ಉತ್ತರಾಖಂಡದಲ್ಲಿ ಸಾವನ್ನಪ್ಪಿದ 9 ಚಾರಣಿಗರ ಮೃತದೇಹಗಳು ಚಾರ್ಟರ್ ಫ್ಲೈಟ್ ಮೂಲಕ ಬೆಂಗಳೂರಿಗೆ: ಕೃಷ್ಣಬೈರೇಗೌಡ

Public TV
3 Min Read

ಬೆಂಗಳೂರು: ಹಿಮಪಾತದಿಂದ ಉತ್ತರಾಖಂಡದ (Uttarakhand) ಉತ್ತರಕಾಶಿ (Uttarkashi) ಜಿಲ್ಲೆಯ ಸಹಸ್ತ್ರತಾಲ್ ಚಾರಣಕ್ಕೆ (Trekking) ತೆರಳಿದ್ದ 20 ಜನರ ಪೈಕಿ 9 ಮಂದಿ ಸಾವನ್ನಪ್ಪಿದ್ದು, ಮೃತ ಚಾರಣಿಗರ ಮೃತದೇಹವನ್ನು ಚಾರ್ಟರ್ ಫ್ಲೈಟ್ (Charter Flight) ಮೂಲಕ ಬೆಂಗಳೂರಿಗೆ ರವಾನಿಸುವ ಸಲುವಾಗಿ ಉತ್ತರಾಖಂಡ ಮುಖ್ಯಕಾರ್ಯದರ್ಶಿ ರಾಧಾ ರಾತುರಿ ಅವರ ಜೊತೆ ಕೃಷ್ಣಬೈರೇಗೌಡ (Krishna Byre Gowda) ಮಾತುಕತೆ ನಡೆಸಿದ್ದಾರೆ. ಮಾತುಕತೆ  ಬಳಿಕ ಉತ್ತರಾಖಂಡ ಮುಖ್ಯಕಾರ್ಯದರ್ಶಿ ಚಾರ್ಟರ್ ಫ್ಲೈಟ್ ಮೂಲಕ ಮೃತದೇಹವನ್ನು ಸಾಗಿಸಲು ಒಪ್ಪಿಕೊಂಡಿದ್ದಾರೆ ಎಂದು ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಉತ್ತರಕಾಶಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಬೆಳಗ್ಗೆ 11 ಗಂಟೆಗೆ ಎಲ್ಲಾ 9 ಮೃತದೇಹಗಳನ್ನು ವಿಮಾನದಲ್ಲಿ ಡೆಹ್ರಾಡೂನ್‌ಗೆ ತರಲಾಗುವುದು. ಡೆಹ್ರಾಡೂನ್‌ನಲ್ಲಿ ಎಂಬಾಮಿಂಗ್ ಮಾಡಲಾಗುವುದು. ಎಲ್ಲಾ 9 ಶವಗಳನ್ನು ಬೆಂಗಳೂರಿಗೆ ಸಾಗಿಸಲು ನಾವು ಚಾರ್ಟರ್ ಫ್ಲೈಟ್ ಅನ್ನು ಗುರುತಿಸುತ್ತಿದ್ದೇವೆ. ನಾನೀಗ ಉತ್ತರಾಖಂಡದ ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಲು ಹೊರಟಿದ್ದೇನೆ. ಮುಖ್ಯ ಕಾರ್ಯದರ್ಶಿಯವರೊಂದಿಗಿನ ನನ್ನ ಸಭೆಯ ನಂತರ ಮೃತದೇಹಗಳ ರವಾನೆಯ ಬಗ್ಗೆ ಸ್ಪಷ್ಟತೆ ನೀಡಬಹುದು ಎಂದು ನಾನು ಭಾವಿಸುತ್ತೇನೆ ಎಂದು ಕೃಷ್ಣಬೈರೇಗೌಡ ಎಕ್ಸ್‌ನಲ್ಲಿ ಟ್ವೀಟ್ ಮಾಡಿ ತಿಳಿಸಿದ್ದರು.

ಉತ್ತರಾಖಂಡದಲ್ಲಿ ಹವಾಮಾನ ವೈಪರೀತ್ಯದಿಂದ ಸಾವನ್ನಪ್ಪಿದ ನಾಲ್ವರ ಮೃತದೇಹಗಳು ಪತ್ತೆಯಾಗಿದ್ದು, ಮೃತರನ್ನು ಪದ್ಮನಾಭ ಕೆ.ಪಿ, ವೆಂಕಟೇಶ್ ಪ್ರಸಾದ್ ಕೆ, ಅನಿತಾ ರಂಗಪ್ಪ, ಪದ್ಮಿನಿ ಹೆಗಡೆ ಎಂದು ಗುರುತಿಸಲಾಗಿದೆ. ಇನ್ನು ಬುಧವಾರ 8 ಜನ ಚಾರಣಿಗರನ್ನು ರಕ್ಷಿಸಿದ್ದು, ಸುರಕ್ಷಿತವಾಗಿ ಡೆಹ್ರಾಡೂನ್‌ಗೆ ಸ್ಥಳಾಂತರಿಸಲಾಗಿದೆ.

