ಮಂಡ್ಯ: ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ಶಿವರಾಮೇಗೌಡರ ವಿರುದ್ಧ ಹಿಂದೆ ದೇವೇಗೌಡರು ಪ್ರತಿಭಟನೆ ನಡೆಸಿದ್ದು ಯಾಕೆ ಎನ್ನುವುದಕ್ಕೆ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಉತ್ತರ ಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಿವರಾಮೇಗೌಡ ಸುಸಂಸ್ಕೃತ ಕುಟುಂಬದಿಂದ ಬಂದವರು. ಅವರು ಬೀದಿಯಿಂದ ಬಂದವರಲ್ಲ. ಅವರಿಗೆ ಸಮಾಜದಲ್ಲಿ ಗೌರವ, ಘನತೆ ಇದೆ. ಕೇಸ್ ಇದ್ದ ಮಾತ್ರಕ್ಕೆ ಶಿವರಾಮೇಗೌಡರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದರು.
ಇದೇ ವೇಳೆ ಸುಮಾರು 25 ವರ್ಷಗಳ ಹಿಂದೆ ಪತ್ರಕರ್ತ ಗಂಗಾಧರ್ ಕೊಲೆ ಕೇಸಿನ ವಿಚಾರವಾಗಿ, ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಚರ್ಚೆ ಬಗ್ಗೆ ಮಾತನಾಡಿ, ಪತ್ರಕರ್ತ ಗಂಗಾಧರ್ ಮೂರ್ತಿ ಕೊಲೆ ಸಂದರ್ಭ ದೇವೇಗೌಡರು ಶಿವರಾಮೇಗೌಡ ವಿರುದ್ಧ ಪ್ರತಿಭಟಿಸಿದ್ದು ರಾಜಕೀಯದಲ್ಲಿ ಸಹಜ. ಸಿದ್ದರಾಮಯ್ಯ ಮತ್ತು ದೇವೇಗೌಡರು ಹಾವು ಮುಂಗುಸಿಯಂತಿದ್ದರು. ಇವತ್ತು ಅವರು ಒಂದಾಗಲಿಲ್ಲವೇ? ಹಾಗೆ ಅಂದು ಕಾರ್ಯಕರ್ತರ ಒತ್ತಡಕ್ಕೆ ಮಣಿದು ದೇವೇಗೌಡರು ಪ್ರತಿಭಟಿಸಿದ್ದರು. ದ್ವೇಷದಿಂದ ಪ್ರತಿಭಟನೆ ಮಾಡಿಲ್ಲ. ನಾವು ಅಷ್ಟೇ ಕೆಲವು ಸರಿ ಮನಸ್ಸಿಲ್ಲದೇ ಹೋದರೂ ಕಾರ್ಯಕರ್ತರನ್ನ ತೃಪ್ತಿಪಡಿಸುವ ಸಲುವಾಗಿ ಈ ರೀತಿ ಕೆಲಸ ಮಾಡಬೇಕಾಗತ್ತದೆ ಎಂದು ಶಿವರಾಮೇಗೌಡ ಪರ ಬ್ಯಾಟಿಂಗ್ ಮಾಡಿದರು.
ಕೇಸು ದಾಖಲಾದ ಮಾತ್ರಕ್ಕೆ ಕೊಲೆಗಾರ ಅಂತ ತೀರ್ಮಾನವಾಗುವುದಿಲ್ಲ. ಶಿವರಾಮೇಗೌಡ ಲಾಂಗು, ಮಚ್ಚು ಹಿಡಿದು ಕೊಲೆ ಮಾಡುವುದನ್ನು ನೋಡಿದ್ದೀರಾ, ಅವರನ್ನ ಕೊಲೆಗಾರ ಅಂತ ಕರೆಯಲು ಎಂದು ಪ್ರಶ್ನಿಸಿದರು. ಇವೆಲ್ಲ ಸಹಜ. ನನ್ನ ಮೇಲೂ ಕ್ರಿಮಿನಲ್ ಕೇಸಿದೆ ಹಾಗಂತ ನಾನು ಕೊಲೆಗಾರನೇ? ಸಾಕ್ಷಿ ಆಧಾರ ಇದ್ದರೆ ಮಾತ್ರ ಅದಕ್ಕೆ ಬೆಲೆ ಎಂದು ಖಾರವಾಗಿ ಮಾತನಾಡಿದರು.
ಶಿವರಾಮೇಗೌಡ ಪರ ನಾಗಮಂಗಲ ಮತ್ತು ಮಂಡ್ಯದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ತಮ್ಮಣ್ಣ ಭಾಗಿಯಾಗಿರಲಿಲ್ಲ. ಇದರಿಂದ ಸಚಿವರಾದ ತಮ್ಮಣ್ಣ ಮತ್ತು ಪುಟ್ಟರಾಜು ನಡುವೆ ಮುನಿಸಿದ್ದು, ಪುಟ್ಟರಾಜು ಇರುವ ಸಭೆಗೆ ತಮ್ಮಣ್ಣ ಬರುತ್ತಿಲ್ಲ ಎಂಬ ಊಹಾಪೋಹ ಹರಿದಾಡಿತ್ತು. ಊಹಾಪೋಹಕ್ಕೆ ಸ್ಪಷ್ಟನೆ ನೀಡಿದ ತಮ್ಮಣ್ಣ ನಮ್ಮಿಬ್ಬರ ನಡುವೆ ಯಾತಕ್ಕೆ ಮುನಿಸು, ಚೇ ಚೇ ಅದೇಲ್ಲ ಏನೂ ಇಲ್ಲ. ನಾನು ಸಿಎಸ್ ಪುಟ್ಟರಾಜು ಚೆನ್ನಾಗಿದ್ದೇವೆ. ಆ ರೀತಿ ಅಸಮಾಧಾನ ಇದ್ದಿದ್ದರೆ ಬಹಿರಂಗವಾಗಿ ಹೇಳುತ್ತಿದ್ದೆ. ನಾಳೆ ಮದ್ದೂರಿನಲ್ಲಿ ನಡೆಯುವ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಪ್ರಚಾರ ಸಭೆಗೆ ಎಲ್ಲಾ ಶಾಸಕರು ಬರುತ್ತಿದ್ದಾರೆ. ಅದಕ್ಕೆ ತಯಾರಿ ನಡೆಯುತ್ತಿದೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv