ದಾವಣಗೆರೆ: ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. ಹಬ್ಬದ ದಿನ ದೀಪ ಹಚ್ಚಿ, ಪಟಾಕಿ ಸಿಡಿಸಿ ಎಲ್ಲರೂ ಸಂಭ್ರಮ ಪಡುತ್ತಾರೆ. ಇಲ್ಲೊಂದು ಗ್ರಾಮದಲ್ಲಿ ದೀಪಾವಳಿ (Deepavali) ಅಂದ್ರೇನೆ ಭಯ ಅಂತೇ, ಈ ಹಬ್ಬ ಬಂದ್ರೆ ಇಲ್ಲಿನ ಜನ ಕರಾಳ ದಿನ ಬಂದಂತೆ ಅಂತಾರೆ. ಅಯ್ಯೋ ಇಂತಹದ್ದು ಒಂದು ಊರು ಇದಿಯಾ? ಅಂತೀರಾ. ಹೌದು, ಅನಾದಿಕಾಲದಿಂದಲೂ ದೀಪಾವಳಿಗೆ ಭಯಪಡುವ ಗ್ರಾಮದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ದಾವಣಗೆರೆ (Davangere) ತಾಲೂಕಿನ ಲೋಕಿಕೆರೆ ಗ್ರಾಮದ ಕೆಲ ಸಮುದಾಯದ ಜನರಿಗೆ ದೀಪಾವಳಿ ಹಬ್ಬ ಕರಾಳ ದಿನವಂತೆ. ವಿವಿಧ ಕಾರಣಕ್ಕೆ ಕಳೆದ ಆರೇಳು ತಲೆಮಾರುಗಳಿಂದ ದೀಪಾವಳಿ ನಮ್ಮ ಪಾಲಿಗೆ ಕರಾಳ ಹಬ್ಬ ಎನ್ನುವ ನಂಬಿಕೆಯಲ್ಲಿ ದೀಪಾವಳಿಯಿಂದ ಗ್ರಾಮದ ಸುಮಾರು 200 ಕ್ಕೂ ಅಧಿಕ ಕುಟುಂಬಗಳು ದೂರ ಉಳಿದಿವೆ. ದೇಶದೆಲ್ಲೆಡೆ ಮನೆ ಮನೆಯಲ್ಲಿ ಬೆಳಕು ಮೂಡಿದರೆ, ಇಲ್ಲಿ ಮಾತ್ರ ಕತ್ತಲು ಆವರಿಸಿರುತ್ತದೆ. ಇದನ್ನೂ ಓದಿ: ಪಟಾಕಿ ಸಿಡಿಸಲು ಹೋಗಿ ಅನಾಹುತ – ನಾರಾಯಣ ನೇತ್ರಾಲಯದಲ್ಲಿ 20 ಕೇಸ್ ದಾಖಲು
ಈ ಗ್ರಾಮದವರು ಹಬ್ಬ ಮಾಡದಿರಲು ಸಾಕಷ್ಟು ಕಾರಣ ಹೇಳುತ್ತಾರೆ. ನೂರಾರು ವರ್ಷದ ಹಿಂದೆ ಈ ಗ್ರಾಮದಲ್ಲಿ ವಿವಿಧ ಸಮುದಾಯದ ನೂರಾರು ಯುವಕರು ದೀಪಾವಳಿ ಹಬ್ಬದ ದಿನದಂದೇ ಕಾಣೆಯಾಗಿದ್ದರಂತೆ. ಹಬ್ಬದ ದಿನ ಪೂಜೆಗಾಗಿ, ಉತ್ರಾಣಿ ಕಡ್ಡಿ, ಕಾಶಿಕಡ್ಡಿ, ಹೂ ತರಲು ಊರಿಂದ ಹೊರಗೆ ಹೋದವರು ಮರಳಿ ಬರಲೇ ಇಲ್ವಂತೆ. ಗ್ರಾಮಸ್ಥರು ಅದೆಷ್ಟೇ ಹುಡುಕಿದರೂ ಅವರು ಸುಳಿವು ಸಿಗಲಿಲ್ಲ ಅದೇ ಕಾರಣಕ್ಕೆ ಅಂದೆ ದೀಪಾವಳಿ ಕರಾಳ ದಿನ ಎಂದು ಹಬ್ಬ ಆಚರಣೆ ಕೈಬಿಟ್ಟಿದ್ದಾರೆ. ಅದು ತಲೆ ತಲೆಮಾರುಗಳಿಂದ ಇಲ್ಲಿ ಮುಂದುವರೆಯುತ್ತಾ ಬಂದಿದೆ.
ಯಾವುದಕ್ಕೂ ಆಗಿದ್ದೆಲ್ಲಾ ಆಗಿ ಹೋಗಿದೆ, ಹಿಂದಿನದೆಲ್ಲಾ ಏಕೆ ಎಂದು ದೀಪಾವಳಿ ಹಬ್ಬ ಆಚರಣೆ ಮಾಡಲು ಐದು ದಶಕದ ಹಿಂದೆ ನಿರ್ಧಾರ ಮಾಡಿದ್ದರು. ಎಂದಿನಂತೆ ದೀಪಾವಳಿ ಹಬ್ಬದ ದಿನದಂದು ಹಬ್ಬ ಆಚರಣೆ ಮಾಡಲು ಮುಂದಾಗಿದ್ದಾರೆ ಈ ವೇಳೆ ಏಕಾಏಕಿ ಜಮೀನಿನಲ್ಲಿನ ಪೈರಿಗೆ, ಹುಲ್ಲಿನ ಬಣವಿಗೆ ಬೆಂಕಿ ಬಿದ್ದು ಹೊತ್ತಿ ಉರಿದಿದೆ. ಇದನ್ನು ಕಂಡು ಆ ಕುಟುಂಬಸ್ಥರು ಮತ್ತಷ್ಟು ಆತಂಕಗೊಂಡಿದ್ದಾರೆ, ಅವತ್ತೇ ಕೊನೆ ಮುಂದೆ ಯಾವತ್ತೂ ಹಬ್ಬ ಮಾಡುವ ಯೋಚನೆಯನ್ನೇ ಇವರು ಮಾಡಿಲ್ಲವಂತೆ. ಇದನ್ನೂ ಓದಿ: ದೀಪಾವಳಿ 2025 – ಬಲಿಪಾಡ್ಯಮಿ ಹಬ್ಬದ ಮಹತ್ವ ಏನು?