– ʻಪಬ್ಲಿಕ್ ಟಿವಿʼ ನಿರಂತರ ವರದಿ ಬಳಿಕ ಡೆಡ್‌ಲೈನ್ ಫಿಕ್ಸ್
ಬೆಂಗಳೂರು: ನಗರದಲ್ಲಿ ಗುಂಡಿ ಗಂಡಾಂತರದ ಬಗ್ಗೆ ʻಪಬ್ಲಿಕ್ ಟಿವಿʼ (Public TV) ನಿರಂತರ ವರದಿ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ರಸ್ತೆ ಗುಂಡಿಗಳನ್ನ ಮುಚ್ಚಲು ಡೆಡ್‌ಲೈನ್ ಫಿಕ್ಸ್ ಮಾಡಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದನ್ನ ಹಂಚಿಕೊಂಡಿದ್ದಾರೆ. ʻಬೆಂಗಳೂರಿನ ರಸ್ತೆ ಗುಂಡಿಗಳ (Road Potholes) ಸಮಸ್ಯೆಯನ್ನು ಬಗೆಹರಿಸಲು ನವೆಂಬರ್ ಒಳಗೆ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗುತ್ತಿಗೆದಾರರಿಗೆ ಅಂತಿಮ ಗಡುವು ನೀಡಲಾಗಿದೆ. ಸ್ವಚ್ಛ ಬೆಂಗಳೂರು ಹಾಗೂ ಸುಗಮ ಸಂಚಾರವೇ ನಮ್ಮ ಗುರಿಯಾಗಿರುವುದರಿಂದ ಆದಷ್ಟು ಬೇಗ ರಸ್ತೆ ಗುಂಡಿಗಳಿಗೆ ಜಿಬಿಎ ಮುಕ್ತಿ ನೀಡಲಿದೆ ಎಂದು ತಿಳಿಸಿದ್ದಾರೆ.
ಹೆಜ್ಜೆಹೆಜ್ಜೆಗೂ ಗುಂಡಿಗಳು.. ಅಂಕು ಡೊಂಕಿನ ರಸ್ತೆಗಳು!
ಯೆಸ್. ಬೆಂಗಳೂರಿನಲ್ಲಿ ಅದೇಕೋ ಗುಂಡಿ ಗಂಡಾಂತರ ತಪ್ಪುವ ಲಕ್ಷಣವೇ ಕಾಣುತ್ತಿಲ್ಲ. ಹೆಜ್ಜೆ ಹೆಜ್ಜೆಗೂ ಗುಂಡಿಗಳು ಕಣ್ಣಿಗೆ ರಾಚುತ್ತಿವೆ. ವಾಹನ ಸವಾರರು ರಸ್ತೆಯಲ್ಲಿ ಸರ್ಕಸ್ ರೀತಿ ಸಂಚರಿಸುವಂತಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನವನ್ನ ಗುಂಡಿಗಳು ಹರಾಜು ಹಾಕ್ತಿವೆ. ಬಿಬಿಎಂಪಿಯಿಂದ ಗ್ರೇಟರ್ ಬೆಂಗಳೂರು ಆಗಿ ಬದಲಾದ್ರೂ ರಸ್ತೆಗುಂಡಿಗಳ ಹಾವಳಿ ತಪ್ಪುತ್ತಿಲ್ಲ. ಗ್ರೇಟರ್ ಬೆಂಗಳೂರು ರಸ್ತೆಗುಂಡಿಗಳಲ್ಲೂ ಗ್ರೇಟಾಗಿದೆ ಅನ್ನೋದರಲ್ಲಿ ತಪ್ಪೇನಿಲ್ಲ. ಈ ರಸ್ತೆ ಗುಂಡಿ ವಿಚಾರದಲ್ಲಿ `ಪಬ್ಲಿಕ್ ಟಿವಿ’ ವಿಸ್ತೃತ ವರದಿ ಪ್ರಸಾರ ಮಾಡುತ್ತಲೇ ಬಂದಿದೆ. ಈಗ ರಸ್ತೆ ಗುಂಡಿಯಿಂದ ರೋಸಿ ಹೋಗಿ ಕಂಪನಿಗಳು ಬೆಂಗಳೂರು ತೊರೆಯುವ ಆತಂಕ ಮೂಡಿಸಿವೆ.
ಬೆಂಗಳೂರು ರಸ್ತೆ ಗುಂಡಿ ವಿರುದ್ಧ ಉದ್ಯಮಿಗಳ ಆಕ್ರೋಶ
ಬೆಂಗಳೂರು ನಗರದ ರಸ್ತೆ ಗುಂಡಿಗಳ ಬಗ್ಗೆ ಸಣ್ಣ ಮಕ್ಕಳನ್ನ ಕೇಳಿದ್ರೂ ಬೇಸರ ವ್ಯಕ್ತಪಡಿಸ್ತಾರೆ. ಆ ಮಟ್ಟಿಗೆ ನರಕಯಾತನೆ ಬೆಂಗಳೂರಿನ ಜನ ಅನುಭವಿಸುತ್ತಿದ್ದಾರೆ. ಈಗ ರಸ್ತೆ ಗುಂಡಿಗಳಿಂದಾಗಿ ಎಂಎನ್‌ಸಿ ಕಂಪನಿಗಳು ಬೆಂಗಳೂರಿನಿಂದ ದೂರ ದೂರ ಆಗುವ ಆತಂಕ ಮೂಡಿದೆ. ಇದಕ್ಕೆ ಕಾರಣವಾಗಿದ್ದು ಬ್ಲಾಕ್ ಬಕ್ ಕಂಪನಿ ಸಿಇಒ ರಾಜೇಶ್ ಯಬಜಿ ಎಕ್ಸ್ ಖಾತೆಯಲ್ಲಿ ಮಾಡಿದ ಒಂದು ಟ್ವೀಟ್. ದಿನದ ಅರ್ಧ ದಿನ ನಮ್ಮ ಕಂಪನಿ ಸಿಬ್ಬಂದಿ ರಸ್ತೆಯಲ್ಲೇ ಕಳೆಯುವಂತಾಗಿದೆ. ಈಗ ರಸ್ತೆಗುಂಡಿ, ಧೂಳು.. ಟ್ರಾಫಿಕ್ ಜಾಮ್ ಇವೆಲ್ಲದ್ರಿಂದ ಶಿಫ್ಟ್ ಆಗುವಂತಾಗಿದೆ. ಕಳೆದ 5 ವರ್ಷದಿಂದ ಯಾವುದೇ ಬದಲಾವಣೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರು. ಇನ್ನು ಉದ್ಯಮಿ ಕಿರಣ್ ಮಜುಂದಾರ್ ಶಾ, ಉದ್ಯಮಿ ಮೋಹನ್‌ದಾಸ್ ಪೈ ಸಹ ಟ್ವೀಟ್ ಮಾಡಿ ರಸ್ತೆ ಗುಂಡಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಗುಂಡಿ ಮುಚ್ಚಲು ಕೋಟಿ ಕೋಟಿ ರಿಲೀಸ್.. ಏನಾಯ್ತು..?
ಬೆಂಗಳೂರಿನಲ್ಲಿ ಬರೀ 10 ಸಾವಿರ ಗುಂಡಿ ಇದೆ ಅಂತ ಡಿಸಿಎಂ ಡಿಕೆಶಿ ಹೇಳಿದ್ರು. ಈವರೆಗೆ 6 ಸಾವಿರ ಗುಂಡಿ ಮುಚ್ಚಿದ್ದೇವೆ. 4 ಸಾವಿರ ಗುಂಡಿ ಮುಚ್ಚುತ್ತೇವೆ ಎಂದಿದ್ರು. ಈ ತಿಂಗಳಲ್ಲೇ ಮುಚ್ಚುತ್ತೇವೆ ಅಂದಿದ್ದರು. ಆದರೆ ಬೆಂಗಳೂರಿನಲ್ಲಿ ಹೆಜ್ಜೆಹೆಜ್ಜೆಗೂ ರಸ್ತೆಗುಂಡಿಗಳ ದರ್ಬಾರ್ ನಡೀತಿದೆ. ಹಾಗಾದ್ರೆ ಕೋಟಿ ಕೋಟಿ ಬಿಡುಗಡೆ ಆಗಿದ್ದ ಹಣ ಏನಾಯ್ತು.. ರಸ್ತೆಗುಂಡಿ ಗಳ ಬಗ್ಗೆ ಸರ್ಕಾರಕ್ಕೆ ಇಷ್ಟೊಂದು ನಿರ್ಲಕಷ್ಯನಾ? ಡಿಸಿಎಂ ಡಿಕೆಶಿ ಸರ್ಕಾರಿ ನಿವಾಸದ ಕೂಗಳತೆ ದೂರದಲ್ಲೇ ಗುಂಡಿಬಿದ್ದ ರಸ್ತೆಗಳು ಕಂಡುಬಂದಿವೆ.
ಈ ಬಗ್ಗೆ ಪಬ್ಲಿಕ್ ಟಿವಿ ನಿರಂತರ ವರದಿ ಪ್ರಸಾರ ಮಾಡುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿದೆ.