ಅಧಿಕಾರದಲ್ಲಿರದ ಹತಾಶೆಯನ್ನು ಅಸಂಬದ್ಧ ಹೇಳಿಕೆಯಿಂದ ಹೊರಹಾಕ್ತಾರೆ: ಎಚ್‌ಡಿಕೆಗೆ ಡಿಸಿಎಂ ತಿರುಗೇಟು

Public TV
2 Min Read

ಬೆಂಗಳೂರು: ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ವರ್ಸಸ್ ಹಾಲಿ ಡಿಸಿಎಂ ಅಶ್ವಥ್ ನಾರಾಯಣ್ ನಡುವೆ ಟಾಕ್ ಫೈಟ್ ಮತ್ತಷ್ಟು ಜೋರಾಗಿದ್ದು, ಎಚ್‌ಡಿಕೆ ಹೇಳಿಕೆಗಳಿಗೆ ಡಿಸಿಎಂ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಅವರ ಅಜ್ಞಾನವನ್ನು ಪ್ರದರ್ಶಿಸಿದೆ. ಅವರು ಅಧಿಕಾರದಲ್ಲಿ ಇಲ್ಲದಿರುವ ಹತಾಶೆಯಿಂದ ಹೇಳಿಕೆ ನೀಡುತ್ತಿದ್ದಾರೆ ಎಂದು ಅಶ್ವಥ್ ನಾರಾಯಣ್ ಕಿಡಿಕಾರಿದ್ದಾರೆ.

ಡಿ.ಕೆ ಶಿವಕುಮಾರ್ ಅವರ ಬಂಧನಕ್ಕೆ ಬಿಜೆಪಿಯೇ ಕಾರಣ. ಬಿಜೆಪಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಪ್ರಜಾಪ್ರಭುತ್ವತ ಕಗ್ಗೊಲೆ ಮಾಡುತ್ತಿದೆ ಎಂದು ಎಚ್‌ಡಿಕೆ ಆರೋಪಿಸಿದ್ದರು. ಜೊತೆಗೆ ಅಶ್ವಥ್ ನಾರಾಯಣ್ ಅವರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ, ಕಾರ್ಪೊರೇಷನ್ ಕಡತಗಳ ಕಚೇರಿಗೆ ಬೆಂಕಿ ಇಟ್ಟಿದ್ದಾರೆ ಎಂದು ಆರೋಪಿಸಿದ್ದರು. ಆದ್ದರಿಂದ ಡಿಸಿಎಂ ಟ್ವೀಟ್ ಮೂಲಕ ಎಚ್‌ಡಿಕೆ ಅವರ ವಿರುದ್ಧ ಹರಿಹಾಯ್ದಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಅವರ ಅಜ್ಞಾನವನ್ನು ಪ್ರದರ್ಶಿಸಿದೆ. ಯಾವುದೇ ಆರೋಪ ಮಾಡುವಾಗ ಒಬ್ಬ ಮಾಜಿ ಸಿಎಂ ವಾಸ್ತವ ತಿಳಿದುಕೊಳ್ಳದೇ ಹತಾಶರಾಗಿ, ಏನೇನೊ ಹೇಳಿ ಅಪಹಾಸ್ಯಕ್ಕೆ ಒಳಗಾಗಿದ್ದಾರೆ. ಅಧಿಕಾರದಲ್ಲಿರದ ಹತಾಶೆಯನ್ನು ಅಸಂಬದ್ಧ ಹೇಳಿಕೆಯ ಮೂಲಕ ಹೊರಹಾಕುವುದು ನಿಮ್ಮ ಹಳೆಯ ಚಾಳಿಯಾಗಿದೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

ಎಚ್‍ಡಿಕೆ ಹೇಳಿದ್ದೇನು?
ಡಿಕೆಶಿ ಅವರ ಬಂಧನದ ಬಗ್ಗೆ ಮಾಧ್ಯಮಗಳ ಜೊತೆ ಎಚ್‌ಡಿಕೆ ಅವರು ಮಾತನಾಡುತ್ತಿದ್ದಾಗ, ದಿ ಗ್ರೇಟ್ ಲೀಡರ್ ಅಶ್ವಥ್ ನಾರಾಯಣ್ ಅವರು ನವ ಭಾರತ ನಿರ್ಮಾಣ ಮಾಡಲು ಹೊರಟಿದ್ದಾರೆ. ಮಲ್ಲೇಶ್ವರಂನಲ್ಲಿರುವ ಬೆಂಗಳೂರು ಕಾರ್ಪೊರೇಷನ್‍ನ ಕರ್ಮಕಾಂಡಗಳು, ಕಡತಗಳ ಕಚೇರಿಕೆ ಬೆಂಕಿಯಿಟ್ಟವರು. ಇವರೆಲ್ಲಾ ಮುಖ್ಯಸ್ಥರು. ಇವರು ಭ್ರಷ್ಟಾಚಾರ ನಿಲ್ಲುಸುತ್ತಾರಂತೆ, ನವ ಭಾರತ ನಿರ್ಮಾಣ ಮಾಡುತ್ತಾರಂತೆ. ನಾಚಿಕೆ, ಮಾನ ಮರ್ಯಾದೆ ಇದ್ದರೆ ಕಳೆದ 1 ವರ್ಷದಿಂದ ಯಾರ್ಯಾರ ಬಳಿ ಹಣ ತಂದಿದ್ದಾರೆ ಎಂದು ಬಿಜೆಪಿ ಹೇಳಲಿ. ಶಾಸಕರಿಗೆ 15-20 ಕೋಟಿ ಹಣ ನೀಡುವ ಆಮಿಷ ಒಡ್ಡಿದ್ದಾಗ ಈ ಇಡಿ, ಐಟಿ ಇಲಾಖೆ ಸತ್ತುಹೋಗಿತ್ತಾ? ಅಧಿಕಾರಿಗಳು ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಕಾಂಗ್ರೆಸ್ ಟ್ರಬಲ್ ಶೂಟರ್ ಆಗಿದ್ದ ಡಿಕೆಶಿ ಅವರು ಸದ್ಯ ಇಡಿ ಕಸ್ಟಡಿಯಲ್ಲಿದ್ದಾರೆ. ಆದ್ದರಿಂದ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಹಾಗೂ ನಾಯಕರು ಆಡಳಿತ ಪಕ್ಷ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಅಧಿಕಾರ ಬಳಸಿಕೊಂಡು ಡಿಕೆಶಿ ವಿರುದ್ಧ ಇಡಿ ಅಸ್ತ್ರ ಬಳಸಿದೆ ಎಂದು ಆರೋಪಿಸಿ ಕಾಂಗ್ರೆಸ್ ರಾಜ್ಯದಲ್ಲಿ ಪ್ರತಿಭಟನೆ ನಡೆಸಿದೆ.

Share This Article
Leave a Comment

Leave a Reply

Your email address will not be published. Required fields are marked *