ಪೊಲೀಸ್ ಇತಿಹಾಸದಲ್ಲಿ ಫಸ್ಟ್ ಟೈಂ – ಠಾಣೆಯ 71 ಸಿಬ್ಬಂದಿ ಒಂದೇ ಬಾರಿಗೆ ವರ್ಗಾವಣೆ!

Public TV
2 Min Read

– ಸಿಬ್ಬಂದಿಯ ಗುಂಪುಗಾರಿಕೆ ವಿರುದ್ಧ ಅಣ್ಣಾಮಲೈ ಫುಲ್ ಗರಂ
– ವರ್ಗಾವಣೆ ವಿಚಾರ ತಿಳಿದು ಹೆಡ್ ಕಾನ್‍ಸ್ಟೇಬಲ್ ಹೃದಯಾಘಾತದಿಂದ ಸಾವು

ಬೆಂಗಳೂರು: ಠಾಣೆಯ ಒಳಗಡೆ ಜಗಳ ನಡೆದಾಗ ಮೂರು, ನಾಲ್ಕು ಸಿಬ್ಬಂದಿಯನ್ನು ವರ್ಗಾವಣೆ ಮಾಡುವುದು ಸಾಮಾನ್ಯ. ಆದರೆ ದಕ್ಷಿಣ ವಲಯ ಡಿಸಿಪಿ ಅಣ್ಣಾಮಲೈ ಪೊಲೀಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಎನ್ನುವಂತೆ ಕುಮಾರಸ್ವಾಮಿ ಲೇಔಟ್ ಠಾಣೆಯ 71 ಸಿಬ್ಬಂದಿಯನ್ನು ಒಂದೇ ಬಾರಿ ವರ್ಗಾವಣೆ ಮಾಡಿದ್ದಾರೆ.

ಮಹಿಳೆಯೊಬ್ಬರ ಮೇಲೆ ಪೊಲೀಸರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯ ಸಬ್ ಸಬ್ ಇನ್ಸ್‌ಪೆಕ್ಟರ್ ಒಬ್ಬರನ್ನು ಬಿಟ್ಟು ಎಲ್ಲಾ ಸಿಬ್ಬಂದಿಯನ್ನು ಅಣ್ಣಾಮಲೈ ವರ್ಗಾವಣೆ ಮಾಡಿದ್ದಾರೆ. ಈ ಮೂಲಕ ಠಾಣೆಯಲ್ಲಿ ಗುಂಪುಗಾರಿಕೆ ಮಾಡುವ ಸಿಬ್ಬಂದಿಗೆ ತಕ್ಕ ಪಾಠ ಕಲಿಸಿದ್ದಾರೆ ಎನ್ನುವ ಮಾತು ಪೊಲೀಸ್ ವಲಯದಲ್ಲಿ ಕೇಳಿ ಬಂದಿದೆ.

ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಜನವರಿ 20ರಂದು ನಡೆದ ಘಟನೆಯ ಸಂಬಂಧ ಇಬ್ಬರನ್ನು ಅಮಾನತು ಮಾಡಲಾಗಿದೆ. ಒಂದೇ ಬಾರಿಗೆ ವರ್ಗಾವಣೆಗೊಂಡ ವಿಚಾರ ತಿಳಿದು ಹೆಡ್ ಕಾನ್‍ಸ್ಟೇಬಲ್ ನಡಾಫ್ (52) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದನ್ನು ಓದಿ: ಬೆಳ್ಳಂಬೆಳಗ್ಗೆ ರೌಡಿಶೀಟರ್​ಗಳಿಗೆ ಬಿಸಿ ಮುಟ್ಟಿಸಿದ ಡಿಸಿಪಿ ಅಣ್ಣಾಮಲೈ

ಏನಿದು ಪ್ರಕರಣ:
ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಹೋಟೆಲ್‍ವೊಂದರಲ್ಲಿ ಜನವರಿ 20ರಂದು ಆಂಧ್ರದಿಂದ ಬಂದಿದ್ದ ಜನರು ಒಂದು ಹುಡುಗಿಯ ಜೊತೆ ಗಲಾಟೆ ಮಾಡಿದ್ದರು. ಅಷ್ಟೇ ಅಲ್ಲದೇ ಹುಡುಗಿಯನ್ನು ಕಿಡ್ನಾಪ್ ಮಾಡಲು ಪ್ರಯತ್ನಿಸಿದ್ದರು. ಹೀಗಾಗಿ ಪೊಲೀಸರು ಹುಡುಗಿಯನ್ನು ಕಾಪಾಡಿ ಠಾಣೆಗೆ ಕರೆದುಕೊಂಡು ಬಂದು ರಕ್ಷಣೆ ನೀಡಿದ್ದರು.

ಹುಡುಗಿಯ ತಾಯಿ ಮತ್ತು ಕುಟುಂಬವರು ಪೊಲೀಸ್ ಠಾಣೆಗೆ ಬಂದು, ಹುಡುಗಿಯನ್ನು ನಮ್ಮ ಜೊತೆ ಕಳುಹಿಸಿ, ಇಲ್ಲವಾದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಗಲಾಟೆ ಮಾಡುತ್ತಿದ್ದರು. ಆಗ ಪೊಲೀಸರು ಹುಡುಗಿ ಮೇಜರ್ ಇದ್ದಾರೆ. ಆಕೆಗೆ ನಿಮ್ಮ ಜೊತೆ ಬರುವುದಕ್ಕೆ ಇಷ್ಟಪಡುತ್ತಿಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ನಾವು ಆಕೆಯನ್ನು ನಿಮ್ಮ ಜೊತೆಗೆ ಕಳುಹಿಸಿ ಕೊಡುವುದಿಲ್ಲವೆಂದು ಹೇಳಿದ್ದರು. ಆಗ ಹುಡುಗಿಯ ತಾಯಿ ಮಹಿಳಾ ಪೊಲೀಸರನ್ನು ತಳ್ಳಿ ಒಳಗೆ ಹೋಗಲು ಪ್ರಯತ್ನ ಮಾಡಿದ್ದರು. ಈ ವೇಳೆ ಎಎಸ್‍ಐ ಬಂದು ಮಹಿಳೆಗೆ ಹೊಡೆದಿದ್ದರು. ಹೀಗಾಗಿ ಎಎಸ್‍ಐ ಹಾಗೂ ಮತ್ತೊಬ್ಬ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಿದ್ದರು. ಇದನ್ನು ಓದಿ: ಅಣ್ಣಾಮಲೈ ಅಧಿಕಾರ ಸ್ವೀಕಾರ- ನಾನು ಈಗ ಮಗು ಆಗಿದ್ದೀನಿ ಎಂದ್ರು ಡಿಸಿಪಿ

ಠಾಣೆಯಲ್ಲಿ ಗುಂಪುಗಾರಿಕೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಅಣ್ಣಾಮಲೈ ಅವರಿಗೆ ಸಿಕ್ಕಿತ್ತು. ಅಷ್ಟೇ ಅಲ್ಲದೆ ಮಹಿಳೆಯ ಮೇಲೆ ಹಲ್ಲೆ ಪ್ರಕರಣದಲ್ಲಿ ಎರಡು ಠಾಣೆಯಲ್ಲಿದ್ದ ಎರಡು ಗುಂಪಿನ ಮಧ್ಯೆ ಗಲಾಟೆ ಕೂಡ ಆಗಿತ್ತು. ಕೆಲ ತಿಂಗಳುಗಳ ಹಿಂದೆ ಠಾಣಾಧಿಕಾರಿಯನ್ನು ಸಸ್ಪೆಂಡ್ ಮಾಡಿಸಲು ಪೇದೆಗಳು ರೈಫಲ್‍ಗಳನ್ನು ಕದ್ದು ಮುಚ್ಚಿಟ್ಟಿದ್ದ ವಿಚಾರ ಬೆಳಕಿಗೆ ಬಂದಿತ್ತು. ಜೊತೆಗೆ ಠಾಣೆಯ ವಾಟ್ಸಾಪ್ ಗ್ರೂಪ್‍ನಲ್ಲಿ ಇತ್ತೀಚೆಗೆ ಸಿಬ್ಬಂದಿ ಪರಸ್ಪರ ಬೈದಾಡಿಕೊಂಡಿದ್ದರು. ಈ ಎಲ್ಲ ಅಹಿತಕರ ಬೆಳವಣಿಗೆ ಹಿನ್ನೆಲೆಯಲ್ಲಿ ಅಣ್ಣಾಮಲೈ ಒಂದೇ ಬಾರಿಗೆ 71 ಮಂದಿಯನ್ನು ವರ್ಗಾವಣೆ ಗೊಳಿಸಿದ್ದಾರೆ.

https://youtu.be/EdrGZ73DjtE

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *