ಹಣಕಾಸು ಸಚಿವರು ಬಜೆಟ್‍ಗೂ ಮುನ್ನ ಈ ಸೂಟ್‍ಕೇಸ್ ತರೋದು ಯಾಕೆ?

Public TV
3 Min Read

ಬೆಂಗಳೂರು: ಬಜೆಟ್ ಮಂಡಿಸುವ ಮುನ್ನ ಎಲ್ಲ ಹಣಕಾಸು ಸಚಿವರು ಲೋಕಸಭೆ ಅಥವಾ ರಾಜ್ಯಸಭೆ ಪ್ರವೇಶಿಸುವ ಮುನ್ನ ಕೈಯಲ್ಲಿ ಕಡು ಕೆಂಪು ಬಣ್ಣದ ಸೂಟ್‍ಕೇಸ್ ತೋರಿಸುತ್ತಾರೆ. ರಾಜ್ಯ ಬಜೆಟ್ ಅಥವಾ ಕೇಂದ್ರ ಬಜೆಟ್ ಇರಲಿ ಹಣಕಾಸು ಸಚಿವರ ಕೈಯಲ್ಲಿ ಸೂಟ್ ಕೇಸ್ ಇರುವುದನ್ನು ನೀವೂ ಕೂಡ ಗಮನಿಸರಬಹುದು.

ಪಿ.ಚಿದಂಬರಂ, ಅರುಣ್ ಜೇಟ್ಲಿ ಸೇರಿದಂತೆ ಎಲ್ಲ ಹಣಕಾಸು ಸಚಿವರು ಬಜೆಟ್ ಮಂಡಿಸುವ ಮುನ್ನ ಸೂಟ್ ಕೇಸ್ ತೆಗೆದುಕೊಂಡು ಬರುತ್ತಾರೆ. ಈ ಒಂದು ಸಂಪ್ರದಾಯ ಭಾರತದಲ್ಲಿ 1947ರಿಂದಲೂ ಚಾಲ್ತಿಯಲ್ಲಿದೆ.

ಸೂಟ್ ಕೇಸ್ ಸಂಪ್ರದಾಯ ಬಂದಿದ್ದು ಹೇಗೆ?: ಮೊದಲು ಸೂಟ್ ಕೇಸಿಗೆ `ಬಜೆಟ್ ಬಾಕ್ಸ್’ ಸಹ ಎಂದು ಕರೆಯುತ್ತಿದ್ದರು. ಮೊದಲಿಗೆ ಬಜೆಟ್ ಎಂಬ ಲೆದರ್ ಬಾಕ್ಸ್ ನ್ನು ವಿಕ್ಟೋರಿಯಾ ರಾಣಿ, ಹಣಕಾಸು ಸಚಿವರಾಗಿದ್ದ ವಿಲಿಯಂ ಇವರ್ಥ್ ಗ್ಲಾಡ್‍ಸ್ಟೋನ್ ಎಂಬವರಿಗೆ ಚಿನ್ನದ ಲೇಪಿತ ಬ್ಯಾಗ್ ನೀಡಿದ್ದರು. ಮುಂದೇ ಇದೇ ಬ್ಯಾಗ್‍ನ್ನು 1860ರವರೆಗೂ ತರಲಾಗುತ್ತಿತ್ತು. ಆ ಬಳಿಕ ಇಂದಿನವರೆಗೂ ಬಜೆಟ್ ಮಂಡಿಸುವ ಮೊದಲು ಸಚಿವರು ಕಡು ಕೆಂಪು ಬಣ್ಣದ ಸೂಟ್ ಕೇಸನ್ನು ಹಿಡಿದುಕೊಂಡು ಬರುತ್ತಿದ್ದಾರೆ. ಬಜೆಟ್ ಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳು ಈ ಸೂಟ್ ಕೇಸ್ ನಲ್ಲಿರುತ್ತವೆ.

ಬಜೆಟ್ ಎಂಬ ಪದ ಹೇಗೆ ಬಂತು?: ಬಜೆಟ್ ಎಂಬುದು ಬ್ಲಗ್ ಮತ್ತು ಫ್ರೆಂಚ್‍ನ `ಬೌ’ ಹಾಗು `ಗೆಟ್’ ಪದಗಳಿಂದ ಬಂದಿದೆ. `ಬೌ’ `ಗೆಟ್’ ಎಂದರೆ ಚಿಕ್ಕದಾದ ಬ್ಯಾಗ್ ಅಥವಾ ವ್ಯಾಲೆಟ್ ಎಂದರ್ಥ. 15ನೇ ಶತಮಾನದಲ್ಲಿ `ಬೌ’ `ಗೆಟ್’ ಎಂಬ ಪದ ಇಂಗ್ಲಿಷ್‍ನಲ್ಲಿ ಬಜೆಟ್ ಎಂದು ಬದಲಾಯಿತು. ಕನ್ನಡದಲ್ಲಿ ಬಜೆಟ್ ಎಂಬ ಪದಕ್ಕೆ `ಮುಂಗಡ ಪತ್ರ’ ಎಂದು ಕರೆಯಲಾಗುತ್ತದೆ.

ಭಾರತದ ಮೊದಲ ಬಜೆಟ್: 1947, ನವೆಂಬರ್ 26ರಂದು ಆರ್.ಕೆ. ಷಣ್ಮುಖಂ ಚೆಟ್ಟಿ ಅವರು ಮೊದಲ ಬಜೆಟ್ ಮಂಡಿಸಿದರು. ಇದೂವರೆಗೆ ಮೊರಾರ್ಜಿ ದೇಸಾಯ್ ಅತೀ ಹೆಚ್ಚು ಬಜೆಟ್ ಮಂಡಿಸಿದವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೊರಾರ್ಜಿ ದೇಸಾಯ್ ಒಟ್ಟು 08 ಪೂರ್ಣಾವಧಿ ಮತ್ತು 01 ಮಧ್ಯಂತರ ಬಜೆಟ್ ಮಂಡಿಸಿದ್ದಾರೆ.

ಫೆ.1ರಂದು ಬಜೆಟ್: ಸಾಮನ್ಯವಾಗಿ ಕೇಂದ್ರ ಬಜೆಟ್‍ನ್ನು ಪ್ರತಿವರ್ಷ ಫೆಬ್ರವರಿ ಕೊನೆಯ ವಾರದಲ್ಲಿ ಮಂಡಿಸಲಾಗುತ್ತದೆ. ಆದ್ರೆ ಈ ಬಾರಿ ಫೆಬ್ರವರಿ 01 ರಂದು ಬಜೆಟ್ ಮಂಡಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ರೈಲ್ವೆ ಇಲಾಖೆಯಿಂದ ದೇಶಕ್ಕೆ ಹೆಚ್ಚಿನ ಆದಾಯ ಬುರವ ಕಾರಣದಿಂದ `ರೈಲ್ವೆ ಬಜೆಟ್’ ಪ್ರತ್ಯೇಕವಾಗಿ ಮಂಡಿಸಲಾಗುತ್ತದೆ. ಬಜೆಟನ್ನು ಲೋಕಸಭೆಯಲ್ಲಿ ಹಣಕಾಸು ಸಚಿವರು ಮಂಡಿಸಿದ ಬಳಿಕ ಅಲ್ಲಿ ಅದರ ಮೇಲೆ ಚರ್ಚೆ ನಡೆಯುತ್ತದೆ. ಪ್ರತಿ ಸಚಿವಾಲಯವು ತನ್ನ ಅಗತ್ಯಕ್ಕನುಗುಣವಾಗಿ ಹಣ ಮಂಜೂರು ಮಾಡುವಂತೆ ಪ್ರಸ್ತಾವನೆಯನ್ನಿಡುತ್ತದೆ. ಪ್ರತಿ ಕ್ಷೇತ್ರಕ್ಕೆ ನಿಗದಿಯಾಗುವ ಹಣಕ್ಕೆ ಸಮ್ಮತಿ ಪಡೆಯಲಾಗುತ್ತದೆ. ಎಲ್ಲಕ್ಕೂ ಸಮ್ಮತಿ ಸಿಕ್ಕ ನಂತರ ಬಜೆಟ್ ಮಾನ್ಯವಾಗುತ್ತದೆ.

ಬಜೆಟ್ ಹೇಗಿರುತ್ತದೆ?: ಹಿಂದಿನ ವರ್ಷದ ನೈಜ ಆದಾಯ ವೆಚ್ಚಗಳು, ಪ್ರಸ್ತುತ ವರ್ಷದ ನೈಜ ಆದಾಯ ವೆಚ್ಚಗಳು, ಪ್ರಸ್ತುತ ವರ್ಷದ ಪರಿಷ್ಕೃತ ಅಂದಾಜು ಆದಾಯ ವೆಚ್ಚಗಳು, ಮುಂಬರುವ ವರ್ಷದ ಮುಂಗಡ ಅಂದಾಜು ಆದಾಯ ವೆಚ್ಚಗಳು ಎಂಬ ನಾಲ್ಕು ಭಾಗಗಳನ್ನು ಮುಂಗಡ ಪತ್ರವು ಒಳಗೊಂಡಿರುತ್ತದೆ. ಬಜೆಟ್‍ನಲ್ಲಿ ಆದಾಯ, ವೆಚ್ಚ, ಆದಾಯ ಮತ್ತು ವೆಚ್ಚದ ನಡುವಣ ವ್ಯತ್ಯಾಸವನ್ನೂ ನಮೂದಿಸಲಾಗಿರುತ್ತದೆ.

ಈ ಮುಂಗಡಪತ್ರದಲ್ಲಿ ಮೂರು ವಿಧಗಳಿವೆ.

1. ಸಮತೋಲನ ಮುಂಗಡ ಪತ್ರ: ಇದರಲ್ಲಿ ಸರಕಾರದ ನಿರೀಕ್ಷಿತ ಆದಾಯವು ನಿರೀಕ್ಷಿತ ವೆಚ್ಚಕ್ಕೆ ಸಮವಾಗಿರುತ್ತದೆ.
2. ಉಳಿತಾಯ ಮುಂಗಡ ಪತ್ರ: ಇದರಲ್ಲಿ ಸರಕಾರದ ಅಂದಾಜು ಆದಾಯವು ಅಂದಾಜು ವೆಚ್ಚಕ್ಕಿಂತ ಅಧಿಕವಾಗಿರುತ್ತದೆ.
3. ಕೊರತೆ ಮುಂಗಡ ಪತ್ರ: ಇದರಲ್ಲಿ ಸರಕಾರದ ಅಂದಾಜು (ಸಮಗ್ರ) ಆದಾಯಕ್ಕಿಂತ ಅಂದಾಜು (ಸಮಗ್ರ) ವೆಚ್ಚವು ಅಧಿಕವಾಗಿರುತ್ತದೆ. ಆಧುನಿಕ ಆರ್ಥಿಕತೆಗಳೆಲ್ಲವೂ ಸಹ ಸುಖೀ ರಾಜ್ಯ ಸ್ಥಾಪನೆಯ ಧ್ಯೇಯವನ್ನು ಹೊಂದಿರುವುದರಿಂದ ಕೊರತೆ ಮುಂಗಡ ಪತ್ರವು ಜನಪ್ರಿಯವಾಗಿದೆ.

ಬಜೆಟ್‍ನ ಎರಡನೇ ಭಾಗದಲ್ಲಿ ತೆರಿಗೆ ಪ್ರಸ್ತಾಪವಾಗುತ್ತದೆ. ಹಣಕಾಸಿನ ಖರ್ಚು ಹಾಗೂ ತೆರಿಗೆ ಎರಡೂ ಕುರಿತು ಕಾಯ್ದೆಗಳು ಜಾರಿಗೆ ಬರುತ್ತವೆ. ಇಷ್ಟೆಲ್ಲಾ ಪ್ರಕ್ರಿಯೆಯನ್ನು ಒಟ್ಟಾಗಿ ಬಜೆಟ್ ಅನುಮೋದನೆ ಎಂದು ಕರೆಯುತ್ತಾರೆ. ಪ್ರತಿವರ್ಷ ಏಪ್ರಿಲ್ 1ರಿಂದ ಹೊಸ ಬಜೆಟ್ ಜಾರಿಗೆ ಬರುತ್ತದೆ.

Share This Article
Leave a Comment

Leave a Reply

Your email address will not be published. Required fields are marked *