿಂಧನೂರು, ಮಾನ್ವಿ, ಸಿರವಾರ, ದೇವದುರ್ಗ ತಾಲೂಕುಗಳಲ್ಲಿ ಅತೀ ಹೆಚ್ಚು ಭತ್ತ ಬೆಳೆಯಲಾಗಿದ್ದು, ಕೆಲ ಭಾಗಗಳಲ್ಲಿ ನೀರಿಲ್ಲದೆ ಭತ್ತ ಹಾಳಾಗಿ ಹೋಗಿದೆ. ಹೀಗಾಗಿ ಕೈಗೆ ಬಂದ ಭತ್ತಕ್ಕಾದ್ರೂ ಸರ್ಕಾರವೇ ವೈಜ್ಞಾನಿಕ ಬೆಲೆ ನಿಗದಿ ಮಾಡಿ ಖರೀದಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.

ಬರಗಾಲದ ಮಧ್ಯೆಯೂ ಬೆಳೆ ಬಂತಲ್ಲಾ ಅಂತ ಖುಷಿಯಲ್ಲಿದ್ದ ರೈತರಿಗೆ ಭಾರೀ ನಿರಾಶೆಯಾಗಿದೆ. ಇನ್ನಾದರೂ ಸರ್ಕಾರ ಸೂಕ್ತ ಬೆಲೆ ನಿಗದಿ ಮಾಡಿ ಕಳೆದ ಬಾರಿಗಿಂತ ಅರ್ಧದಷ್ಟು ಬೆಲೆ ಕುಸಿದಿರುವುದು ರೈತರನ್ನು ಮತ್ತೆ ಕಂಗಾಲಾಗಿಸಿದೆ. ಕೂಡಲೇ ಸರ್ಕಾರ ಎಚ್ಚೆತ್ತು ಭತ್ತ ಬೆಳೆಗಾರರ ಸಂಕಷ್ಟಕ್ಕೆ ನೆರವಾಗಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *