ಪ್ರೀತಿಯ ಭಾರತೀಯ ಸೇನೆ..; ವಯನಾಡಲ್ಲಿ ರಕ್ಷಣೆಗೆ ನಿಂತ ಸೈನಿಕರಿಗೆ ಪುಟ್ಟ ಬಾಲಕ ಸೆಲ್ಯೂಟ್‌

Public TV
2 Min Read

– ನಾನೂ ಭಾರತೀಯ ಸೇನೆ ಸೇರ್ತೀನಿ: ಯೋಧರಿಗೆ 3ನೇ ತರಗತಿ ಬಾಲಕನ ಹೃದಯಸ್ಪರ್ಶಿ ಪತ್ರ

ತಿರುವನಂತರಪುರಂ: ಭೂಕುಸಿತ ಪೀಡಿತ ಕೇರಳದ (Kerala) ವಯನಾಡ್‌ನಲ್ಲಿ (Wayanad) ಸೈನಿಕರ ರಕ್ಷಣಾ ಕಾರ್ಯಾಚರಣೆ ಮೆಚ್ಚಿ ಪುಟ್ಟ ಬಾಲಕನೊಬ್ಬ ಭಾರತೀಯ ಸೇನೆಗೆ ಹೃದಯಸ್ಪರ್ಶಿ ಪತ್ರ ಬರೆದಿದ್ದಾನೆ.

3ನೇ ತರಗತಿ ವಿದ್ಯಾರ್ಥಿ ಮಾಸ್ಟರ್‌ ರಾಯನ್‌, ಭಾರತೀಯ ಸೇನೆಗೆ (Indian Army) ಪತ್ರ ಬರೆದ ಹುಡುಗ. ಸೈನಿಕರ ರಕ್ಷಣಾ ಕಾರ್ಯಾಚರಣೆಯಿಂದ ಪ್ರೇರೇಪಿತನಾದ ಬಾಲಕ, ಮುಂದೊಂದು ದಿನ ತಾನೂ ಸೇನೆಗೆ ಸೇರಲು ಆಕಾಂಕ್ಷಿಯಾಗಿದ್ದೇನೆಂದು ಆಶಯ ವ್ಯಕ್ತಪಡಿಸಿದ್ದಾನೆ. ಇದನ್ನೂ ಓದಿ: ವಯನಾಡಿನಲ್ಲಿ ಸಾವಿನ ಸುರಿ`ಮಳೆ’ – ಗುರುತು ಸಿಗದಷ್ಟು ಛಿದ್ರಗೊಂಡಿರುವ ದೇಹಗಳು; ಶವಗಳ ಶೋಧಕ್ಕೆ ಶ್ವಾನಪಡೆ!

ಆತ್ಮೀಯ ಭಾರತೀಯ ಸೇನೆ, ನನ್ನ ಪ್ರೀತಿಯ ವಯನಾಡ್ ಭಾರಿ ಭೂಕುಸಿತದಿಂದ ಅಪ್ಪಳಿಸಿತು. ವಿನಾಶವನ್ನು ಸೃಷ್ಟಿಸಿತು. ಶಿಲಾಖಂಡರಾಶಿಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ನೀವು ರಕ್ಷಿಸುತ್ತಿರುವುದನ್ನು ನೋಡಿ ನನಗೆ ಹೆಮ್ಮೆ ಮತ್ತು ಸಂತೋಷವಾಯಿತು ಎಂದು ಮಲಯಾಳಂ ಭಾಷೆಯಲ್ಲಿ ಭಾರತೀಯ ಸೇನೆಗೆ ಬಾಲಕ ಪತ್ರ ಬರೆದು ಕೃತಜ್ಞತೆ ಸಲ್ಲಿಸಿದ್ದಾನೆ.

ಸಂತ್ರಸ್ತರ ಹಸಿವು ನೀಗಿಸುವ ಮತ್ತು ಸೇತುವೆಯನ್ನು ನಿರ್ಮಿಸುವ ವೀಡಿಯೊವನ್ನು ನಾನು ನೋಡಿದೆ. ಆ ದೃಶ್ಯವು ನನ್ನ ಎದೆಯಾಳಕ್ಕೆ ಇಳಿಯಿತು. ನಾನು ಮುಂದೊಂದು ದಿನ ಭಾರತೀಯ ಸೇನೆಗೆ ಸೇರಲು ಮತ್ತು ನನ್ನ ರಾಷ್ಟ್ರವನ್ನು ರಕ್ಷಿಸಲು ಆಶಿಸುತ್ತೇನೆ ಎಂದು ಬಾಲಕ ಪತ್ರದಲ್ಲಿ ಉಲ್ಲೇಖಿಸಿದ್ದಾನೆ. ಇದನ್ನೂ ಓದಿ: Wayanad LandSlides | ಕರ್ನಾಟಕದಿಂದ 100 ಮನೆ ನಿರ್ಮಾಣ: ಸಿದ್ದರಾಮಯ್ಯಗೆ ಕೃತಜ್ಞತೆ ಸಲ್ಲಿಸಿದ ರಾಹುಲ್‌

ಬಾಲಕನ ಕೃತಜ್ಞತೆಗೆ ಪ್ರತಿಕ್ರಿಯಿಸಿರುವ ಭಾರತೀಯ ಸೇನೆ ಧನ್ಯವಾದ ತಿಳಿಸಿದೆ. ‘ಯುವ ಯೋಧನಿಗೆ’ ಧನ್ಯವಾದ ಎಂದಿದೆ. ನಿಮ್ಮ ಮನದಾಳದ ಮಾತುಗಳು ನಮ್ಮನ್ನು ಆಳವಾಗಿ ಮುಟ್ಟಿವೆ. ಸಂಕಷ್ಟದ ಸಮಯದಲ್ಲಿ, ನಾವು ಭರವಸೆಯ ದಾರಿದೀಪವಾಗಲು ಗುರಿ ಹೊಂದಿದ್ದೇವೆ. ನಿಮ್ಮ ಪತ್ರವು ಈ ಧ್ಯೇಯವನ್ನು ಪುನರುಚ್ಚರಿಸಿದೆ. ನಿಮ್ಮಂತಹ ವೀರರು ನಮ್ಮ ಕೈಲಾದದ್ದನ್ನು ನೀಡಲು ನಮಗೆ ಸ್ಫೂರ್ತಿ ನೀಡುತ್ತಾರೆ. ನೀವು ಸಮವಸ್ತ್ರವನ್ನು ಧರಿಸಿ ನಮ್ಮೊಂದಿಗೆ ನಿಲ್ಲುವ ದಿನಕ್ಕಾಗಿ ನಾವು ಕುತೂಹಲದಿಂದ ಕಾಯುತ್ತಿದ್ದೇವೆ. ಒಟ್ಟಾಗಿ, ನಾವು ನಮ್ಮ ದೇಶದ ಬಗ್ಗೆ ಹೆಮ್ಮೆಪಡುತ್ತೇವೆ. ಯುವ ಯೋಧರೇ, ನಿಮ್ಮ ಧೈರ್ಯ ಮತ್ತು ಸ್ಫೂರ್ತಿಗಾಗಿ ಧನ್ಯವಾದಗಳು ಎಂದು ಬಾಲಕನ ಪತ್ರಕ್ಕೆ ಭಾರತೀಯ ಸೇನೆ ಪ್ರತಿಕ್ರಿಯಿಸಿದೆ.

ಮಂಗಳವಾರ ಮುಂಜಾನೆ ದೇವರ ನಾಡು ಕೇರಳದ ವಯನಾಡಿನಲ್ಲಿ ಸಂಭವಿಸಿದ ಅವಳಿ ಭೂಕುಸಿತಕ್ಕೆ 200ಕ್ಕೂ ಹೆಚ್ಚು ಜನರು ಬಲಿಯಾದರು. ಸಾವಿನ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು, ಭಾರತೀಯ ಸೇನೆಯು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ರಕ್ಷಣಾ ಸಿಬ್ಬಂದಿಯಲ್ಲಿ 500 ಕ್ಕೂ ಹೆಚ್ಚು ಸೈನಿಕರನ್ನು ಹೊಂದಿರುವ ಸೇನಾ ತಂಡಗಳು ಭೂಕುಸಿತದಿಂದ ಹಾನಿಗೊಳಗಾದ ಭಾಗಗಳಲ್ಲಿ ರಕ್ಷಣಾ ಕಾರ್ಯ ಕೈಗೊಂಡಿವೆ. ಇದನ್ನೂ ಓದಿ: Wayanad Landslides | ಪ್ರತಿ ವರ್ಷ ಮೆಪ್ಪಾಡಿಯಲ್ಲಿ ತಲೆ ಎತ್ತುತ್ತಿವೆ 380 ಹೊಸ ಕಟ್ಟಡಗಳು

Share This Article