‘ಕಾಟೇರ’ ಒಟಿಟಿ ಆಗಮನಕ್ಕೆ ದಿನಾಂಕ ಫಿಕ್ಸ್ : ದಚ್ಚು ನೋಡಲು ಫ್ಯಾನ್ಸ್ ರೆಡಿ

Public TV
1 Min Read

ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ನಟನೆಯ ಕಾಟೇರ (Katera) ಸಿನಿಮಾ ಆರನೇ ವಾರವೂ ಅದ್ಭುತ ಪ್ರದರ್ಶನ ಕಾಣುತ್ತಿದೆ. 196 ಚಿತ್ರಮಂದಿರ ಹಾಗೂ 63 ಮಲ್ಟಿಫ್ಲೆಕ್ಸ್ ಗಳಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಡಿಬಾಸ್ ಚಿತ್ರ ಈಗ ಒಟಿಟಿಗೆ (OTT) ಬರಲು ದಿನಾಂಕ ನಿಗದಿಯಾಗಿದೆ.

ದರ್ಶನ್ ಸಿನಿಕರಿಯರ್ ನಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದ್ದ ಕಾಟೇರ ಬಾಕ್ಸಾಫೀಸ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. ಪ್ಯಾನ್ ಇಂಡಿಯಾ ಚಿತ್ರಗಳ ಅಬ್ಬರದ ನಡುವೆಯೂ  ನಮ್ಮ ನೆಲದ ಕಥೆಗೆ ಪ್ರೇಕ್ಷಕ ಜೈಕಾರ ಹಾಕಿದ್ದರು. ರಾಕ್ಲೈನ್ ವೆಂಕಟೇಶ್ ನಿರ್ಮಿಸಿರುವ ಈ ಸಿನಿಮಾ ಈಗಾಗಲೇ Zee5 ಜೊತೆ ವ್ಯಾಪಾರ ವಹಿವಾಟು ಮುಗಿಸಿದೆ.  ನಿರ್ಮಾಪಕರು ಹಾಗೂ ಓಟಿಟಿ ವೇದಿಕೆ ಜೊತೆ ಮಾಡಿಕೊಂಡ ಒಡಂಬಡಿಕೆಯಂತೆ ‘ಕಾಟೇರ’ ಮುಂದಿನ ವಾರ ಪ್ರೀಮಿಯರ್ ಆಗುತ್ತಿದೆ.

Zee5 ತಾನು ಖರೀದಿಸಿದ ಹೊಸ ಸಿನಿಮಾಗಳನ್ನು ಪ್ರತಿ ಶುಕ್ರವಾರ ಬಿಡುಗಡೆ ಮಾಡುತ್ತೆ. ಅಲ್ಲದೆ ನಿರ್ಮಾಪಕರು ಹಾಗೂ ಓಟಿಟಿ ಸಂಸ್ಥೆಯೊಂದಿಗೆ ಸಿನಿಮಾ ಬಿಡುಗಡೆಯಾದ 30 ರಿಂದ 40 ದಿನಗಳ ಅಂತರದಲ್ಲಿ ಓಟಿಟಿಯಲ್ಲಿ ಪ್ರೀಮಿಯರ್ ಮಾಡುವ ಬಗ್ಗೆ ಸಹಜವಾಗಿ ಒಪ್ಪಂದ ಆಗುತ್ತೆ. ‘ಕಾಟೇರ’ ಬಿಡುಗಡೆಯಾದ 40 ದಿನಗಳ ಬಳಿಕ ಓಟಿಟಿಯಲ್ಲಿ ರಿಲೀಸ್ ಮಾಡುವ ಮಾತುಕತೆ ನಡೆದಿದ್ದು, ಅದರಂತೆಯೇ ಫೆಬ್ರವರಿ 9ರಂದು  ಸಿನಿಮಾ ಪ್ರೀಮಿಯರ್ ಆಗಲಿದೆ.

ಕಾಟೇರ ಸಿನಿಮಾ ಕನ್ನಡದ ನೆಲದ ಸಿನಿಮಾ. 1970ರ ಕಾಲಘಟ್ಟದ ಕಥೆಯನ್ನು ಚೆಂದವಾಗಿ ತೆರೆಮೇಲೆ ತಂದಿದ್ದರು ನಿರ್ದೇಶಕ ತರುಣ್ ಸುಧೀರ್. ಮಾಲಾಶ್ರೀ ಪುತ್ರಿ ಆರಾಧನಾ ರಾಮ್ಗೂ ಕಾಟೇರ ದೊಡ್ಡ ಹಿಟ್ ನೀಡಿದೆ. ಕಥೆ ಬರೆದ ಜಡೇಶ್ ಕುಮಾರ್ ಹಂಪಿ, ಡೈಲಾಗ್ ಬರೆದ ಮಾಸ್ತಿಗೂ ಕಾಟೇರ ಸಿನಿಮಾ ಮರೆಯಲಾಗದ ಯಶಸ್ಸು ನೀಡಿದೆ. ಈ ನಡುವೆಯೂ ರಾಜ್ಯದ 196 ಚಿತ್ರಮಂದಿರಗಳಲ್ಲಿ ಭರ್ಜರಿ ಓಟ ಮುಂದುವರಿಸಿದೆ. ಈ ಬೆನ್ನಲ್ಲೇ ಒಟಿಟಿ ಆಗಮನಕ್ಕೂ ದಿನಾಂಕ ನಿಗದಿಯಾಗಿದೆ.

Share This Article