ಬೆಣ್ಣೆ ನಗರಿ ಮಹಿಳೆಯರ ರಕ್ಷಣೆಗೆ ಸಜ್ಜಾಗಿದೆ ಖಾಕಿ ಪಡೆ

Public TV
2 Min Read

ದಾವಣಗೆರೆ: ಜಿಲ್ಲೆಯಾದ್ಯಂತ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಪೊಲೀಸ್ ಇಲಾಖೆಯು ಹಲವು ಯೋಜನೆಗಳಡಿ 24×7 ಕಾರ್ಯನಿರ್ವಹಿಸಲಿದೆ ಎಂದು ದಾವಣಗೆರೆಯ ಎಸ್.ಪಿ ಹನುಮಂತರಾಯ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇದರಿಂದ ನಗರ ಹಾಗೂ ತಾಲೂಕುಗಳಲ್ಲಿ ಪೊಲೀಸ್ ಗಸ್ತು ವಾಹನ ರಾತ್ರಿ 11 ಗಂಟೆಯಿಂದ ಬೆಳಗ್ಗಿನ ಜಾವ 4 ಗಂಟೆಯವೆರೆಗೆ ಸಂಚರಿಸುತ್ತದೆ. ನಗರದಲ್ಲಿ 7 ಪಿಸಿಆರ್ ವಾಹನಗಳು, 14 ಚೀತಾ ವಾಹನಗಳು (ಮೋಟಾರ್ ಸೈಕಲ್) ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ 7 ಗಸ್ತುವಾಹನಗಳು ಕಾರ್ಯನಿರ್ವಹಿಸಲಿವೆ. ಈ ವಾಹನಗಳು ಜಿಪಿಎಸ್ ವ್ಯವಸ್ಥೆ ಹೊಂದಿದ್ದು, ತೊಂದರೆಯಲ್ಲಿರುವ ಮಹಿಳೆಯರನ್ನು ರಕ್ಷಿಸಲು ಅನುಕೂಲವಾಗಲಿದೆ ಎಂದರು.

ರಾತ್ರಿ ಸಮಯದಲ್ಲಿ ಮಹಿಳೆಯರು ತೊಂದರೆಯಲ್ಲಿದ್ದಾಗ, ಮನೆಗೆ ತಲುಪಲು ಸಮಸ್ಯೆಯಾದಾಗ ತಕ್ಷಣ ಜಿಲ್ಲಾ ಪೊಲೀಸ್ ಸಹಾಯವಾಣಿ ಮೊ.ನಂ:9480803200, ಸ್ಥಿರ ದೂರವಾಣಿ 08192-253100, 08192-262699 ಹಾಗೂ ಎಮರ್ಜೆನ್ಸಿ ರಿಜಿಸ್ಟ್ರೇಷನ್ ಸಿಸ್ಟಮ್ ನಂ. 112/100 ಗೆ ಕರೆ ಮಾಡಿ ಜಿಲ್ಲಾ ಪೊಲೀಸರ ಸಹಾಯ ಪಡೆಯಬಹುದು. ಈಗಾಗಲೇ ಜಿಲ್ಲಾ ನಿಸ್ತಂತು ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊಬೈಲ್ ನಂಬರ್‍ಗಳು, ಸ್ಥಿರ ದೂರವಾಣಿ ಸಂಖ್ಯೆಗಳೂ ಕಾರ್ಯ ನಿರ್ವಹಿಸುತ್ತಿದ್ದು, ಇನ್ನೂ ಚುರುಕಾಗಿ ಕಾರ್ಯನಿರ್ವಹಿಸಲು ಒತ್ತು ನೀಡಲಾಗುವುದು ಎಂದರು.

ಸಹಾಯವಾಣಿಗೆ ಬರುವ ಕರೆಗಳನ್ನು ಸ್ವೀಕರಿಸುವ ಕಂಟ್ರೋಲ್ ರೂಮ್ ಸಿಬ್ಬಂದಿಯವರು ತಕ್ಷಣವೇ ಆ ಮಾಹಿತಿಯನ್ನು ರಾತ್ರಿ ಕರ್ತವ್ಯದಲ್ಲಿರುವ ಪೊಲೀಸರಿಗೆ ರವಾನಿಸುತ್ತಾರೆ. ತಕ್ಷಣ ಪೊಲೀಸರು ವಾಹನದೊಂದಿಗೆ ನಿರ್ದಿಷ್ಟ ಸ್ಥಳ ತಲುಪಿ ಕಾರ್ಯ ಪ್ರವೃತ್ತರಾಗುತ್ತಾರೆ. ನಗರದಲ್ಲಿ ಗಸ್ತು ಮಾಡುವ ಪೊಲೀಸರು ನಗರದ ಯಾವುದೇ ಪ್ರದೇಶದಿಂದ ನೆರವು ಕೋರಿ ಬಂದರೂ ಕೆಲವೇ ನಿಮಿಷಗಳಲ್ಲಿ ಆ ಸ್ಥಳ ತಲುಪಿ ಸಹಾಯ ಮಾಡುವರು ಎಂದರು.

