ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ (Davanagere) ಆಧ್ಯಾತ್ಮದ ಅಲೆ ಎದ್ದಿದೆ. ನಗರದ ಉದ್ಯಮಿ ದಂಪತಿ ಹಾಗೂ ಇಬ್ಬರು ಸುಶಿಕ್ಷಿತ ಯುವತಿಯರು ಲೌಕಿಕ ಸುಖ-ಸಂತೋಷಗಳನ್ನು ತ್ಯಜಿಸಿ, ಕಠಿಣ ಜೈನ (Jainism) ಸನ್ಯಾಸತ್ವ (Sanyasa Diksha) ಸ್ವೀಕರಿಸಿದ್ದಾರೆ.
ಆಚಾರ್ಯ ಶ್ರೀ ಅಭಯ್ ಶೇಖರ್ ಸುರೀಶ್ವರ ಜೀ ಮಹಾರಾಜ್ ಅವರ ಸಾನಿಧ್ಯದಲ್ಲಿ ಪುಣೆಯ ಸಿಂಬೋಸಿಸ್ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದುಕೊಂಡಿರುವ ಕ್ರನಾಲ್ ಬೇನ್ (30), ದಾವಣಗೆರೆಯ ಬಿ.ಕಾಂ ಪದವೀಧರೆ, ದೀಕ್ಷಿತ ಬೇನ್ (28) ಸನ್ಯಾಸತ್ವದ ದೀಕ್ಷೆ ಪಡೆದುಕೊಂಡರು. ಅಲ್ಲದೇ ದಾವಣಗೆರೆಯ ಲಲಿತ್ ಗಾರ್ಮೆಂಟ್ಸ್‌ನ ಮಾಲೀಕರಾದ ಭರತ್ ಜೈನ್ (52), ಪತ್ನಿ ಆರತಿ ಬೇನ್ (50) ಕೂಡ ಸನ್ಯಾಸತ್ವದ ದೀಕ್ಷೆ ಪಡೆದರು. ಇದನ್ನೂ ಓದಿ: ಜೈನ ಸನ್ಯಾಸ ದೀಕ್ಷೆ ಪಡೆದ ಶ್ರೀಮಂತ ಕುಟುಂಬಕ್ಕೆ ಸೇರಿದ 20ರ ಯುವತಿ
ಈಗಾಗಲೇ ಭರತ್ ಜೈನ್, ಆರತಿ ಬೇನ್ ದಂಪತಿಯ ಇಬ್ಬರು ಪುತ್ರರು ಮೂರು ವರ್ಷಗಳ ಹಿಂದೆಯೇ ಸನ್ಯಾಸತ್ವ ಸ್ವೀಕರಿಸಿದ್ದರು. ಮುನಿ ಶ್ರೀ ಮಗ್ನಶೇಖರ್ ವಿಜಯ್ ಜಿ ಮತ್ತು ಮುನಿ ಶ್ರೀ ಪೂರ್ಣ ಶೇಖರ್ ವಿಜಯ್ ಜಿ ಸನ್ಯಾಸತ್ವ ಸ್ವೀಕರಿಸಿದ್ದರು. ಈಗ ದಂಪತಿ ಕೋಟ್ಯಂತರ ರೂಪಾಯಿಯ ಹಣ-ಆಸ್ತಿ ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ್ದಾರೆ.
ಜೈನ ಧರ್ಮದಲ್ಲಿ ಸನ್ಯಾಸತ್ವ ಸ್ವೀಕರಿಸುವುದು ಎಂದರೆ ಸುಲಭದ ಮಾತಲ್ಲ. ಅದು ಕೆಂಡದ ಮೇಲೆ ನಡೆದಂತೆ. ಜೀವನ ಪೂರ್ತಿ ಬರಿಗಾಲಿನ ನಡಿಗೆ, ಅತಿಸೂಕ್ಷ್ಮ ಜೀವಿಗಳಿಗೂ ನೋವಾಗದಂತೆ ಬದುಕುವುದು, ಕೈಯಿಂದಲೇ ಕೂದಲನ್ನು ಕಿತ್ತುಕೊಳ್ಳುವ ಕಠಿಣ ವಿಧಿ ವಿಧಾನ, ಮೊಬೈಲ್, ವಿದ್ಯುತ್, ವಾಹನ ಸೇರಿದಂತೆ ಯಾವುದೇ ಭೌತಿಕ ವಸ್ತುಗಳನ್ನು ಬಳಸುವಂತಿಲ್ಲ. ಇಂತಹ ಕಠಿಣ ದೀಕ್ಷೆ ಪಡೆಯುವ ಮೂಲಕ ದಾವಣಗೆರೆಯ ಈ ನಾಲ್ವರು ಮುಮುಕ್ಷುಗಳು ಸಮಾಜಕ್ಕೆ ದೊಡ್ಡ ಸಂದೇಶ ನೀಡಿದ್ದಾರೆ. ಇದನ್ನೂ ಓದಿ: ದಾವಣಗೆರೆ | ಸನ್ಯಾಸತ್ವ ಸ್ವೀಕರಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿನಿ

