ಚನ್ನಪಟ್ಟಣ ಕೈವಶಕ್ಕೆ ಡಿಸಿಎಂ ರಣತಂತ್ರ; ಒಂದೇ ವೇದಿಕೆಯಲ್ಲಿ ಡಿಕೆಶಿ-ಸಿಪಿವೈ ಸಮಾಗಮ

Public TV
2 Min Read

ರಾಮನಗರ: ಚನ್ನಪಟ್ಟಣ (Channapatna) ಉಪಚುನಾವಣೆ ಕಣ ರಂಗೇರಿದ್ದು, ಕ್ಷೇತ್ರ ಗೆಲ್ಲಲು ಡಿಸಿಎಂ ಡಿಕೆಶಿ (DK Shivakumar) ಇನ್ನಿಲ್ಲದ ತಂತ್ರ ನಡೆಸಿದ್ದಾರೆ. ಚನ್ನಪಟ್ಟಣದ ಸ್ವಾತಂತ್ರ‍್ಯ ದಿನಾಚರಣೆ (Independence Day) ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಹೆಚ್‌ಡಿಕೆಗೆ (HD Kumaraswamy) ಟಾಂಗ್ ಕೊಟ್ಟ ಡಿಕೆಶಿ, ಕ್ಷೇತ್ರದ ಮತದಾರರ ಓಲೈಕೆಗೂ ಮುಂದಾಗಿದ್ದಾರೆ. ಜೊತೆಗೆ ಇಂದು ಡಿಕೆಶಿ ಜೊತೆ ಮಾಜಿ ಸಚಿವ, ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್ ವೇದಿಕೆ ಹಂಚಿಕೊಂಡಿದ್ದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಚುನಾವಣೆ ಘೋಷಣೆಗೂ ಮುನ್ನವೇ ಚನ್ನಪಟ್ಟಣದಲ್ಲಿ ಉಪಚುನಾವಣೆ ಕಾವು ಹೆಚ್ಚಾಗಿದೆ. ಶತಾಯಗತಾಯವಾಗಿ ಕ್ಷೇತ್ರ ಗೆಲ್ಲಲು ನಿರಂತರ ಪ್ರವಾಸ ಕೈಗೊಳ್ಳುತ್ತಿರುವ ಡಿಸಿಎಂ ಡಿಕೆಶಿ ಇಂದೂ ಕೂಡಾ ಚನ್ನಪಟ್ಟಣದ ಸ್ವಾತಂತ್ರ‍್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಧ್ವಜಾರೋಹಣ ನೆರವೇರಿಸಿದರು. ಈ ಮೂಲಕ ಈ ಹಿಂದೆ 6 ವರ್ಷ ಕ್ಷೇತ್ರದ ಶಾಸಕರಾಗಿದ್ದ ಕೇಂದ್ರ ಸಚಿವ ಹೆಚ್‌ಡಿಕೆ ಒಂದು ಬಾರಿಯೂ ಕ್ಷೇತ್ರದಲ್ಲಿ ಧ್ವಜಾರೋಹಣ ಮಾಡಿಲ್ಲ ಎಂಬ ವಿಚಾರವನ್ನು ಇಟ್ಟುಕೊಂಡು ಹೆಚ್‌ಡಿಕೆಗೆ ಟಕ್ಕರ್ ಕೊಟ್ಟರು. ಇದನ್ನೂ ಓದಿ: ಗುಂಡಿ ಮುಚ್ಚುವಂತೆ ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ಮನವಿ – ಸಚಿವರಿಗೆ ಹೀಗಾದ್ರೆ ಸಾಮಾನ್ಯರ ಕತೆ ಏನು?

ಧ್ವಜಾರೋಹಣದ ಬಳಿಕ ಮಾತನಾಡಿದ ಡಿಸಿಎಂ ಡಿಕೆಶಿ, ಸ್ವಾತಂತ್ರ‍್ಯೋತ್ಸವದ ಭಾಷಣದಲ್ಲೂ ಕುಮಾರಸ್ವಾಮಿಗೆ ಟಾಂಗ್ ನೀಡಿದರು. ಇಂದು ನನ್ನ ರಾಜಕೀಯ ಬದುಕಿನಲ್ಲಿ ಬಹಳ ಪವಿತ್ರ ದಿನ. 78ನೇ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮ ನಡೆಯುತ್ತಿದೆ. ನಿಮ್ಮೆಲ್ಲರಿಗೂ ಸ್ವಾತಂತ್ರ‍್ಯೋತ್ಸವದ ಶುಭಕೋರಲು ಬಂದಿದ್ದೇನೆ. ಜಿಲ್ಲೆಗೆ ‘ಬೆಂಗಳೂರು ದಕ್ಷಿಣ’ ಎಂಬ ಹೆಸರು ಬದಲಾವಣೆ ಆಗುತ್ತಿದೆ. ನಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಕೆಲಸ ಆಗುತ್ತಿದೆ. ಹಾಗಾಗಿ ಇಂದು ಚನ್ನಪಟ್ಟಣಕ್ಕೆ ಬಂದು ಧ್ವಜಾರೋಹಣ ಮಾಡುತ್ತಿದ್ದೇನೆ. ನಾನು ನಿಮ್ಮನ್ನು ಬಿಟ್ಟುಹೋಗುವ ಪ್ರಶ್ನೆಯೇ ಇಲ್ಲ. ಧ್ವಜವನ್ನು ಅರ್ಧಕ್ಕೆ ಹಾರಿಸಿದರೆ ಅದು ಅಗೌರವ. ಹಾಗೆಯೇ ಜನರನ್ನು ಅರ್ಧಕ್ಕೆ ಬಿಟ್ಟು ಹೋಗೋದು ಅಗೌರವ. ಈ ಜಿಲ್ಲೆಯಲ್ಲಿ ಹುಟ್ಟಿದ್ದೇವೆ. ಈ ಜನರ ಅಭಿವೃದ್ಧಿಗೆ ಕೆಲಸ ಮಾಡಬೇಕಿದೆ. ಈ ಜಿಲ್ಲೆಗೆ ಸಿಎಂ 150 ಕೋಟಿ ವಿಶೇಷ ಅನುದಾನ ಕೊಟ್ಟಿದ್ದಾರೆ. ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಮುಂದಾಗಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಬಾಂಗ್ಲಾ ಹಿಂಸಾಚಾರ – ಹಿಂದೂಗಳ ಸುರಕ್ಷತೆ ಬಗ್ಗೆ ಮೋದಿ ಕಳವಳ

ಇನ್ನೂ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಖಾಲಿ ಇದೆ. ಹಾಗಾಗಿ ನಾನು ಬಂದಿದ್ದೇನೆ. ಹಿಂದೆ ರಾಮನಗರ ಜಿಲ್ಲಾ ಮಂತ್ರಿ ಆಗಿದ್ದಾಗ ರಾಮನಗರದಲ್ಲಿ ಧ್ವಜಾರೋಹಣ ಮಾಡುತ್ತಿದ್ದೆ. ಆದರೆ ಇಲ್ಲಿನ ಲೋಕಲ್ ಎಂಎಲ್‌ಎ ಯಾವ ಸ್ವಾತಂತ್ರ‍್ಯ ಕಾರ್ಯಕ್ರಮಕ್ಕೂ ಬರುತ್ತಿರಲಿಲ್ಲ. 6 ವರ್ಷದಲ್ಲಿ ಒಂದು ದಿನವೂ ಬಂದು ಧ್ವಜಾರೋಹಣ ಮಾಡಿಲ್ಲ. ಅವರಿಗೆ ಅನುಭವ ಇಲ್ಲ. ದೇಶದ ಸ್ವಾತಂತ್ರ‍್ಯ, ಇತಿಹಾಸದ ಬಗ್ಗೆ ಕಾಳಜಿ ಇಲ್ಲ. ಹಾಗಾಗಿ ನಾನು ಇಲ್ಲಿ ಬಂದು ಧ್ವಜಾರೋಹಣ ಮಾಡಿದ್ದೇನೆ ಎಂದು ಕುಮಾರಸ್ವಾಮಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ದೇಶದಲ್ಲಿ ಅನೇಕ ನಕಲಿ ಭಕ್ತರು ಇದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್

ಇನ್ನೂ ಚನ್ನಪಟ್ಟಣ ಸ್ವಾತಂತ್ರ‍್ಯೋತ್ಸವ ಕಾರ್ಯಕ್ರಮದಲ್ಲಿ ರಾಜಕೀಯ ಬದ್ಧವೈರಿಗಳಾದ ಡಿಸಿಎಂ ಡಿಕೆಶಿ ಹಾಗೂ ಮಾಜಿ ಸಚಿವ ಸಿಪಿವೈ (CP Yogeshwar) ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಡಿಕೆಶಿಯನ್ನ ಕೈಮುಗಿದು ಸಿಪಿವೈ ಸ್ವಾಗತ ಮಾಡಿದ್ದನ್ನು ಹೊರತುಪಡಿಸಿದರೆ ಯಾವುದೇ ಮಾತುಗಳನ್ನಾಡದೇ ಮೌನವಾಗಿ ಕುಳಿತಿದ್ದರು. ಸಿಪಿವೈ ದೆಹಲಿಯಿಂದ ಬಂದ ಬಳಿಕ ಡಿಕೆಶಿ ಜೊತೆ ವೇದಿಕೆ ಹಂಚಿಕೊಂಡಿದ್ದು ರಾಜಕೀಯ ಕುತೂಹಲವನ್ನು ಹೆಚ್ಚಿಸಿದೆ. ಈ ಮೂಲಕ ಚನ್ನಪಟ್ಟಣ ಕ್ಷೇತ್ರ ಮತ್ತೊಂದು ರಾಜಕೀಯ ಸಮರಕ್ಕೆ ಸಿದ್ಧವಾಗಿದ್ದು, ಡಿಕೆಶಿ-ಸಿಪಿವೈ ಹಾಗೂ ಹೆಚ್‌ಡಿಕೆ ನಡುವಿನ ಪ್ರತಿಷ್ಠೆಯ ಕಣವಾಗಿದೆ. ಇದನ್ನೂ ಓದಿ: ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ತ್ವರಿತ ತನಿಖೆ, ಶಿಕ್ಷೆಯ ಅಗತ್ಯವಿದೆ: ಮೋದಿ

Share This Article