ಆ್ಯಪ್ ಸೌಲಭ್ಯ:
ಪೊಲೀಸ್ ಇಲಾಖೆಯು ಮಹಿಳೆಯರ ರಕ್ಷಣೆಗಾಗಿ ಕೆಎಸ್‍ಪಿ ಎಂಬ ಆ್ಯಪ್ ಪರಿಚಯಿಸಿದ್ದು, ಈ ಆ್ಯಪನ್ನು ಇನ್‍ಸ್ಟಾಲ್ ಮಾಡಿಕೊಂಡು ತ್ವರಿತ ನೆರವು ಪಡೆಯಬಹುದು. ಇದರಲ್ಲಿ ನಿಮಗೆ ಹತ್ತಿರವಿರುವ ಪೊಲೀಸ್ ಠಾಣೆ ಹಾಗೂ ಅಗತ್ಯ ದೂರವಾಣಿ ಸಂಖ್ಯೆಗಳು ಲಭ್ಯವಿರುತ್ತವೆ. ಇದರಲ್ಲಿ ಜಿಪಿಎಸ್ ಸೌಲಭ್ಯವಿದ್ದು, ನಿಮಗೆ ಸೂಕ್ತವೆನಿಸಿದ 5 ಜನರ ನಂಬರನ್ನು ಸೇವ್ ಮಾಡಿಕೊಳ್ಳಬೇಕು. ಹೀಗೆ ಮಾಡಿದ್ದಲ್ಲಿ ನೀವು ಒಮ್ಮೆ ಕರೆ ಅಥವಾ ಮೆಸೇಜ್ ಮಾಡಿದರೆ ಆ 5 ಜನರಿಗೂ ಮಾಹಿತಿ ತಿಳಿಯುತ್ತದೆ. ಇದು ಮಹಿಳೆಯರ ರಕ್ಷಣೆಗೆ ಉತ್ತಮವಾದ ಆ್ಯಪ್ ಆಗಿದ್ದು, ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಬೆಳಗ್ಗಿನ ಜಾವದಲ್ಲಿ ಗುಡ್ ಮಾರ್ನಿಂಗ್ ಬೀಟ್ ಎಂಬ ತಂಡ ಅಪರಾಧ ತಡೆ ಮತ್ತು ಮಹಿಳೆಯರ ಸುರಕ್ಷತೆಗಾಗಿ ಕಾರ್ಯ ನಿರ್ವಹಿಸಲಿದೆ. ಚೈನ್ ಸ್ನಾಚಿಂಗ್ ತಡೆಯುವುದು ಇದರ ಪ್ರಮುಖ ಉದ್ದೇಶವಾಗಿದೆ. ನಗರದಲ್ಲಿ ಮಹಿಳೆಯರ ರಕ್ಷಣೆಗಾಗಿ ದುರ್ಗಪಡೆ ರಚಿಸಿದ್ದು, ಈ ಪಡೆಗೆ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿದೆ. ಕಾಲೇಜ್, ಬಸ್‍ಸ್ಟ್ಯಾಂಡ್, ಶಾಪಿಂಗ್ ಮಾಲ್, ಚಿತ್ರಮಂದಿರಗಳು ಹಾಗೂ ಲೇಡಿಸ್ ಹಾಸ್ಟೆಲ್‍ನಂತಹ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಆತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯು ಈ ಎಲ್ಲಾ ಯೋಜನೆಗಳ ಮೂಲಕ ಮಹಿಳೆಯರಿಗೆ ರಕ್ಷಣೆ ಒದಗಿಸುವ ಕೆಲಸ ಮಾಡಲಿದೆ. ಈ ಎಲ್ಲಾ ಸಹಾಯವಾಣಿಗಳು 24×7  ಕಾರ್ಯನಿರ್ವಹಿಸಲಿದ್ದು, ಮಹಿಳೆಯರು ಈ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕೆಂದು ಎಸ್ ಪಿ ಹನುಮಂತರಾಯ ವಿವರಿಸಿದರು.

Share This Article
Leave a Comment

Leave a Reply

Your email address will not be published. Required fields are marked *