ಅತ್ತೆ, ಮಾವನ ಮೇಲಿನ‌ ಸಿಟ್ಟಿಗೆ ಅಡಿಕೆ ಮರಗಳನ್ನು ಕಡಿದು ಹಾಕಿದ ಸೊಸೆ!

Public TV
1 Min Read

ದಾವಣಗೆರೆ: ಐನಾತಿ ಸೊಸೆಯೊಬ್ಬಳು ತನ್ನ ಅತ್ತೆ ಹಾಗೂ ಮಾವನ ಮೇಲಿನ ಸಿಟ್ಟಿನಿಂದ ಅಡಿಕೆ ಮರಗಳನ್ನೇ ಕಡಿದು ಹಾಕಿದ ಪ್ರಸಂಗವೊಂದು ದಾವಣಗೆರೆಯಲ್ಲಿ (Davanagere) ನಡೆದಿದೆ.

ದಾವಣಗೆರೆ ತಾಲೂಕಿನ ಅವರಗೊಳ್ಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೂಪಾ ಕುಮಾರಸ್ವಾಮಿ ಅಡಿಕೆ ಮರಗಳನ್ನು (Arecanut Tree) ಕಡಿದು ಹಾಕಿದ ಆರೋಪಿ ಸೊಸೆ.

ಘಟನೆ ವಿವರ: ಚಿದಾನಂದ ಸ್ವಾಮಿ ಹಾಗೂ ಶಿವನಾಗಮ್ಮ ದಂಪತಿಗೆ ಮೂವರು ಪುತ್ರರಿದ್ದಾರೆ. ಹಿರಿಯ ಪುತ್ರ ಕುಮಾರಸ್ವಾಮಿಗೆ ರೂಪಾಳೊಂದಿಗೆ ಮದುವೆ ಮಾಡಿಸಲಾಗಿತ್ತು. ಆದರೆ ಮದುವೆಯಾದ ಬಳಿಕ ರೂಪಾ, ಹಲವಾರು ಬಾರಿ ಆಸ್ತಿಯಲ್ಲಿ ಪಾಲು ಕೇಳಿತ್ತಿದ್ದಳು. ಅಲ್ಲದೇ ಮಾವ ಚಿದಾನಂದಸ್ವಾಮಿ ಬಳಿ 8 ಲಕ್ಷ ರೂಪಾಯಿ ‌ಪಡೆದು ಮನೆ ಕೂಡ ಕಟ್ಟಿಸಿಕೊಂಡಿದ್ದಳು. ಸದ್ಯ ಈಕೆ ಮೂರು ವರ್ಷದ 40ಕ್ಕೂ ಹೆಚ್ಚು ಅಡಿಕೆ ಮರ ಕಡಿದು ಹಾಕುವ ಮೂಲಕ ಸಿಟ್ಟು ಹೊರಹಾಕಿದ್ದಾಳೆ. ಇದನ್ನೂ ಓದಿ: ಬೀದಿಬದಿ ವ್ಯಾಪಾರಿಗಳ ಮೇಲೆ ಪೊಲೀಸ್ ದರ್ಪ- ಸೊಪ್ಪನ್ನ ರಸ್ತೆಗೆ ಚೆಲ್ಲಿ ವಿಕೃತಿ!

ಈ ಸಂಬಂಧ ಚಿದಾನಂದ ಸ್ವಾಮಿಯವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ, ನಮಗೆ ವಯಸ್ಸಾಗಿದೆ. ನಮ್ಮನ್ನ ಸರಿಯಾಗಿ ನೋಡಿಕೊಳ್ಳದೆ ಸೊಸೆ ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದಾಳೆ. ಸಾಲದು ಎಂಬಂತೆ ಮಚ್ಚು ತಂದು ಅಡಿಕೆ ಮರಗಳನ್ನು ಕಡಿದು ಹಾಕಿದ್ದಾಳೆ ಎಂದು ಆರೋಪಿಸಿದ್ದಾರೆ.

ಘಟನೆ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜೊತೆಗೆ ಆರೋಪಿ ರೂಪಾಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Share This Article