ಮೋದಿ ಸರ್ಕಾರ ಬಂದ್ಮೇಲೆ ಪಾಕಿಸ್ತಾನದಲ್ಲಿ 4 ಬಾರಿ ಮನೆ ಬದಲಿಸಿದ್ದಾನೆ ದಾವೂದ್: ಸಹೋದರನೇ ಬಾಯ್ಬಿಟ್ಟ ಸತ್ಯ

Public TV
2 Min Read

ಮುಂಬೈ: 1993ರ ಮುಂಬೈ ಸರಣಿ ಸ್ಫೋಟದ ಆರೋಪಿಯಾದ ಭೂಗತ ದೊರೆ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾನೆ ಎಂದು ಸಹೋದರ ಇಕ್ಬಾಲ್ ಕಸ್ಕರ್ ಬಾಯ್ಬಿಟ್ಟಿದ್ದಾನೆ.

ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿ 8 ದಿನಗಳ ಪೊಲೀಸ್ ವಶದಲ್ಲಿರೋ ಕಸ್ಕರ್, ವಿಚಾರಣೆ ವೇಳೆ ಹಲವಾರು ಸಂಗತಿಗಳನ್ನ ಬಹಿರಂಗಪಡಿಸಿದ್ದಾನೆ. ಡಿ ಕಂಪೆನಿ ಮುಖ್ಯಸ್ಥನಾದ ದಾವೂದ್ ಪಶ್ಚಿಮ ಮತ್ತು ಪೂರ್ವ ಆಫ್ರಿಕಾ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಿದ್ದಾನೆಂದು ತಿಳಿಸಿದ್ದಾನೆ. ಅಲ್ಲದೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಾವೂದ್ ಪಾಕಿಸ್ತಾನದಲ್ಲಿ 4 ಬಾರಿ ತನ್ನ ವಿಳಾಸವನ್ನ ಬದಲಾಯಿಸಿದ್ದಾನೆ ಎಂದು ಕಸ್ಕರ್ ಹೇಳಿದ್ದಾನೆ.

ಜೊತೆಗೆ ಪಾಕಿಸ್ತಾನದಲ್ಲಿ ದಾವೂದ್‍ನ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ದಾವೂದ್ ತನ್ನ ಕುಟುಂಬ ಸದಸ್ಯರೊಂದಿಗೆ ಫೋನ್‍ನಲ್ಲಿ ಮಾತನಾಡುವುದಿಲ್ಲ. ಆತನಿಗೆ ಲ್ಯಾಟಿನ್ ಅಮೆರಿಕದ ಡ್ರಗ್ಸ್ ದೊರೆಗಳೊಂದಿಗೆ ಸಂಪರ್ಕವಿದೆ ಎಂದು ಹೇಳಿದ್ದಾನೆ.

ದಾವೂದ್ ನೇರವಾಗಿ ಅಥವಾ ಪರೋಕ್ಷವಾಗಿ ಸುಲಿಗೆ ದಂಧೆಯಲ್ಲಿ ಭಾಗಿಯಾಗಿದ್ದಾನಾ? ಆತನನ್ನು ಈ ಪ್ರಕರಣದಲ್ಲಿ ಆರೋಪಿಯನ್ನಾಗಿಸಬಹುದಾ ಎಂಬ ನಿಟ್ಟಿನಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಈ ವೇಳೆ ಕಸ್ಕರ್ ಈ ಎಲ್ಲಾ ವಿಚಾರವನ್ನ ಬಹಿರಂಗಪಡಿಸಿದ್ದಾನೆ.

ಸೋಮವಾರದಂದು ಮುಂಬೈನ ಮನೆಯಿಂದ ಇಕ್ಬಾಲ್ ಕಸ್ಕರ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಭಾರೀ ಭದ್ರತೆಯೊಂದಿಗೆ ನಡೆದ ಈ ಕಾರ್ಯಾಚರಣೆಯಲ್ಲಿ ಹಲವಾರು ಪೊಲೀಸ್ ಸಂಸ್ಥೆಗಳು ಭಾಗಿಯಾಗಿದ್ದವು. 2003ರಲ್ಲಿ ಯುನೈಟೆಡ್ ಅರಬ್ ಎಮಿರೈಟ್ಸ್ ನಿಂದ ಗಡಿಪಾರಾದ ಇಕ್ಬಾಲ್ ನಗರದಲ್ಲಿ ತನ್ನ ಸಹೋದರನ ರಿಯಲ್ ಎಸ್ಟೇಟ್ ಉದ್ಯಮವನ್ನ ನೋಡಿಕೊಳ್ಳುತ್ತಿದ್ದಾನೆ ಎಂದು ಹೇಳಲಾಗಿದೆ ಅಂತ ಪೊಲೀಸರು ಹೇಳಿದ್ದಾರೆ.

ಸರಣಿ ಸ್ಫೋಟಗಳ ನಂತರ ಪಾಕಿಸ್ತಾನಕ್ಕೆ ಪರಾರಿಯಾಗಿರುವ ದಾವೂದ್ ಕರಾಚಿಯಲ್ಲಿ ಬಂಗ್ಲೋ ನಂ. 13, ಬ್ಲಾಕ್ 4 ಕ್ಲಿಫ್ಟನ್- ಈ ವಿಳಾದಲ್ಲಿ ನೆಲೆಸಿದ್ದಾನೆ ಎಂದು ನಂಬಲಾಗಿದೆ. 1986ರಲ್ಲಿ ಭಾರತದಿಂದ ಪರಾರಿಯಾದ ದಾವೂದ್‍ನನ್ನು ಸೆರೆಹಿಡಿಯಲು ಭಾರತ ತನ್ನ ಪ್ರಯತ್ನವನ್ನ ಮತ್ತಷ್ಟು ತೀವ್ರಗೊಳಿಸಿದೆ. ದಾವೂದ್ ಪಾಕಿಸ್ತಾನದಲ್ಲೇ ಇದ್ದು, ಆತನನ್ನು ಭಾರತಕ್ಕೆ ವಾಪಸ್ ಕರೆತರಲು ಭಾರತ ನಿಶ್ಚಯಿಸಿದೆ ಎಂದು ನರೇಂದ್ರ ಮೋದಿ ಸರ್ಕಾರ ನಿರಂತರವಾಗಿ ಹೇಳುತ್ತಾ ಬಂದಿದೆ. ಆದ್ರೆ ದಾವೂದ್ ಪಾಕಿಸ್ತಾನಲ್ಲಿ ಇದ್ದಾನೆ ಎಂಬುದನ್ನ ಪಾಕಿಸ್ತಾನ ನಿರಾಕರಿಸುತ್ತಲೇ ಬಂದಿದೆ.

ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಕರ್, ಹತ್ತಿರದ ಸಂಬಂಧಿ ಮುಮ್ತಾಜ್ ಈಜಾಝ್ ಶೇಕ್ ಹಾಗೂ ಮತ್ತೊಬ್ಬ ಸಹಚರ ಇಸ್ರಾರ್ ಜಮೀಲ್ ಸಯ್ಯದ್‍ನನ್ನು ಥಾಣೆ ಪೊಲೀಸ್‍ನ ಆ್ಯಂಟಿ ಎಕ್ಟಾರ್ಷನ್ ಸೆಲ್ ಬಂಧಿಸಿದೆ. 2013ರಿಂದ ಸುಲಿಗೆ ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಈ ಮೂವರನ್ನೂ ಬಂಧಿಸಲಾಗಿದ್ದು, ಪೊಲೀಸ್ ಕಸ್ಟಡಿಯಲ್ಲಿ ಮತ್ತಷ್ಟು  ವಿಚಾರಣೆ ನಡೆಯುತ್ತಿದೆ.

ಕಸ್ಕರ್ ಹಾಗೂ ಆತನ ಸಹಚರರು 2013ರಿಂದಲೂ ದಾವೂದ್ ಹೆಸರಿನಲ್ಲಿ ಥಾಣೆಯ ಪ್ರಮುಖ ಬಿಲ್ಡರ್‍ವೊಬ್ಬರನ್ನ ಬೆದರಿಸಿ 30 ಲಕ್ಷ ರೂ. ಹಾಗೂ ನಾಲ್ಕು ಫ್ಲಾಟ್‍ಗಳನ್ನ ಸುಲಿಗೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮಂಗಳವಾರದಂದು ದಾವೂದ್ ಸಹೋದರ ಇಕ್ಬಾಲ್‍ನನ್ನು 8 ದಿನಗಳ ಕಾಲ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *