ರಿಹರ್ಸಲ್ ನೆಪದಲ್ಲಿ ದಸರಾ ಸಂಪ್ರದಾಯ ಮುರಿದ್ರಾ ಡಿಸಿಎಂ?

Public TV
2 Min Read

ಮೈಸೂರು: ಸಮ್ಮಿಶ್ರ ಸರ್ಕಾರದ ಉಪಮುಖ್ಯಮಂತ್ರಿ ಪರಮೇಶ್ವರ್ ರಿಹರ್ಸಲ್ ನೆಪದಲ್ಲಿ ಇದೂವರೆಗೂ ನಡೆಸಿಕೊಂಡು ಬಂದಿದ್ದ ದಸರಾ ಸಂಪ್ರದಾಯವನ್ನು ಮುರಿದ್ರಾ ಎನ್ನುವ ಪ್ರಶ್ನೆ ಎದ್ದಿದೆ.

ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಿಹರ್ಸಲ್ ನೆಪದಲ್ಲಿ ಡಿಸಿಎಂ ಜಿ.ಪರಮೇಶ್ವರ್ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ್ದಾರೆ. ಪ್ರತೀ ವರ್ಷ ಜಂಬೂಸವಾರಿ ವೇಳೆ ಮಾತ್ರ ನಂದಿಧ್ವಜಕ್ಕೆ ಪೂಜೆ ಮತ್ತು ಗಜಪಡೆಗೆ ಪುಷ್ಪಾರ್ಚನೆ ಮಾಡುವುದು ವಾಡಿಕೆ. ಅಲ್ಲದೇ ಮೆರವಣಿಗೆಯ ಮೊದಲು ರಾಜ್ಯದ ಮುಖ್ಯಮಂತ್ರಿಗಳು ನಂದಿಧ್ವಜ ಹಾಗೂ ಜಂಬೂ ಸವಾರಿಗೆ ಪೂಜೆ ಸಲ್ಲಿಸಿದ ಬಳಿಕವೇ ಜಂಬೂಸವಾರಿ ಆರಂಭವಾಗುತ್ತಿತ್ತು. ಆದರೆ ಇಂದು ರಿಹರ್ಸಲ್ ರೂಪದಲ್ಲಿ ಡಿಸಿಎಂ ಪರಮೇಶ್ವರ್ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ಗಜಪಡೆಗೆ ಪುಷ್ಪಾರ್ಚನೆ ಮಾಡಿದ್ದಾರೆ.

ಜನರೇ ಇಲ್ಲದಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗಳ ಸಮ್ಮುಖದಲ್ಲಿ ಡಿಸಿಎಂ ಜಂಬೂ ಸವಾರಿ ರಿರ್ಹಸಲ್ ನಡೆಸಿದ್ದಾರೆ. ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ರಿಹರ್ಸಲ್ ರೂಪದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಸಮ್ಮಿಶ್ರ ಸರ್ಕಾರ ಅನಾದಿಕಾಲದಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯಕ್ಕೆ ಎಳ್ಳು-ನೀರು ಬಿಟ್ಟಿದೆ ಎನ್ನುವ ಟೀಕೆಗೆ ಗುರಿಯಾಗಿದೆ.

ಸಂಪ್ರದಾಯದ ಪ್ರಕಾರ ನಾಡಹಬ್ಬ ದಸರಾದಲ್ಲಿ ನಂದಿಧ್ವಜಕ್ಕೆ ವಿಶೇಷ ಮಹತ್ವವಿದೆ. ಅಲ್ಲದೇ ಶುಭ ಮುಹೂರ್ತದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಬೇಕೆಂಬ ಕಟ್ಟುನಿಟ್ಟಿನ ನಿಯಮವಿದೆ. ಆದರೆ ಇಂದು ಇವನ್ನೆಲ್ಲಾ ಗಾಳಿಗೆ ತೂರಿದ ಪರಮೇಶ್ವರ್ ಯಾವುದೇ ಮುಹೂರ್ತವಿಲ್ಲದೇ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ದಸರಾ ಸಂಪ್ರದಾಯಕ್ಕೆ ಅಪಮಾನ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ನಂದಿಧ್ವಜವನ್ನ ಸಾಂಪ್ರದಾಯಿಕವಾಗಿ ಪೂಜೆ ಮಾಡಿ ಪ್ರತಿಷ್ಠಾಪಿಸುತ್ತಿದ್ದರು. ಅಲ್ಲದೇ 9 ದಿನಗಳ ಕಾಲ ಪೂಜೆ ನಡೆಸಿ ನಂದಿಧ್ವಜ ಕಟ್ಟುತ್ತಿದ್ದರು. ಗೌರಿಶಂಕರ ನಗರದ ಉಡಿಗಾಲ ಮಹದೇವಪ್ಪರ ಕುಟುಂಬವೇ ಇಷ್ಟು ವರ್ಷ ನಂದಿಧ್ವಜ ಪೂಜೆ ನೆರವೇರಿಸುತ್ತಿದ್ದರು. ಆದರೆ ಇಂದು ಬೇರೆ ತಂಡಕ್ಕೆ ಮೈತ್ರಿ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈ ಬಗ್ಗೆ ಖುದ್ದು ಡಿಸಿಎಂ ಪರಮೇಶ್ವರ್ ಅವರನ್ನು ಪ್ರಶ್ನಿಸಿದಾಗ ಅವರು ಸುಮ್ಮನೆ ನಕ್ಕು ತೆರಳಿದರು.

ಕೇವಲ 45 ನಿಮಿಷದಲ್ಲಿ ರಿಹರ್ಸಲ್ ಮುಕ್ತಾಯವಾಗಿದ್ದು, ಪೊಲೀಸರ ಪಥ ಸಂಚಲನ ಕೇವಲ ಆವರಣಕ್ಕೆ ಸೀಮಿತವಾಗಿತ್ತು. ಜಂಬೂ ಸವಾರಿ ತಾಲೀಮಿನಲ್ಲಿ ಜನರು ಇಲ್ಲದ ಕಾರಣ ಹುಮ್ಮಸ್ಸು ಇರಲಿಲ್ಲ.

ಸಿಎಂ ಕುಮಾರಸ್ವಾಮಿಯವರು ಡಿಸಿಎಂ ಪರಮೇಶ್ವರ್ ರವರಿಗೆ ಜಿರೋ ಟ್ರಾಫಿಕ್ ವ್ಯವಸ್ಥೆ ನೀಡಿದಂತೆ, ದಸರಾದ ನಂದಿ ಧ್ವಜ ಪೂಜೆಯನ್ನು ರಿಹರ್ಸಲ್ ಮಾದರಿಯಲ್ಲಿ ಪರೋಕ್ಷವಾಗಿ ಬಿಟ್ಟುಕೊಟ್ಟಿದ್ದಾರೆ. ಕೇವಲ ವೈಯಕ್ತಿಕ ಆಸೆ ಈಡೇರಿಕೆಗಾಗಿ ಮೈತ್ರಿ ಸರ್ಕಾರ ದಸರಾ ಸಂಪ್ರದಾಯವನ್ನೇ ಬದಲಾಯಿಸಿದ್ಯಾ ಎನ್ನುವ ಮಾತುಗಳು ಈಗ ಕೇಳಿಬರುತ್ತಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *