ಎದುರಾಳಿಗಳಿಗೆ ಮೊದಲ ಚೆಕ್‌ಮೆಟ್‌ – ಡಿನ್ನರ್‌ ಪಾಲಿಟಿಕ್ಸ್‌ಗೆ ಡಿಕೆಶಿ ಬ್ರೇಕ್‌

Public TV
2 Min Read

ಬೆಂಗಳೂರು: ಕಾಂಗ್ರೆಸ್‌ ನಾಯಕರ ಡಿನ್ನರ್‌ ಪಾಲಿಟಿಕ್ಸ್‌ಗೆ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಬ್ರೇಕ್‌ ಹಾಕಿದ್ದಾರೆ. ಇಂದು ಸಂಜೆ ಖಾಸಗಿ ಹೋಟೆಲ್‌ನಲ್ಲಿ ಪರಮೇಶ್ವರ್‌ (Parameshwar) ಅವರು ಆಯೋಜಿಸಿದ್ದ ಡಿನ್ನರ್‌ ಸಭೆಗೆ ಹೈಕಮಾಂಡ್‌ ಮೂಲಕ ಬ್ರೇಕ್‌ ಹಾಕಿಸುವಲ್ಲಿ ಡಿಕೆಶಿ ಯಶಸ್ವಿಯಾಗಿದ್ದಾರೆ.

ಹೌದು. ವಿದೇಶ ಪ್ರವಾಸದಿಂದ ಭಾರತಕ್ಕೆ ಬರುತ್ತಿದ್ದಂತೆ ದೆಹಲಿಯಲ್ಲಿ ಲ್ಯಾಂಡ್‌ ಆಗಿದ್ದ ಡಿಕೆಶಿ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ಮಾತುಕತೆಯ ಬಳಿಕ ಮಂಗಳವಾರ ರಾತ್ರಿ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಸೂಚನೆಯಂತೆ ಪರಮೇಶ್ವರ್‌ ಅವರು ಡಿನ್ನರ್‌ ಸಭೆಯನ್ನು ಮುಂದೂಡಿದ್ದಾರೆ.

ದಲಿತ ಶಾಸಕ, ಸಚಿವರ ಡಿನ್ನರ್ ಪಾಲಿಟಿಕ್ಸ್‌ಗೆ ಬ್ರೇಕ್‌ ಹಾಕಿದ ಬಳಿಕ ರಾಜ್ಯದಲ್ಲಿ ಪವರ್ ವಾರ್ ಜಟಾಪಟಿ ಮತ್ತಷ್ಟು ಜೋರಾಗುತ್ತಾ? ಪವರ್ ಶೇರಿಂಗ್ ಸಮರ ಪ್ರತಿಷ್ಠೆಯ ಕದನಕ್ಕೆ ನಾಂದಿ ಹಾಡುತ್ತಾ? ಡಿಕೆಶಿ ಚೆಕ್ ಮೇಟ್‌ಗೆ ಸಿದ್ದರಾಮಯ್ಯ ಬಣದ ಕೌಂಟರ್‌ ಏನು ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಸಚಿವ ಪರಮೇಶ್ವರ್‌ ಕರೆದಿದ್ದ ಡಿನ್ನರ್‌ ಮೀಟಿಂಗ್‌ ಮುಂದೂಡಿಕೆ

ಡಿಕೆಶಿ ದೂರು:
ಡಿಕೆಶಿ ವಿದೇಶ ಪ್ರವಾಸ ಕೈಗೊಂಡಿದ್ದಾಗಲೇ ಸಿಎಂ ಸಿದ್ದರಾಮಯ್ಯ (CM Siddaramaiah) ಆಪ್ತರ ಜೊತೆ ಡಿನ್ನರ್ ಪಾಲಿಟಿಕ್ಸ್ (Dinner Politics) ನಡೆಸಿದ್ದರು. ಕನಕ ಜಯಂತಿ ನೆಪದಲ್ಲಿ ದಾವಣಗೆರೆಯಲ್ಲಿ ಸಿಎಂ ಸಿದ್ದರಾಮಯ್ಯ ಬಲ ಪ್ರದರ್ಶನ ಮಾಡಿದ್ದರು.

ವಿದೇಶದಿಂದ ಭಾರತಕ್ಕೆ ವಾಪಸ್ಸಾಗಿ 2 ದಿನ ಕಳೆದರೂ ಬೆಂಗಳೂರಿನತ್ತ ಮುಖ ಮಾಡದೇ ಇದ್ದ ಡಿಕೆಶಿ ಮಂಗಳವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಭೇಟಿ ಮಾಡಿ ಸಿಎಂ ಬಣದ ನಡೆಯನ್ನು ಆಕ್ಷೇಪಿಸಿದ್ದರು. ನಾನು ವಿದೇಶಕ್ಕೆ ಹೋಗಿದ್ದಾಗ ಸಿಎಂ ಬಣ ಸಭೆ ಮಾಡಿದ್ದಾರೆ. ಡಿನ್ನರ್ ಹೆಸರಲ್ಲಿ ಪ್ರತ್ಯೇಕ ಸಭೆ ಮಾಡಿದ್ದು ಸರಿಯಲ್ಲ. ಡಿನ್ನರ್ ಮೀಟಿಂಗ್ ಬಗ್ಗೆ ತರಹೇವಾರಿ ಸುದ್ದಿ ಹಬ್ಬಿದೆ. ಡಿನ್ನರ್ ರಾಜಕೀಯದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುತ್ತದೆ ಮತ್ತು ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಇಂತಹ ಚಟುವಟಿಕೆಗಳನ್ನು ಕೂಡಲೇ ನಿಲ್ಲಿಸುವಂತೆ ಸೂಚಿಸಬೇಕು. ನಾನು ಡಿನ್ನರ್ ಪಾಲಿಟಿಕ್ಸ್ ಮಾಡಿದರೆ ಬೇರೆ ಸಂದೇಶ ಹೋಗುತ್ತದೆ. ಪಕ್ಷದ ಅಧ್ಯಕ್ಷನಾಗಿ ಪಕ್ಷದ ಶಿಸ್ತು ಮುಖ್ಯ ಎಂದು ಸುಮ್ಮನಿದ್ದೇನೆ ಎಂದು ದೂರು ನೀಡಿದ್ದಾರೆ ಎನ್ನಲಾಗುತ್ತಿದೆ.

 

Share This Article