ನವದೆಹಲಿ: ಹೈಕಮಾಂಡ್ ಭೇಟಿಗೆ ತೆರಳಿದ್ದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಬರಿಗೈಯಲ್ಲಿ ವಾಪಸ್ ಆಗಿದ್ದಾರೆ.
ನವೆಂಬರ್ ಕೋಲಾಹಲದ ಮಧ್ಯೆ ಭಾನುವಾರ ಸಂಜೆ ದೆಹಲಿಗೆ (Delhi) ತೆರಳಿದ್ದ ಡಿಕೆಶಿ ಹೈಕಮಾಂಡ್ ನಾಯಕರ ಭೇಟಿಗೆ ಅವಕಾಶ ಕೇಳಿದ್ದರು.
ಇಂದು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಸಮಯ ನೀಡಿದ್ದಾರೆ ಎಂದು ಹೇಳಲಾಗಿತ್ತು. ಬೆಳಗ್ಗೆ 10 ನಂತರ 11 ಗಂಟೆಗೆ ಭೇಟಿಯಾಗುತ್ತಾರೆ ಎನ್ನಲಾಗಿತ್ತು. ಆದರೆ ಹೈಕಮಾಂಡ್ ನಾಯಕರು ಡಿಕೆಶಿ ಭೇಟಿಗೆ ಅವಕಾಶ ನೀಡಿರಲಿಲ್ಲ. ಭೇಟಿಗೆ ಅವಕಾಶ ಸಿಗದ ಕಾರಣ ಡಿಕೆಶಿ ಬರಿಗೈಯಲ್ಲಿ ರಾಜ್ಯಕ್ಕೆ ಮರಳುತ್ತಿದ್ದಾರೆ. ಮೂರು ಗಂಟೆಯ ವಿಮಾನದ ಮೂಲಕ ಬೆಂಗಳೂರಿಗೆ ಡಿಕೆಶಿ ಆಗಮಿಸುತ್ತಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ್ದ ಡಿಕೆಶಿ, ನಾನು ನಿಯಮಿತವಾಗಿ ದೆಹಲಿಗೆ ಕೆಲಸ ಇದ್ದಾಗ ಹೋಗುತ್ತಿರುತ್ತೇನೆ.ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು, ವಿಶ್ರಾಂತಿ ಪಡೆಯಲು, ಶಾಪಿಂಗ್ ಮಾಡಲು ಮತ್ತು ನ್ಯಾಯಾಲಯದ ಪ್ರಕರಣಗಳಿಗೂ ಹೋಗುತ್ತೇನೆ ಎಂದು ತಿಳಿಸಿದ್ದರು.
