– ಮತ್ತೆ ಕಾಂಗ್ರೆಸ್‌ನಲ್ಲಿ ಸಂಪುಟ ಪುನಾರಚನೆ ಸದ್ದು
ಬೆಂಗಳೂರು: ಎರಡು ಉಪಚುನಾವಣೆ, ಮೂರು ರಾಜ್ಯಗಳ ಚುನಾವಣೆ ಮುಗಿದ ಬೆನ್ನಲ್ಲೇ ಕಾಂಗ್ರೆಸ್ ಮತ್ತೆ ಚಟುವಟಿಕೆಗಳ ಕೇಂದ್ರವಾಗಿದೆ. ಒಂದು ಕಡೆ ಮುಗಿಯದ ದಾವಣಗೆರೆ ದಂಗಲ್ (Davangere By Election). ಸಚಿವ ಜಮೀರ್‌ಗೆ ಈಗ ಸ್ವ ಪಕ್ಷದಲ್ಲೇ ಸಂಕಷ್ಟ ಎದುರಾಗೋ ಮಟ್ಟಕ್ಕೆ ಪರಿಸ್ಥಿತಿ ಹೋಗಿದೆ. ಇನ್ನೊಂದು ಕಡೆ ಸಂಪುಟ ಪುನಾರಚನೆಗೆ ಮತ್ತೆ ಕೂಗೆದ್ದಿದೆ. ಸಚಿವಗಿರಿ ಕೇಳಿಕೊಂಡು ಹಿರಿಯ ಶಾಸಕರ ತಂಡ ನಾಳೆ ದೆಹಲಿಗೆ ಹೋಗಲಿದ್ದು, ಹೈಕಮಾಂಡ್ ಮುಂದೆ ಹಕ್ಕೊತ್ತಾಯ ಮಂಡಿಸಲಿದ್ದಾರೆ.
ದಾವಣಗೆರೆ ದಕ್ಷಿಣ ಉಪಚಚುನಾವಣೆ ಮತದಾನ ಮುಗೀತು ಆದ್ರೆ, ಕಾಂಗ್ರೆಸ್‌ನಲ್ಲಿ (Congress) ಬಂಡಾಯ, ಗೊಂದಲ ಯಾವುದೂ ಬಗೆಹರಿದಿಲ್ಲ. ಕ್ಷೇತ್ರದಲ್ಲಿ ಮುಸ್ಲಿಮರಿಗೆ (Muslims) ಟಿಕೆಟ್ ಕೊಡದ ಹಿನ್ನೆಲೆಯಲ್ಲಿ ಆರಂಭವಾಗಿದ್ದ ಜಟಾಪಟಿ ಚುನಾವಣೆ ಮುಗಿದ ಮೇಲೂ ಮುಂದುವರಿದಿದೆ.
ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡದ ಸಚಿವ ಜಮೀರ್ ಅಹ್ಮದ್ (Zameer Ahmed Khan) ವಿರುದ್ಧ ಮತ್ತೊಂದು ಮುಸ್ಲಿಂ ಬಣ ತಿರುಗಿ ಬಿದ್ದಿದೆ. ಪಕ್ಷದ ಅಭ್ಯರ್ಥಿ ಸೋಲಿಸಲು ಕೆಲ ಮುಸ್ಲಿಂ ನಾಯಕರೇ ಹುನ್ನಾರ ನಡೆಸಿದ್ದಾರೆ. ಜಮೀರ್ ಅಹಮದ್ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿಲ್ಲ. ಪ್ರಚಾರಕ್ಕೆ ಅಂತ ಬಂದಿದ್ರೂ ಅವರ ನಡೆ ಯಾರಿಗೂ ಸಮಾಧಾನ ತಂದಿಲ್ಲ. ಮುಸ್ಲಿಂ ನಾಯಕರ ಮನವೊಲಿಕೆ ಮಾಡದೇ ಜಮೀರ್ ನಿರ್ಲಕ್ಷ್ಯ ಮಾಡಿದ್ದಾರೆ. ಜಮೀರ್ ಜತೆಗೆ ಎಮ್‌ಎಲ್‌ಸಿ ಹಾಗೂ ಆಕಾಂಕ್ಷಿ ಅಬ್ದುಲ್ ಜಬ್ಬಾರ್ ಸಹ ಪ್ರಚಾರದಿಂದ ದೂರ ಉಳಿದಿದ್ದರು. ಯಾರೆಲ್ಲ ಪ್ರಚಾರ ನಡೆಸಲಿಲ್ವೋ ಅವರ ವಿರುದ್ಧ ಕ್ರಮ ಆಗಲೇಬೇಕೆಂದು ಒಂದು ಬಣ ಪಟ್ಟು ಹಿಡಿದಿದೆ. ಈಗಾಗಲೇ ಸಚಿವ ಜಮೀರ್ ವಿರುದ್ಧ ಹೈಕಮಾಂಡ್‌ಗೆ ಖುದ್ದು ಸುರ್ಜೇವಾಲಾ ರಿಪೋರ್ಟ್ ನೀಡಿದ್ದಾರೆ. ಅಲ್ಲದೇ ಜಮೀರ್‌ಗಿರುವ ಮುಸ್ಲಿಂ ಲೀಡರ್‌ಶಿಪ್ ಹಣೆಪಟ್ಟಿ ಕೆಡಿಸಿ ಹಣಿಯೋ ರಾಜಕಾರಣನೋ? ಅಥವಾ ಪವರ್ ಫೈಟ್ ಪರದೆ ಹಿಂದಿನ ಹೊಸ ಆಟವೂ ಇರಬಹುದು ಎನ್ನಲಾಗಿದೆ.
ಈ ದಂಗಲ್ ಬಗ್ಗೆ ಮಾತಾಡಿದ ಡಿಕೆ ಸುರೇಶ್, ಆರೋಪ ಪ್ರತ್ಯಾರೋಪಗಳು ಸಹಜ. ಆದ್ರೆ ಪಕ್ಷ ಎಲ್ಲವನ್ನೂ ಗಮನಿಸುತ್ತದೆ, ಮುಸ್ಲಿಂ ಸಮುದಾಯವನ್ನ ದಾರಿ ತಪ್ಪಿಸಿದ್ದಾರೆ ಎಂಬ ಆರೋಪ ವಿಚಾರಕ್ಕೆ ಈ ಬಗ್ಗೆ ಮಾಹಿತಿ ಇಲ್ಲ. ನನ್ನ ಪ್ರಕಾರ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ, ಗೆದ್ಮೇಲೆ ಎಲ್ಲವೂ ಶೂನ್ಯವಾಗುತ್ತದೆ ಎಂದಿದ್ದಾರೆ.
ಇನ್ನೂ ದಾವಣಗೆರೆಯಲ್ಲಿ ಪ್ರಚಾರ ಮಾಡದ್ದಕ್ಕೆ ದೂರು ವಿಚಾರವಾಗಿ ʻಪಬ್ಲಿಕ್ ಟಿವಿʼಗೆ ಎಂಎಲ್‌ಸಿ ಅಬ್ದುಲ್ ಜಬ್ಬಾರ್, ಜಮೀರ್‌ಗೆ ಒಂದೆರಡು ಬಾರಿ ಮಲ್ಲಿಕಾರ್ಜುನ್ ಅಪಮಾನ ಮಾಡಿದ್ರು. ಆದರೂ ಅಪಮಾನದ ಮಧ್ಯೆಯೇ ಜಮೀರ್ ಚುನಾವಣಾ ಪ್ರಚಾರ ಮಾಡಿದ್ರು. ನನಗೆ ಅಪಮಾನ ಮಾಡಿದ್ರೆ ನಾನು ಹೋಗುತ್ತಿರಲಿಲ್ಲ. ನನ್ನನ್ನು ಪ್ರಚಾರಕ್ಕೆ ಕರೆದಿರಲಿಲ್ಲ. ಹೀಗಾಗಿ ನಾನು ಹೋಗ್ಲಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆಶಿ, ನನಗೂ ಕೆಲ ರಿಪೋರ್ಟ್ಸ್ ಬಂದಿದೆ. ನಾನು ಅದನ್ನ ಪರಿಶೀಲಿಸುತ್ತೇನೆ. ಲೋಕಲ್ ಲೀಡರ್ಸ್ ಹತ್ತಿರ ರಿಪೋರ್ಟ್ ತರಿಸಿಕೊಳ್ಳುತ್ತೇನೆ. ವರದಿ ಪಡೆದು ನಂತರ ಮಾತಾಡುತ್ತೇನೆ ಎಂದಿದ್ದಾರೆ.
ಮತ್ತೆ ಕಾಂಗ್ರೆಸ್‌ನಲ್ಲಿ ಸಂಪುಟ ಪುನಾರಚನೆ ಸದ್ದು!
ʻಕೈʼ ಪಡೆಯಲ್ಲಿ ಮತ್ತೆ ರಣರಣ ರಾಜಕೀಯ ಶುರುವಾಗಿದೆ. ಬೈಎಲೆಕ್ಷನ್ ಮುಗಿದ ಬೆನ್ನಲ್ಲೇ ಸಂಪುಟ ಪುನಾರಚನೆ ಕೂಗು ಜೋರಾಗುತ್ತಿದೆ. ಈ ಮಧ್ಯೆ ನಾಳೆಯೇ (ಭಾನುವಾರ) ದೆಹಲಿಗೆ ಹಿರಿಯ ಶಾಸಕರು ಹಾರಲಿದ್ದಾರೆ. ಭಾನುವಾರ ಮಧ್ಯಾಹ್ನ ಸುಮಾರು ನಲವತ್ತು ಹಿರಿಯ ಶಾಸಕರು ದೆಹಲಿಗೆ ಹೊರಡಲಿದ್ದಾರೆ. ದೆಹಲಿಯಲ್ಲೇ 2-3 ದಿನಗಳ ಕಾಲ ವಾಸ್ತವ್ಯ ಹೂಡಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಸುರ್ಜೇವಾಲ, ಸಾಧ್ಯವಾದರೆ ರಾಹುಲ್ ಗಾಂಧಿ ಭೇಟಿ ಮಾಡಲು ಹಿರಿಯರು ಯೋಜಿಸಿದ್ದಾರೆ. ಶಾಸಕರಾದ ಬಾಲಕೃಷ್ಣ, ಎನ್.ಎ ಹ್ಯಾರಿಸ್, ಅಶೋಕ್ ಪಟ್ಟಣ್, ಷಡಕ್ಷರಿ, ಶಾಂತನಗೌಡ, ನಾರಾಯಣ ಸ್ವಾಮಿ, ಎಂ.ವೈ ಪಾಟೀಲ್, ರಘು ಮೂರ್ತಿ, ಮಹಾಂತೇಶ್ ಕೌಜಲಗಿ, ಬಸವರಾಜ ರಾಯರೆಡ್ಡಿ, ಆರ್.ವಿ ದೇಶಪಾಂಡೆ, ಟಿ.ಬಿ ಜಯಚಂದ್ರ, ಬಿ.ಕೆ ಹರಿಪ್ರಸಾದ್, ಲಕ್ಷ್ಮಣ್ ಸವದಿ, ಬಿ.ಆರ್.ಪಾಟೀಲ್ ಸೇರಿದಂತೆ ಹಲವರು ನಾಳೆ ದೆಹಲಿಗೆ ಹೋಗಲು ಲಗೇಜ್ ಪ್ಯಾಕ್ ಮಾಡಿಕೊಂಡಿದ್ದಾರೆ.
ಈ ಮಧ್ಯೆ ಮುಂದಿನ 5 ವರ್ಷವೂ ಸಿದ್ದರಾಮಯ್ಯ ಸಿಎಂ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಪರಂ, ಜಮೀರ್ ಬಳಿಕ ಸಚಿವ ಜಾರಕಿಹೊಳಿ ಕೂಡ ಭವಿಷ್ಯ ನುಡಿದಿದ್ದಾರೆ. ಐದು ವರ್ಷದವರೆಗೂ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಯುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡವೆಂದು ಸಚಿವರು ಹೇಳಿದ್ದಾರೆ.