ಎಸ್‌ಡಿಆರ್‌ಎಫ್‌ನಿಂದ ಸುರಕ್ಷಿತವಾಗಿ ರಕ್ಷಿಸಲ್ಪಟ್ಟ 11 ಚಾರಣಿಗರ ವಿವರ:
ಜೈ ಪ್ರಕಾಶ್ ವಿ.ಎಸ್ (61), ಗಿರಿನಗರ ಬೆಂಗಳೂರು ನಿವಾಸಿ
ಭರತ್ ವಿ (53), ಹಂಪಿನಗರ, ಬೆಂಗಳೂರು ನಿವಾಸಿ
ಅನೀಲ್ ಭಟ್ (52), ನಿವಾಸಿ ಜೋಪ್ ನಗರ ಬೆಂಗಳೂರು
ಮಧುಕಿರಣ್ ರೆಡ್ಡಿ (52), ಬೆಂಗಳೂರು ನಿವಾಸಿ
ಶೀನ ಲಕ್ಷ್ಮಿ (48), ಕೆ.ಆರ್.ಪುರಂ ಬೆಂಗಳೂರು ನಿವಾಸಿ
ಶೌಮ್ಯಾ ಕೆ (31), ಬೆಂಗಳೂರು ನಿವಾಸಿ
ಶಿವ ಜ್ಯೋತಿ (45), ಹೆಚ್‌ಎಸ್‌ಆರ್ ಬೆಂಗಳೂರು ನಿವಾಸಿ
ಸ್ಮೂರ್ತಿ ಪ್ರಕಾಶ್ ಡೋಲಾಸ್ (45), ಮಹಾರಾಷ್ಟ್ರದ ಪುಣೆ ನಿವಾಸಿ
ವಿನಾಯಕ್ ಎಂ.ಕೆ (47), ರೆಸಿಡೆಂಟ್ ಪ್ರೆಸ್ಟೀಜ್ ಸಿಟಿ, ಬೆಂಗಳೂರು
ಶ್ರೀರಾಮಲ್ಲು ಸುಧಾಕರ್ (64), ಬೆಂಗಳೂರು ಎಸ್‌ಆರ್‌ಕೆ ನಗರ ನಿವಾಸಿ
ವಿವೇಕ್ ಶ್ರೀಧರ್ (37), ಬೆಂಗಳೂರು,

ಸೌಮ್ಯಾ ಕೆನಾಲೆ, ಸ್ಮೃತಿ ಡೋಲಾಸ್, ಶೀನಾ ಲಕ್ಷ್ಮಿ, ಎಸ್ ಶಿವಜ್ಯೋತಿ, ಅನಿಲ್ ಜಮತಿಗೆ ಅರುಣಾಚಲ ಭಟ್, ಭರತ್ ಬೊಮ್ಮನ ಗೌಡರ್, ಮಧು ಕಿರಣ್ ರೆಡ್ಡಿ, ಜೈಪ್ರಕಾಶ್ ಬಿಎಸ್ ಎಂಬವರನ್ನು ಸುರಕ್ಷಿತವಾಗಿ ಡೆಹ್ರಾಡೂನ್‌ಗೆ ಸ್ಥಳಾಂತರಿಸಲಾಗಿದೆ. ಎಸ್ ಸುಧಾಕರ್, ವಿನಯ್ ಎಂಕೆ, ವಿವೇಕ್ ಶ್ರೀಧರ್, ನವೀನ್ ಎ, ರಿತಿಕಾ ಜಿಂದಾಲ್ ಎಂಬ 5 ಚಾರಣಿಗರನ್ನು ಕೂಡ ರಕ್ಷಿಸಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಉತ್ತರಕಾಶಿಯಿಂದ ಡೆಹ್ರಾಡೂನ್‌ಗೆ ವಿಮಾನದಲ್ಲಿ ಕಳುಹಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಬುಧವಾರ ಉತ್ತರಕಾಶಿಗೆ ರವಾನಿಸಿದ ಮೃತದೇಹಗಳು:
ಬುಧವಾರ ನಡೆಸಿದ ಕಾರ್ಯಾಚರಣೆಯಲ್ಲಿ ಐವರು ಚಾರಣಿಗರ ಮೃತದೇಹಗಳನ್ನು ವಿಮಾನದ ಮೂಲಕ ಉತ್ತರಕಾಶಿಗೆ ರವಾನಿಸಲಾಗಿದೆ. ಮೃತರನ್ನು ಸಿಂಧು ವಕೆಲಂ, ಆಶಾ ಸುಧಾಕರ್, ಸುಜಾತಾ ಮುಂಗುರವಾಡಿ, ವಿನಾಯಕ ಮುಂಗುರವಾಡಿ ಹಾಗೂ ಚಿತ್ರಾ ಪ್ರಣೀತ್ ಎಂದು ಗುರುತಿಸಲಾಗಿದೆ.

ಜೂನ್ 3 ರಂದು ಇಬ್ಬರು ಚಾರಣಿಗರು ಮುಖ್ಯ ತಂಡದಿಂದ ಬೇರ್ಪಟ್ಟು ಚಾರಣದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಅವರು ಅಪಾಯದಿಂದ ಪಾರಾಗಿದ್ದಾರೆ. ಆದರೆ, ಅದೇ ದಿನ ಬೆಳಗ್ಗೆ 20 ಚಾರಣಿಗರು ಮತ್ತು ಆ ತಂಡದ ಮಾರ್ಗದರ್ಶಿಯನ್ನೊಳಗೊಂಡ ತಂಡ ಲ್ಯಾಂಬ್ಟಾಲ್ ಕ್ಯಾಂಪ್ ಸೈಟ್‌ನಿಂದ ಸಹಸ್ರತಾಲ್‌ಗೆ ತೆರಳಿದೆ. ಚಾರಣದ ಗಮ್ಯ ತಲುಪಿ ವಾಪಸ್ ಶಿಬಿರಕ್ಕೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ, ಶಿಬಿರದಿಂದ ಸುಮಾರು ಒಂದೂವರೆ ಅಥವಾ ಎರಡು ಗಂಟೆಗಳ ದೂರದಲ್ಲಿದ್ದಾಗ, ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಹಿಮಪಾತ ಪ್ರಾರಂಭವಾಗಿದೆ.

Share This Article