ಸುರೇಶ್ ಅಂಗಡಿಗೆ ಸಾರ್ವಜನಿಕರಿಂದ ಕ್ಲಾಸ್

Public TV
1 Min Read

ದಾವಣಗೆರೆ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ಸಾರ್ವಜನಿಕರು ಕ್ಲಾಸ್ ತೆಗೆದುಕೊಂಡ ಪ್ರಸಂಗ ಇಂದು ನಗರದಲ್ಲಿ ನಡೆದಿದೆ.

ಸುರೇಶ್ ಅಂಗಡಿ ಅವರು ನಗರದ ಅಶೋಕ ರೈಲ್ವೆ ಮೇಲ್ಸೇತುವೆ ಕಾಮಗಾರಿ ವೀಕ್ಷಣೆಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಸಾರ್ವಜನಿಕರು ಕೇಂದ್ರ ಸಚಿವರ ಕಾರನ್ನು ತಡೆದು ತರಾಟೆಗೆ ತೆದುಕೊಂಡರು. ಹಲವು ವರ್ಷಗಳಿಂದ ಮೇಲ್ಸೇತುವೆ ಕಾಮಗಾರಿ ನೆನೆಗುಂದಿಗೆ ಬಿದ್ದಿದೆ. ರೋಗಿಗಳು, ಅಂಬುಲೆನ್ಸ್ ಗಳು ಹೋಗಬೇಕು ಎಂದರೆ ಗಂಟೆಗಟ್ಟಲೇ ಕಾಯುವಂತಾಗಿದೆ. ಕೂಡಲೇ ಕಾಮಗಾರಿ ಶುರುಮಾಡಿ ಎಂದು ಆಗ್ರಹಿಸಿದರು.

ಕೇಂದ್ರ ಸಚಿವರು ನಗುತ್ತಲೇ, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ತಿಳಿಸಿದರು. ಈ ವೇಳೆ ಕೆಲ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರನ್ನು ಸಮಾಧಾನ ಮಾಡಿದರು.

ಇದಕ್ಕೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ ಕೇಂದ್ರ ಸಚಿವರು, ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ರೈಲ್ವೆ ಇಲಾಖೆ ನಡೆಸುವ ಪರೀಕ್ಷೆಯನ್ನು ಬರೆಯಬೇಕು. ಈ ಮೂಲಕ ಭವಿಷ್ಯದಲ್ಲಿ ಕನ್ನಡಿಗರಿಗೆ ರೈಲ್ವೆ ಇಲಾಖೆಯಲ್ಲಿ ಹೆಚ್ಚು ಅವಕಾಶ ಸಿಗಲಿದೆ. ಈ ನಿಟ್ಟಿನಲ್ಲಿ ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ)ಯನ್ನು ಹುಬ್ಬಳ್ಳಿಗೆ ಶಿಫ್ಟ್ ಮಾಡುತ್ತಿದ್ದೇವೆ. ಹೀಗಾಗಿ ಯುವಕರು ರೈಲ್ವೆ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.

ದಾವಣಗೆರೆ ರೈಲ್ವೆ ನಿಲ್ದಾಣವನ್ನು ನವೀಕರಿಸಿ, ಸುಸಜ್ಜಿತ ನಿಲ್ದಾಣವನ್ನಾಗಿ ಮಾಡಲಾಗುವುದು. ಈಗಾಗಲೇ ನೂತನ ರೈಲ್ವೆ ನಿಲ್ದಾಣದ ನಕ್ಷೆ ಸಿದ್ಧವಾಗಿದೆ. ಕಾಮಗಾರಿಯು ತೀವ್ರಗತಿಯಲ್ಲಿ ಸಾಗಲು ಸಂಸದ ಜಿ.ಎಂ.ಸಿದ್ದೇಶ್ವರ್ ಕಾಳಜಿ ವಹಿಸುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರವು ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಯಲದ ಮೂಲಕ ಕಾಂಗ್ರೆಸ್ ನಾಯಕರನ್ನು ಹೆದರಿಸಲಾಗುತ್ತಿದೆ ಎಂಬ ಆರೋಪವನ್ನು ಸುರೇಶ್ ಅಂಗಡಿ ತಳ್ಳಿ ಹಾಕಿದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ನನ್ನ ಮೇಲೆ ಐಟಿ ದಾಳಿ ಆಗಿತ್ತು. ಸಂವಿಧಾನ ಬದ್ಧ ಸಂಸ್ಥೆಗಳ ವಿಚಾರದಲ್ಲಿ ರಾಜಕೀಯ ಮಾತು ಸರಿಲ್ಲ. ಕಾಂಗ್ರೆಸ್‍ನವರು ಆರೋಪ ಮಾಡುತ್ತಾರೆ ಅದಕ್ಕೆ ನಾವು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *