ಎಲಿವೇಟೆಡ್ ಕಾರಿಡಾರ್: ಸಿಎಂ ಜತೆ ಚರ್ಚೆಗೆ ಮುಂದಾದ ಬಿಜೆಪಿ ಶಾಸಕರು

Public TV
2 Min Read

ಬೆಂಗಳೂರು: ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ನಗರದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಸುಲಭ ಸಂಪರ್ಕಕ್ಕೆ 87 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ (ಎತ್ತರಿಸಿದ ಮಾರ್ಗ) ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದ್ದು, ಅದರ ಜಾರಿ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ಚರ್ಚಿಸಲು ನಗರದ ಬಿಜೆಪಿ ಶಾಸಕರು ಬುಧವಾರ ತೀರ್ಮಾನಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ವಿಕಾಸಸೌಧದ ಅವರ ಕಚೇರಿಯಲ್ಲಿ ಸಚಿವರು ಮತ್ತು ಶಾಸಕರ ಸಭೆ ನಡೆಯಿತು. ಯೋಜನೆಯ ನೀಲಿನಕ್ಷೆ ಸಿದ್ಧಪಡಿಸಿರುವ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ಅಧಿಕಾರಿಗಳು ಯೋಜನೆ ಕುರಿತು ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ನಮ್ಮ ಮೆಟ್ರೊ ಮಾದರಿಯಲ್ಲೇ ಎಲಿವೇಟೆಡ್ ಕಾರಿಡಾರ್ ಅನ್ನೂ ವಿವಿಧ ಹಂತಗಳಲ್ಲಿ ನಿರ್ಮಾಣ ಮಾಡಬೇಕಾಗಿದೆ. ಹೀಗಾಗಿ ಕನಿಷ್ಠ ಮೊದಲ ಹಂತದ ಕಾಮಗಾರಿಗಳಿಗೆ ಈ ಸಲದ ಬಜೆಟ್‍ನಲ್ಲಿ ಆದ್ಯತೆ ಕೊಡಬೇಕು ಎನ್ನುವುದನ್ನು ಸಿಎಂ ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡುವುದಕ್ಕೂ ಸಭೆಯಲ್ಲಿ ತೀರ್ಮಾನಿಸಲಾಯಿತು.

ಒಟ್ಟು 87 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್‍ಗೆ ಅಂದಾಜು 26 ಸಾವಿರ ಕೋಟಿ ರೂಪಾಯಿ ಬೇಕಾಗುತ್ತದೆ. ಒಮ್ಮೆಗೇ ಇಷ್ಟು ಹಣ ಹೊಂದಿಸುವುದು ಕಷ್ಟವಾಗುತ್ತದೆ. ಹೀಗಾಗಿ ಮೊದಲ ಹಂತದಲ್ಲಿ ಕನಿಷ್ಠ ಪೂರ್ವ- ಪಶ್ಚಿಮ (ಕೆ.ಆರ್.ಪುರ- ಯಶವಂತಪುರ) ಎಲಿವೇಟೆಡ್ ಕಾರಿಡಾರ್ ಕಾಮಗಾರಿ ಕೈಗೆತ್ತಿಕೊಳ್ಳಬೇಕಾಗಿದ್ದು, ಇದಕ್ಕೆ ಈ ಬಾರಿಯ ಬಜೆಟ್‍ನಲ್ಲಿ ಅನುದಾನ ಒದಗಿಸುವುದಕ್ಕೆ ಮನವಿ ಮಾಡಲು ಶಾಸಕರು ನಿರ್ಧರಿಸಿದರು.

ಮೊದಲ ಹಂತದ ಈ ಕಾಮಗಾರಿಗೆ 9,300 ಕೋಟಿ ರೂಪಾಯಿ ಬೇಕಾಗುತ್ತದೆ. ಇದು ಕೆ.ಆರ್.ಪುರದಿಂದ ಅಲಸೂರು, ಕಂಟೋನ್‍ಮೆಂಟ್, ಮೇಖ್ರಿ ಸರ್ಕಲ್ ಮೂಲಕ ಯಶವಂತಪುರಕ್ಕೆ ಸಂಪರ್ಕ ಕಲ್ಪಿಸಲಿದೆ. 29 ಕಿ.ಮೀ ಉದ್ದದ ಈ ಮಾರ್ಗವು ಆರು ಪಥದಲ್ಲಿ ಇರುತ್ತದೆ ಎಂದು ಡಿಸಿಎಂ ಅಶ್ವತ್ಥನಾರಾಯಣ ಸಭೆಯ ಗಮನಕ್ಕೆ ತಂದರು.

ಇದರ ನಂತರ ಮತ್ತೂ ಮೂರು ಹಂತಗಳಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲಾಗುವುದು. ಅಂದಾಜು ಮುಂದಿನ 10 ವರ್ಷಗಳ ಕಾಲ ಕಾಮಗಾರಿ ನಡೆಯಲಿದೆ. ಎಲಿವೇಟೆಡ್ ಕಾರಿಡಾರ್, ಕೆಲವು ಕಡೆ ಬಹು ಅಂತಸ್ತಿನಲ್ಲಿ ಇರುತ್ತದೆ. ಭೂಸ್ವಾಧೀನಕ್ಕೇ ಅಂದಾಜು 10 ಸಾವಿರ ಕೋಟಿ ಬೇಕಾಗಬಹುದು. ಇದನ್ನು ಆದಷ್ಟು ಕಡಿಮೆ ಮಾಡಿ ಯೋಜನೆ ಜಾರಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಕಾರಿಡಾರ್ ನಿರ್ಮಾಣದ ನಂತರ ನಗರದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಅರ್ಧ ಗಂಟೆಯಲ್ಲಿ ತಲುಪಬಹುದು. ಇದರಿಂದ ನಗರದ ಕೇಂದ್ರ ಭಾಗದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಬಹುದು ಎಂದು ವಿವರಿಸಿದರು.

ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಹೊರವಲಯದ 120 ಕಿ.ಮೀ ಉದ್ದದ ರಸ್ತೆಗಳ ಅಭಿವೃದ್ಧಿಗೆ ಕನಿಷ್ಠ 1,400 ಕೋಟಿ ರೂ. ಬೇಕಾಗಿದ್ದು, ಇದಕ್ಕೆ ಲೋಕೋಪಯೋಗಿ ಇಲಾಖೆಯಿಂದ ಹಣ ಪಡೆಯುವ ಸಂಬಂಧ ಚರ್ಚಿಸಲಾಯಿತು. ಈ ಸಂಬಂಧ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರನ್ನು ಭೇಟಿ ಮಾಡಿ ಚರ್ಚಿಸುವುದಕ್ಕೂ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಚಿವರಾದ ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯ, ಶಾಸಕರಾದ ಅರವಿಂದ ಲಿಂಬಾವಳಿ, ಎಸ್.ಆರ್.ವಿಶ್ವನಾಥ್, ಉದಯ್ ಗರುಡಾಚಾರ್, ಬೈರತಿ ಬಸವರಾಜ್, ಎಸ್.ರಘು, ಎಲ್.ಎ.ರವಿಸುಬ್ರಹ್ಮಣ್ಯ, ಎಂ.ಸತೀಶ್ ರೆಡ್ಡಿ ಮತ್ತಿತರರು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *