ಸಿದ್ದು ಟೀಂ ಚದುರಂಗದಾಟಕ್ಕೆ ಡಿಕೆಶಿ, ಪರಂ ತಬ್ಬಿಬ್ಬು!

Public TV
1 Min Read

ಬೆಂಗಳೂರು: ಮೈತ್ರಿ ಸರ್ಕಾರ ರಚನೆಯಾದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಎರಡು ಮಾತುಗಳು ಪದೇ ಪದೇ ಕೇಳಿ ಬರುತ್ತಿದೆ. ಒಂದು ಬಿಜೆಪಿಯ ಆಪರೇಷನ್ ಕಮಲ, ಮತ್ತೊಂದು ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಎಂಬ ಮಾತುಗಳು ಮಿಂಚಿನಂತೆ ಹರಿದಾಡುತ್ತಿವೆ. ಗುಡುಗು ಕೇಳುವುದಕ್ಕಿಂತ ಮೊದಲೇ ಈ ಮಿಂಚಿನ ಮಾತುಗಳು ದೋಸ್ತಿ ಅಂಗಳದಲ್ಲಿ ಯಾರು ಸ್ಟ್ರಾಂಗ್ ಎಂಬುದರ ಚರ್ಚೆಗೆ ದಾರಿ ಮಾಡಿ ಕೊಡುತ್ತಿವೆ.

ಮೈತ್ರಿ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಡಿಸಿಎಂ ಪರಮೇಶ್ವರ್ ಅವರನ್ನು ಸೈಡ್ ಲೈನ್ ಮಾಡಲು ಸಿದ್ದರಾಮಯ್ಯ ಆ್ಯಂಡ್ ಟೀಂ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ. ಮೈತ್ರಿ ಬಳಿಕ ಮೂಲ ಕಾಂಗ್ರೆಸ್ಸಿಗರು ಮತ್ತು ವಲಸಿಗ ಕಾಂಗ್ರೆಸ್ಸಿಗರು ಎಂಬ ಎರಡು ಬಣಗಳ ರಚನೆಯಾಗಿದ್ದು, ಈ ನಾಯಕರ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಮೇ 23ರಂದು ಫಲಿತಾಂಶ ಮೈತ್ರಿ ವಿರುದ್ಧವಾಗಿ ಬಂದರೆ ತಮ್ಮ ಬಣದ ಸಂಖ್ಯೆಯನ್ನು ಹೆಚ್ಚಿಸಲು ಸಿದ್ದರಾಮಯ್ಯ ತಂತ್ರಗಳನ್ನು ರಚಿಸಿಕೊಂಡಿದ್ದಾರೆ ಎನ್ನಲಾಗಿದೆ.

ಸಚಿವರಾದ ಎಂ.ಬಿ.ಪಾಟೀಲ್, ಜಮೀರ್ ಅಹ್ಮದ್ ಮತ್ತು ಐದಾರು ಶಾಸಕರು ಬಹಿರಂಗವಾಗಿ ಮತ್ತೆ ಸಿದ್ದರಾಮಯ್ಯ ಸಿಎಂ ಆಗಲಿ ಎಂಬ ಹೇಳಿಕೆಯನ್ನು ನೀಡುತ್ತಿದ್ದಾರೆ. ಮೇ 19ರ ನಂತರ ಮತ್ತಷ್ಟು ಶಾಸಕರು ಸಿದ್ದರಾಮಯ್ಯ ಮತ್ತೆ ಸಿಎಂ ಕ್ಯಾಂಪೇನ್ ನಲ್ಲಿ ಸೇರಿಕೊಳ್ಳಲಿದ್ದಾರೆ. ಇಡೀ ಕ್ಯಾಂಪೇನ್ ಮೂಲಕವೇ ಮೈತ್ರಿಯಲ್ಲಿ ಮತ್ತೆ ಹೊಸ ಸೂತ್ರದ ಕೂಗಿಗೆ ಕೈ ನಾಯಕರು ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯರ ಟೀಂ ತಮ್ಮ ಪ್ಲಾನ್ ಮೂಲಕ ಮೂಲ ಕಾಂಗ್ರೆಸ್ ನಾಯಕರನ್ನು ಕಟ್ಟಿಹಾಕುವ ತಂತ್ರಕ್ಕೆ ಮುಂದಾಗುತ್ತಿದೆ. ಈ ಎಲ್ಲ ಬೆಳವಣಿಗೆಯನ್ನು ಗಮನಿಸುತ್ತಿರುವ ಡಿ.ಕೆ.ಶಿವಕುಮಾರ್ ಮತ್ತು ಪರಮೇಶ್ವರ್ ಸುಸ್ತಾಗಿದ್ದು, ಈ ಸಂಬಂಧ ಹೈಕಮಾಂಡ್ ಗೆ ದೂರು ನೀಡಲು ಚಿಂತಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಪರಮೇಶ್ವರ್ ಮತ್ತು ಡಿ.ಕೆ.ಶಿವಕುಮಾರ್ ಉಪ ಚುನಾವಣೆಯಲ್ಲಿ ಬ್ಯುಸಿ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೇ 19ರ ಬಳಿಕ ಸಿದ್ದರಾಮಯ್ಯರ ನಡವಳಿಕೆ ಹಾಗೂ ಪಕ್ಷದ ನಾಯಕರು ಮೈತ್ರಿ ಧರ್ಮ ಪಾಲನೆ ಮಾಡುತ್ತಿಲ್ಲ ಎಂದು ವಿವರವಾಗಿ ಹೈಕಮಾಂಡ್‍ಗೆ ದೂರು ನೀಡುವ ಸಾಧ್ಯತೆಗಳಿವೆ.

Share This Article
Leave a Comment

Leave a Reply

Your email address will not be published. Required fields are marked *