ನೆರೆ ಹುಡುಗನೊಂದಿಗಿದ್ದ 13ರ ಮಗಳನ್ನೇ ಕೊಂದ ತಂದೆ

Public TV
1 Min Read

– ರಹಸ್ಯವಾಗಿ ಅಪ್ರಾಪ್ತೆಯ ಅಂತ್ಯಕ್ರಿಯೆ

ಲಕ್ನೋ: ನೆರೆಹೊರೆಯ ಹುಡುಗನೊಂದಿಗೆ ಮಾತನಾಡಿದ್ದಕ್ಕೆ 13 ವರ್ಷದ ಮಗಳನ್ನು ಸ್ವಂತ ತಂದೆಯೇ ಕೊಲೆ ಮಾಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ತುಂಡ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಮೊಹಮ್ಮದಾಬಾದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೊಲೀಸರಿಗೆ ಯಾವುದೇ ರೀತಿಯ ಅನುಮಾನ ಬರಬಾರದು ಎಂದು ಕುಟುಂಬದವರು ಅಪ್ರಾಪ್ತೆಯ ಮಗಳನ್ನು ರಹಸ್ಯವಾಗಿ ಅಂತ್ಯಕ್ರಿಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊಹಮ್ಮದಾಬಾದ್ ಗ್ರಾಮದಲ್ಲಿ 7ನೇ ತರಗತಿ ವಿದ್ಯಾರ್ಥಿನಿಯ ಕೊಲೆ ಮಾಡಿರುವ ಬಗ್ಗೆ ನಮಗೆ ಮಾಹಿತಿ ಬಂತು. ತಕ್ಷಣ ಪೊಲೀಸ್ ತಂಡ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಅಷ್ಟರಲ್ಲಿ ಬಾಲಕಿಯ ಅಂತ್ಯಕ್ರಿಯೆ ಮಾಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದೇವೆ. ತನಿಖೆಯ ಸಮಯದಲ್ಲಿ ಬಾಲಕಿಯನ್ನು ತಂದೆಯೇ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಅಜಯ್ ಚೌಹಾನ್ ತಿಳಿಸಿದ್ದಾರೆ.

ಮೃತ ಬಾಲಕಿ ನೆರೆಹೊರೆಯ ಹುಡುಗನೊಂದಿಗೆ ಮಾತನಾಡುತ್ತಿದ್ದಳು. ಇದನ್ನು ನೋಡಿದ ತಂದೆ ಕೋಪಗೊಂಡು ಕೊಲೆ ಮಾಡಿದ್ದಾನೆ. ಸದ್ಯಕ್ಕೆ ಸಂತ್ರಸ್ತೆಯ ಸುಟ್ಟ ಅವಶೇಷಗಳನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಅಪರಾಧಕ್ಕೆ ಸಾಕ್ಷಿಯಾಗಿದ್ದ ಬಾಲಕಿಯ ತಾಯಿಯನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಕುಟುಂಬದ ಇತರ ಸದಸ್ಯರು ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಇನ್‍ಸ್ಪೆಕ್ಟರ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *