ಹಲವು ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜುಗಳಿಲ್ಲ, ತಾಲೂಕಿಗೊಂದು ಕಾಲೇಜು ಮಾಡಿಕೊಂಡರೆ ಹೇಗೆ- ಡಿಕೆಶಿ ವಿರುದ್ಧ ಡಿಸಿಎಂ ಕಿಡಿ

Public TV
1 Min Read

ಬೆಂಗಳೂರು: ಹಲವು ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳಿಲ್ಲ, ಇವರು ತಾಲೂಕಿಗೊಂದು ಕಾಲೇಜು ಹಾಕಿಸಿಕೊಂಡರೆ ಹೇಗೆ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ  ಅವರು ಕಿಡಿ ಕಾರಿದ್ದಾರೆ.

ಮೆಡಿಕಲ್ ಕಾಲೇಜು ಸ್ಥಳಾಂತರದ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಅಧಿಕಾರ ದುರ್ಬಳಕೆ ಮಾಡಿಕೊಂಡು ಅಟ್ಟಹಾಸ ಮರೆದು ಮೆಡಿಕಲ್ ಕಾಲೇಜು ಕನಕಪುರಕ್ಕೆ ಹಾಕಿಸಿಕೊಂಡಿದ್ದರು. ಜನರ ತೆರಿಗೆ ಹಣ ದುರುಪಯೋಗ ಮಾಡಿಕೊಂಡಿದ್ದರು. ಹೀಗಾಗಿ ಮೆಡಿಕಲ್ ಕಾಲೇಜು ಸ್ಥಳಾಂತರಿಸಲಾಗಿದೆ. ಇನ್ನೂ ಹಲವು ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಇಲ್ಲ. ಇಂತಹ ಸಂದರ್ಭದಲ್ಲಿ ತಾಲೂಕಿಗೆ ಒಂದು ಮೆಡಿಕಲ್ ಕಾಲೇಜು ಹಾಕಿಕೊಂಡಿದ್ದು ಎಷ್ಟರಮಟ್ಟಿಗೆ ಸರಿ? ಈ ಕೆಲಸವನ್ನು ದೊಡ್ಡ ಸಾಧನೆ ಎಂದು ಡಿಕೆಶಿ ತಿಳಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಡಿಕೆ ಶಿವಕುಮಾರ್ ಮಂತ್ರಿಯಾಗಿದ್ದು ಇಡೀ ರಾಜ್ಯಕ್ಕೆ, ಕೇವಲ ಕನಕಪುರಕ್ಕೆ ಅಲ್ಲ. ಇನ್ನಾದರೂ ಅವರು ಅರ್ಥ ಮಾಡಿಕೊಳ್ಳಲಿ, ತಿಳುವಳಿಕೆ ಬರಲಿ ಎಂದು ಹರಿಹಾಯ್ದರು.

ಶಾಲಾ ಪಠ್ಯ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಕುರಿತ ವಿಚಾರಗಳು ಇರಬೇಕು. ಟಿಪ್ಪು ಸುಲ್ತಾನ್ ಸಮಾಜಕ್ಕೆ ಏನು ಮಾಡಿದ್ದಾರೆ, ಅವರಿಂದ ಆಗಿರುವ ತೊಂದರೆಗಳೇನು ಎನ್ನುವುದನ್ನು ತಿಳಿಸಬೇಕು. ಸಮಾಜಕ್ಕೆ ಪದೇ ಪದೆ ದಿಕ್ಕು ತಪ್ಪಿಸುವ ಜನರಿಗೆ ಇದನ್ನು ಸರಿಯಾದ ರೀತಿಯಲ್ಲಿ ತಿಳಿಸಿಕೊಡಬೇಕು. ಟಿಪ್ಪು ಮಾಡಿರುವ ಘನಕಾರ್ಯಗಳನ್ನು ಪಠ್ಯ ಪುಸ್ತಕಗಳಲ್ಲಿ ತಿಳಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇತಿಹಾಸದಲ್ಲಿ ಒಳ್ಳೆಯ ಸೈನಿಕ ಇರಬಹುದು, ಆದರೆ ನಮ್ಮ ಸಂಸ್ಕೃತಿ, ನಾಡಿಗೆ ತೊಂದರೆ ಆಗಿದೆ. ಸಾವಿರಾರು ಜನರ ಮಾರಣಹೋಮ ಆಗಿದೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುವುದನ್ನು ಕಾಂಗ್ರೆಸ್ ಬಿಡಬೇಕು ಎಂದು ತಿರುಗೇಟು ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *