ವಿಧಾನಸಭೆಯಲ್ಲಿ ಶಾಸಕರ ನಡುವೆ ಉತ್ತರ ದಕ್ಷಿಣ ವಾಕ್ಸಮರ

Public TV
2 Min Read

ಬೆಂಗಳೂರು: ನೀರಾವರಿ ಇಲಾಖೆಯಲ್ಲಿ ಯೋಜನಾ ವೆಚ್ಚ ಗಣನೀಯ ಏರಿಕೆಯಾಗುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಶಾಸಕರಿಂದ ಆಕ್ಷೇಪ ವ್ಯಕ್ತವಾಯಿತು. ಇಲಾಖೆ ಬೇಡಿಕೆಗಳ ಮೇಲಿನ ಚರ್ಚೆಗೆ ಸಚಿವ ಗೋವಿಂದ ಕಾರಜೋಳ ಉತ್ತರ ನೀಡುವಾಗ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಅರವಿಂದ ಬೆಲ್ಲದ್ ನೀರಾವರಿ ಯೋಜನೆಗಳ ವೆಚ್ಚ ಪರಿಷ್ಕರಣೆ ಆಗುತ್ತಾ ದುಪ್ಪಟ್ಟು ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಹುತೇಕ ಆಂಧ್ರ ಮೂಲದ ಗುತ್ತಿಗೆದಾರರಿಗೆ ಗುತ್ತಿಗೆ ಸಿಗುತ್ತಿದೆ. ಗುತ್ತಿಗೆದಾರರಿಗೆ ಯಾರಿಗೆ ಎಷ್ಟು ಬಿಲ್ ಆಗಿದೆ ಎಂದು ಅಂಕಿಅಂಶ ನೀಡಿ ಎಂದು ಆಗ್ರಹಿಸಿದರು. ಇದೇ ವೇಳೆ ಗುತ್ತಿಗೆದಾರರ ಹೆಸರು ಉಲ್ಲೇಖಿಸಿದ ಕಾಂಗ್ರೆಸ್ ಸದಸ್ಯ ಶಿವಾನಂದ್ ಪಾಟೀಲ್, ನಾಲ್ಕೇ ನಾಲ್ಕು ಜನ ಗುತ್ತಿಗೆದಾರರು ಈ ರಾಜ್ಯವನ್ನು ಲೂಟಿ ಹೊಡೆದಿದ್ದಾರೆ ಎಂದು ಆರೋಪಿಸಿದರು.

ಯೋಜನಾ ವೆಚ್ಚ ಏಕಾಏಕಿ ದುಪ್ಪಟ್ಟು ಆಗುತ್ತದೆ. 2,000 ಕೋಟಿ ರೂ. ಯೋಜನಾ ವೆಚ್ಚ 10,000 ಕೋಟಿ ರೂ. ವೆಚ್ಚ ಏರಿಕೆ ಆಗುತ್ತದೆ. ನಂ.1 ಗುತ್ತಿಗೆದಾರ ಡಿವೈವ್ ಊಪರ್, ನಂ.2 ಗುತ್ತಿಗೆದಾರ ಶೆಟ್ಟಿ, ಗುತ್ತಿಗೆದಾರ ಮಹಾಲಿಂಗ ಶಂಕರ್, ಗುತ್ತಿಗೆದಾರ ಮಾನಪ್ಪ ವಜ್ಜಲ್ ಅವರಿಗೆ ಗುತ್ತಿಗೆ ಸಿಗುತ್ತಿದೆ. ಅವರಿಗೆ ಹೇಗೆ ಗುತ್ತಿಗೆ ಸಿಗುತ್ತದೆ ಎಂದು ನಾನು ಕೇಳಲು ಹೋಗುವುದಿಲ್ಲ. ಆದರೆ ಯೋಜನೆ ಪ್ರಾರಂಭವಾದಾಗ ವೆಚ್ಚ 2,000 ಕೋಟಿ ರೂ. ಇದ್ದರೆ, ಯೋಜನೆ ಪೂರ್ಣವಾದಾಗ ಯೋಜನಾ ವೆಚ್ಚ 4,500 ಕೋಟಿ ರೂ. ಏರಿಕೆ ಆಗುತ್ತದೆ ಎಂದು ಶಿವಾನಂದ ಪಾಟೀಲ್ ಹೇಳಿದರು. ಇದನ್ನೂ ಓದಿ: ಹಿಂದುಳಿದ ವರ್ಗಗಳಿಗೆ ಅನ್ಯಾಯ ಆಗದಂತೆ ಜಿಪಂ,ತಾಪಂ ಚುನಾವಣೆ: ಈಶ್ವರಪ್ಪ

ಇನ್ನೊಂದೆಡೆ ವಿಧಾನಸಭೆಯಲ್ಲಿ ಇಲಾಖೆ ಬೇಡಿಕೆಗಳ ಮೇಲಿನ ಚರ್ಚೆಗೆ ಸಚಿವರ ಉತ್ತರದ ವೇಳೆ ನೀರಾವರಿ ಎಂದರೆ ಕೃಷ್ಣಾ ಮೇಲ್ದಂಡೆಯೇ? ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಪ್ರಸ್ತಾಪಿಸಿದರು. ಆಗ ಉತ್ತರ ಕರ್ನಾಟಕದ ಶಾಸಕರಿಂದ ಆಕ್ಷೇಪ ವ್ಯಕ್ತವಾಗಿ ಉತ್ತರ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗದ ಶಾಸಕರ ಮಧ್ಯೆ ವಾಗ್ವಾದ ನಡೆಯಿತು. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಏರಿದ ಧ್ವನಿಯಲ್ಲಿ ತರಾಟೆ ತೆಗೆದುಕೊಂಡ ಬಳಿಕ ಶಾಸಕ ಶಿವಲಿಂಗೇಗೌಡ ಸುಮ್ಮನಾದರು.

ಗೌಡರೇ ರಾಜ್ಯದ ಒಟ್ಟು ನೀರಾವರಿ ಯೋಜನೆಯ ಶೇ.57 ರಷ್ಟು ಕೃಷ್ಣಾ ಭಾಗ್ಯ ಜಲ ನಿಗಮದ ವ್ಯಾಪ್ತಿಯಲ್ಲಿ ಬರುತ್ತದೆ. ಮೈಸೂರು ಮಹಾರಾಜರು ಕನ್ನಂಬಾಡಿ ಕಟ್ಟಿ ಹೋಗಿದ್ದಕ್ಕೆ ನೀವು ಬದುಕಿದ್ದೀರಿ ಎಂದು ಶಾಸಕ ಶಿವಾನಂದ ಪಾಟೀಲ್ ತಿರುಗೇಟು ನೀಡಿದರು. ಆಗ ಮಧ್ಯ ಪ್ರವೇಶ ಮಾಡಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಗೌಡರೇ ನಮ್ಮದು ಎಲ್ಲ ಭಾಗವನ್ನೂ ಸಮಾನವಾಗಿ ನೋಡುತ್ತದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಈ ಬಾರಿ 5000, ಭದ್ರಾ ಮೇಲ್ದಂಡೆಗೆ 3000, ಎತ್ತಿನಹೊಳೆಗೆ 3000, ಮೇಕೆದಾಟು 1000, ಮಹದಾಯಿಗೆ 1000 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ವಿಧಾನಸಭೆಗೆ ರಾಗಿ ತಂದ ಶಾಸಕ: ಇಬ್ರಾಹಿಂ ನೋಡಿ ಕಿಚಾಯಿಸಿದ ಸಿದ್ದು

ಇದೇ ವೇಳೆ ಶಾಸಕ ಬಸನಗೌಡ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿ ಕೃಷ್ಣೆಯ ಕಣ್ಣೀರಿಗೆ ಕೊನೆ ಎಂದು? ಈ ಯೋಜನೆ ಪೂರ್ಣಗೊಳಿಸುವುದಕ್ಕೆ ಎಷ್ಟು ಶತಮಾನ ಬೇಕು? ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್‌ನಲ್ಲಿ ಮಾಡಿದ ರೀತಿ ಕೃಷ್ಣಾ ಯೋಜನೆ ಅಭಿವೃದ್ಧಿ ಮಾಡಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.

Share This Article
Leave a Comment

Leave a Reply

Your email address will not be published. Required fields are marked *