ಬೆಂಗಳೂರು: ದಾವಣಗೆರೆ ದಕ್ಷಿಣ (Davanagere South) ಟಿಕೆಟ್ ವಿಚಾರ ಕಾಂಗ್ರೆಸ್ (Congress) ಹೈಕಮಾಂಡ್‌ಗೆ ತಲೆನೋವಾಗಿದೆ. ಮುಸ್ಲಿಂ ಸಮುದಾಯದ ನಾಯಕರ ವಿರುದ್ಧ ಲಿಂಗಾಯತ ಸಮುದಾಯದ ನಾಯಕರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ರಾಜ್ಯ ಉಸ್ತುವಾರಿ ಸುರ್ಜೇವಾಲಾ ಮುಂದೆ ಸಚಿವರಾದ ಈಶ್ವರ್ ಖಂಡ್ರೆ, ಎಸ್.ಎಸ್.ಮಲ್ಲಿಕಾರ್ಜುನ ಅಸಮಾಧಾನ ವ್ಯಕ್ತಪಡಿಸಿದ್ದು, ಶಾಮನೂರು ಅವರಿಂದ ತೆರವಾದ ಕ್ಷೇತ್ರ ಅವರ ಕುಟುಂಬಕ್ಕೆ ಕೊಡಬೇಕು. ಸಾರ್ವತ್ರಿಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕ್ಲೈಮ್ ಮಾಡ್ಲಿ. ಆದರೆ, ಉಪಚುನಾವಣೆ ಸಂದರ್ಭದಲ್ಲಿ ಕ್ಲೈಮ್ ಮಾಡೋದು ಸರಿ ಇಲ್ಲ ಎಂದು ಅಭಿಪ್ರಾಯ ಹೇಳಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲಾ ಮುಂದೆ ಮುಸ್ಲಿಂ ಸಮುದಾಯದ ನಾಯಕರು ಒತ್ತಡ ಹೇರಿದ್ದಾರೆ. 2008ರಿಂದಲೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಆಗಿದೆ. ಸ್ವತಃ ಶಾಮನೂರು ಶಿವಶಂಕರಪ್ಪ ಅವರೇ ಮುಂದಿನ ಸಲ ಅಲ್ಪಸಂಖ್ಯಾತರಿಗೆ ಕ್ಷೇತ್ರ ಬಿಟ್ಟುಕೊಡುವುದಾಗಿ ಹೇಳಿದ್ರು. ಹಾಗಾಗಿ, ಉಪಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಶಾಮನೂರು ಕುಟುಂಬಕ್ಕೆ ಟಿಕೆಟ್ ಕೊಡೋದು ಬೇಡ, ನಮಗೆ ಕೊಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಸಚಿವ ಜಮೀರ್ ಅಹಮದ್, ಪರಿಷತ್ ಸದಸ್ಯ ನಸೀರ್ ಅಹಮದ್, ಶಾಸಕರಾದ ತನ್ವೀರ್ ಸೇಠ್, ರಿಜ್ವಾನ್ ಅರ್ಷಾದ್ ಒತ್ತಡ ಹೇರಿದ್ದು, ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಕುತೂಹಲ ಮೂಡಿಸಿದೆ.

