ಶಿವಮೊಗ್ಗ | ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಡಿ.ಕೆ ಶಿವಕುಮಾರ್

Public TV
3 Min Read

– ಆಲಮಟ್ಟಿ ಡ್ಯಾಂ ಏರಿಸೋದು ಯಾರಿಂದಲೂ ತಡೆಯೋಕಾಗಲ್ಲ

ಶಿವಮೊಗ್ಗ: ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಅವರು ಭದ್ರಾವತಿ (Bhadravathi) ತಾಲೂಕಿನ ಬಿಆರ್‌ಪಿ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಬಳಿಕ ಬಿಆರ್‌ಪಿ ಡ್ಯಾಂ (BRP Dam) ಬಳಿ ನೂತನ ಪ್ರವಾಸಿ ಮಂದಿರವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, 5 ಜಿಲ್ಲೆಗಳ ಜೀವನಾಡಿ ಭದ್ರಾ ಜಲಾಶಯ ರೈತರಿಗೆ ಅನುಕೂಲವಾಗಿದೆ. ನಾನು ಬಹಳ ಸಂತೋಷದಿಂದ ಭದ್ರಾ ಆಣೆಕಟ್ಟಿಗೆ ಬಾಗಿನ ನೀಡಲು ಬಂದಿದ್ದೇನೆ. ಈ ಡ್ಯಾಂ ಜುಲೈನಲ್ಲೇ ತುಂಬಿದ್ದು ನಮ್ಮ ಸುದೈವ. ಕಾಂಗ್ರೆಸ್ (Congress) ಸರ್ಕಾರ ಬಂದಾಗಲೆಲ್ಲ ಬರ, ಬರ ಅನ್ನೋರು, ಆದ್ರೆ ಬರ ಅನ್ನೋದು ಅವರ ಟೀಕೆ ಎಂದು ಬಿಜೆಪಿಗರರಿಗೆ ತಿರುಗೇಟು ಕೊಟ್ಟರು. ಇದನ್ನೂ ಓದಿ: 4 ಶಂಕಾಸ್ಪದ ಸಾವುಗಳ ತನಿಖೆಗೆ ತಿಮರೋಡಿ ದೂರು, ವಿಠಲಗೌಡ ಆರೋಪವನ್ನು ಎಸ್‌ಐಟಿ ಪರಿಶೀಲಿಸಿ ಕ್ರಮ: ಪರಮೇಶ್ವರ್

ಈ ವೇಳೆ, ಅಭಿಮಾನಿಗಳು ಜೋರಾಗಿ ಕಿರುಚಾಡಿದ್ದರೆ, ಅದಕ್ಕೆ ನಿಮಗೆ ಹೊಟ್ಟೆ ಹಸಿತಾ ಇದೆ ಅಂತ ಗೊತ್ತು, ನಂಗೂ ಹಸಿತಾ ಇದೆ. ನಾನು ಬರೀ ಬಾಗಿನ ಕೊಡಲು ಬಂದಿದ್ದೆ, ಆದ್ರೆ ಇಲ್ಲಿ ಭಾಷಣ ಮಾಡಲು ಕೊಟ್ಟಿದ್ದಾರೆ ಎಂದು ಹಾಸ್ಯ ಚಟಾಕಿ ಸಿಡಿಸಿದರು.

ಮುಂದುವರಿದು ಮಾತನಾಡಿ, ಈಗಾಗಲೇ ಭದ್ರಾವತಿಗೆ ಸ್ಪೆಷಲ್ ಗ್ರ್ಯಾಂಟ್ ನೀಡಲಾಗಿದೆ. ಸಚಿವ ಮಧು ಬಂಗಾರಪ್ಪ, ಶಾಸಕಿ ಬಲ್ಕೀಶ್ ಬಾನು ಸಹ ಜನರ ಮೇಲಿನ ಕಾಳಜಿಯಿಂದ ವಿಶೇಷ ಅನುದಾನ ಪಡೆದಿದ್ದಾರೆ. ಎಲ್ಲಾ ಶಾಸಕರು ರೈತರ ಪರ, ಜನರ ಪರವಾಗಿದ್ದಾರೆ. ಅವಕಾಶ ಸಿಕ್ಕಾಗ ಪುಣ್ಯದ ಕೆಲಸ ಮಾಡುತ್ತಿರಬೇಕು ಎಂದರು.

ಕೇಂದ್ರ ಸರ್ಕಾರ 5,300 ಕೋಟಿ ರೂ. ಅನುದಾನ ಬರುತ್ತೆ ಎಂದು ಕೂತಿದ್ವಿ ಆದ್ರೆ ಬರಲಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೊಮ್ಮಾಯಿ ಅಧಿಕಾರವಧಿಯಲ್ಲಿ ಅನುದಾನ ಬರುತ್ತೆ ಎಂದು ಕೊಂಡಿದ್ವಿ, ಬರಲಿಲ್ಲ. ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದಂತೆ ಅನುದಾನ ಬರಲೇ ಇಲ್ಲ. ನಾನು ಬಿಜೆಪಿ ಸಂಸದರಿಗೆ ಹೇಳಿದ್ದೆ ಬಾಯಿ ಬಿಡ್ರಯ್ಯ ಅಂತ. ಆದ್ರೆ ಅವರು ಬಾಯಿ ಬಿಡ್ಲಿಲ್ಲ ಅನುದಾನ ಬರಲಿಲ್ಲ. ಬಾಯಿ ಬಿಟ್ಟರೆ ಮಾತ್ರ ಅನುದಾನ ಬರುತ್ತೆ.

ರಾಜ್ಯದ ನೀರಾವರಿ ಯೋಜನೆಗೆ ಮಹಾರಾಷ್ಟ್ರ ಸಿಎಂ ಸ್ಪಂದಿಸಿಲ್ಲ. ಆಲಮಟ್ಟಿ ಜಲಾಶಯ 519 ರಿಂದ 524 ಮೀ. ಏರಿಸಲು ಸುಪ್ರೀಂ ತೀರ್ಪು ಬಂದಿದೆ. ಆದರೆ ಫಡ್ನವಿಸ್ ಅವಕಾಶ ಕೊಡಲ್ಲ ಅಂತಿದ್ದಾರೆ. ಫಡ್ನವಿಸ್ ಜಡ್ಜ್ ಅಲ್ಲ, ತೀರ್ಪು ನಮ್ಮ ಪರ ಬಂದಿದೆ. ಡ್ಯಾಂ ಏರಿಸುವುದನ್ನು ಯಾರು ತಡೆಯೋಕೆ ಆಗಲ್ಲ. ಮಿಸ್ಟರ್ ಫಡ್ನವಿಸ್ ರಾಜ್ಯದ ಜನರು ಹಕ್ಕು ಇದೆ ಎಂದು ತಿಳಿದುಕೊಳ್ಳಿ ಎಂದು ಸವಾಲು ಹಾಕಿದರು.

ಕುಡಿಯುವ ನೀರಿನ ವಿಚಾರದಲ್ಲಿ ನಾವು ರಾಜಕೀಯ ಮಾಡಲ್ಲ. ಈ ಬಗ್ಗೆ ರೈತ ಮುಖಂಡರನ್ನ ಕರೆಸಿ ಮಾತಾಡುತ್ತೇವೆ. ಇನ್ನೂ ಮಹಾದಾಯಿ ಯೋಜನೆಗೆ ಕೇಂದ್ರ ಒಪ್ಪಿಗೆ ನೀಡಿಲ್ಲ. ಅನುಮತಿ ಕೊಟ್ಟರೆ ಕೆಲಸ ಆರಂಭಿಸುತ್ತೇವೆ ಎಂದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಪ್ರಭಾ ಮಲ್ಲಿಕಾರ್ಜುನ, ಭದ್ರಾವತಿ ಶಾಸಕ ಸಂಗಮೇಶ್ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಈ ಜನ್ಮದಲ್ಲೇ ಮುಸ್ಲಿಂ ಧರ್ಮಕ್ಕೆ ಹೋಗಿಬಿಡಿ, ನಾವೇ ಹಾರ ಹಾಕಿ ಕಳುಹಿಸ್ತೇವೆ: ಶೋಭಾ ಕರಂದ್ಲಾಜೆ

Share This Article