ಜೈಶಂಕರ್‌ ಕರೆ ಬೆನ್ನಲ್ಲೇ ತಾಲಿಬಾನ್‌ ವಿದೇಶಾಂಗ ಸಚಿವರನ್ನೇ ಬೀಜಿಂಗ್‌ಗೆ ಕರೆಸಿ ಪಾಕ್‌ ಜೊತೆ ಕೈ ಕುಲುಕಿಸಿದ ಚೀನಾ!

Public TV
2 Min Read

ಬೀಜಿಂಗ್‌: ಭಾರತದ ವಿದೇಶಾಂಗ ಸಚಿವ ಜೈಶಂಕರ್‌ (S. Jaishankar) ಅವರು ತಾಲಿಬಾನ್‌ನ (Taliban) ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಜೊತೆ ಮಾತನಾಡಿದ ಬೆನ್ನಲ್ಲೇ ಚೀನಾ (China) ಈಗ ಅವರನ್ನೇ ಬೀಜಿಂಗ್‌ ಕರೆಸಿ ಮಾತುಕತೆ ನಡೆಸಿದೆ. ಅಷ್ಟೇ ಅಲ್ಲದೇ ಪಾಕ್‌ ವಿದೇಶಾಂಗ ಸಚಿವರನ್ನು ಆಹ್ವಾನಿಸಿ ತ್ರಿಪಕ್ಷೀಯ ಸಭೆ ನಡೆಸಿದೆ.

ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರ ನೇತೃತ್ವದಲ್ಲಿ ನಡೆದ ಅನೌಪಚಾರಿಕ ಸಭೆಯಲ್ಲಿ, ಪಾಕಿಸ್ತಾನ (Pakistan) ಮತ್ತು ಅಫ್ಘಾನಿಸ್ತಾನ ಎರಡೂ ಸಾಧ್ಯವಾದಷ್ಟು ಬೇಗ  ಪರಸ್ಪರ ರಾಯಭಾರಿಗಳನ್ನು ಕಳುಹಿಸಲು ತಾತ್ವಿಕವಾಗಿ ಒಪ್ಪಿಕೊಂಡಿವೆ ಎಂದು ಚೀನಾ ವಿದೇಶಾಂಗ ಸಚಿವಾಲಯ ತಿಳಿಸಿದೆ.

 ತ್ರಿಪಕ್ಷೀಯ ಸಭೆಗೂ ಮೊದಲು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಅಫ್ಘಾನಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರೊಂದಿಗೆ ಪ್ರತ್ಯೇಕವಾಗಿ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದರು. ಇದನ್ನೂ ಓದಿ: ಮನೆಯ ಒಳಗಡೆ ನುಗ್ಗಿ ಅಪರಿಚಿತ ವ್ಯಕ್ತಿಯಿಂದ ಲಷ್ಕರ್‌ ಉಗ್ರನಿಗೆ ಗುಂಡೇಟು!

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ವ್ಯಾಪಾರ ವಿಸ್ತರಿಸಲು ಸಿದ್ಧವಾಗಿವೆ. ಭಯೋತ್ಪಾದಕ ಶಕ್ತಿಗಳ ವಿರುದ್ಧ ಹೋರಾಡುವುದು ಮತ್ತು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ಬಗ್ಗೆ ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ವಾಂಗ್‌ ಹೇಳಿದ್ದಾರೆ.

ಬುಧವಾರ ನಡೆದ ಅನೌಪಚಾರಿಕ ತ್ರಿಪಕ್ಷೀಯ ಸಭೆಯಲ್ಲಿ ಚೀನಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಅನ್ನು ಅಫ್ಘಾನಿಸ್ತಾನಕ್ಕೆ ವಿಸ್ತರಿಸಲು ಒಪ್ಪಿಕೊಂಡಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲು – ತಾಲಿಬಾನ್‌ ವಿದೇಶಾಂಗ ಸಚಿವರ ಜೊತೆ ಜೈಶಂಕರ್‌ ಮಾತುಕತೆ

ಪಾಕಿಸ್ತಾನ ಸಾವಿರಾರು ಸಂಖ್ಯೆಯಲ್ಲಿ ನಿರಾಶ್ರಿತರನ್ನು ಗಡೀಪಾರು ಮಾಡುತ್ತಿರುವುದಕ್ಕೆ ಅಫ್ಘಾನಿಸ್ತಾನ ವಿರೋಧ ವ್ಯಕ್ತಪಡಿಸುತ್ತಿದೆ.  ಇದರ ಜೊತೆ ಡಿಸೆಂಬರ್ 2024 ರಲ್ಲಿ ಪಾಕಿಸ್ತಾನದ ವಾಯುಪಡೆಯು ಅಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದಲ್ಲಿ ಬಾಂಬ್ ದಾಳಿ ಮಾಡಿದ ನಂತರ ಸುಮಾರು 50 ಜನರು ಮೃತರಾದ ಬಳಿಕ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಮತ್ತಷ್ಟು ಹಾಳಾಗಿದೆ.

ಅಫ್ಘಾನಿಸ್ತಾನ ಭಯೋತ್ಪಾದಕರಿಗೆ ಸ್ವರ್ಗ ಎಂದು ಪಾಕ್‌ ಆರೋಪಿಸಿದೆ. ಆದರೆ ಈ ಆರೋಪವನ್ನು ಅಫ್ಘಾನಿಸ್ತಾನ ತಿರಸ್ಕರಿಸಿದೆ.

ಕಳೆದ ವಾರ ಜೈಶಂಕರ್ ತಾಲಿಬಾನ್‌ನ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರೊಂದಿಗೆ ಮೊದಲ ಬಾರಿಗೆ ದೂರವಾಣಿಯಲ್ಲಿ ಮಾತನಾಡಿದ್ದರು. ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದ ಜೊತೆ ಭಾರತವು ನಡೆಸಿದ ಮೊದಲ ಸಚಿವ ಮಟ್ಟದ ಸಂಪರ್ಕ ಇದಾಗಿತ್ತು.

Share This Article