ಬೆಂಗಳೂರು: ಬಿಪಿಎಲ್ ಕಾರ್ಡ್‌ದಾರರಿಗೆ(BPL Card) ಸರ್ಕಾರ ದಸರಾ ಶಾಕ್ ನೀಡಿದೆ. ಉಚಿತವಾಗಿ ಪಡೆಯುತ್ತಿರುವ ಅನ್ನಭಾಗ್ಯ (Annabhagya) ಪಡಿತರ ಪಡಿತರ ಕಾರ್ಡ್ ಪರಿಷ್ಕರಣೆ ಮಾಡಿದೆ.
ನೆಲಮಂಗಲ (Nelamangala) ತಾಲೂಕಿನಲ್ಲಿ ಸುಮಾರು 4000 ಕ್ಕೂ ಹೆಚ್ಚು ಜನರಿಗೆ ಪಡಿತರ ಕಾರ್ಡ್ ಡಿಲೀಟ್ ಮಾಡಲು ಮುಂದಾಗಿದೆ. ಡಿಲೀಟ್ ಮಾಡಿದ್ದು ಮಾತ್ರವಲ್ಲದೇ ನ್ಯಾಯಬೆಲೆ ಅಂಗಡಿಯಲ್ಲಿ ಡಿಲೀಟ್ ಮಾಡಲಾದ ವ್ಯಕ್ತಿಗಳ ಹೆಸರಿನಲ್ಲಿರುವ ಕಾರ್ಡ್ ವಿವರಗಳನ್ನು ನೋಟಿಸ್ ಬೋರ್ಡ್‌ನಲ್ಲಿ ಅಂಟಿಸಲಾಗಿದೆ.
ನೋಟಿಸ್ ಬೋರ್ಡ್‌ನಲ್ಲಿ ಕೃಷಿ ಇತ್ಯಾದಿ ಆದಾಯಗಳಿಂದಾಗಿ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಿದೆ. ಹೀಗಾಗಿ ನಿಮ್ಮ ಪಡಿತರವನ್ನು ರದ್ದುಗೊಳಿಸಲು ಮುಂದಾಗಿದ್ದೇವೆ. ಈ ಬಾರಿ ಕೊನೆಯ ಬಾರಿಗೆ ಪಡಿತರ ನೀಡಲಾಗುತ್ತದೆ. ಮುಂದಿನ ತಿಂಗಳಿನಿಂದ ಪಡಿತರ ನೀಡಲಾಗುವುದಿಲ್ಲ ಎಂದು ಉಲ್ಲೇಖಿಸಲಾಗಿದೆ.
ಪರಿಷ್ಕರಣೆಗೆ ಮುಂದಾಗಿದ್ದು ಯಾಕೆ?
ರಾಜ್ಯದಲ್ಲಿ ಬಡವರಿಗಿಂತಲೂ ಬಡತನ ರೇಖೆಗಿಂತ ಮೇಲಿದ್ದವರಿಗೆ ಹೆಚ್ಚಿನ ಪ್ರಮಾಣದ ಕಾರ್ಡ್‌ಗಳನ್ನು ವಿತರಿಸಲಾಗಿತ್ತು. ಅದರಲ್ಲೂ ಬಡತನ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಲ್ಲಿ ಅತಿ ಹೆಚ್ಚು ಬಿಪಿಎಲ್ ಕಾರ್ಡ್ ಹಂಚಿಕೆ ಆಗಿತ್ತು. ಜಿಲ್ಲಾವಾರು ಬಡವರ ಸಂಖ್ಯೆಗಿಂತಲೂ ಹತ್ತಾರು ಪಟ್ಟು ಹೆಚ್ಚು ಕಾರ್ಡ್‌ಗಳ ಹಂಚಿಕೆ ಆಗಿದ್ದವು. ಹೀಗಾಗಿ ಗ್ಯಾರಂಟಿ ಜಾರಿ ಮಾಡಿ ಕಂಗೆಟ್ಟಿದ್ದ ಸರ್ಕಾರ ಬಿಪಿಎಲ್ ಕಾರ್ಡ್ ಪರಿಷ್ಕರಣೆಗೆ ಮುಂದಾಗಿತ್ತು.
ಯಾವ ಜಿಲ್ಲೆಗಳಲ್ಲಿ ಬಡತನ ಪ್ರಮಾಣ ಶೇ.1 ರಿಂದ 5 ಇದೆಯೋ ಅಲ್ಲೇ 80% ಗಿಂತಲೂ ಅಧಿಕ ಬಿಪಿಎಲ್ ಕಾರ್ಡ್ ಹಂಚಿಕೆ ಆಗಿದ್ದವು. ಅನರ್ಹರ ಬಳಿ ಬಿಪಿಎಲ್ ಕಾರ್ಡ್‌ಗಳಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಆರ್ಥಿಕ ಹೊಡೆತ ಬಿದ್ದಿತ್ತು. ಹೀಗಾಗಿ ಅನರ್ಹ ಬಿಪಿಎಲ್ ಕಾರ್ಡ್ ರದ್ದತಿಗೆ ಆಹಾರ ಇಲಾಖೆ ಅಭಿಯಾನಕ್ಕೆ ನಿರ್ಧಾರ ಕೈಗೊಂಡಿತ್ತು. ಗ್ಯಾರಂಟಿಗಳ ಪರಿಶೀಲನೆ ನೆಪದಲ್ಲಿ ಪಂಚಾಯಿತಿ ಮಟ್ಟದಿಂದ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆ ಅಭಿಯಾನ ನಡೆಸಿತ್ತು. ಇದನ್ನೂ ಓದಿ: ಹರಿಹರದ ಬೆಸ್ಕಾಂ ಉಗ್ರಾಣದಲ್ಲಿ ಗೋಲ್ಮಾಲ್ – ರೈತರಿಗೆ ಸೇರಬೇಕಿದ್ದ 3.85 ಕೋಟಿ ಮೌಲ್ಯದ ವಿದ್ಯುತ್ ಪರಿಕರಗಳು ಭ್ರಷ್ಟರ ಪಾಲು!
ಬಿಪಿಎಲ್ ಆಪರೇಷನ್:
ಬಿಪಿಎಲ್ ಕಾರ್ಡಿಗೆ (BPL Card) ಕೆಲವೊಂದು ಷರತ್ತು ಹಾಕುವ ಮೂಲಕ ಉಳಿತಾಯಕ್ಕೆ ಸರ್ಕಾರ ಪ್ಲ್ಯಾನ್ ಮಾಡಿಕೊಂಡಿದೆ. ಆಪರೇಷನ್ ಬಿಪಿಎಲ್ ಕಾರ್ಡ್‌ಗೆ (Operation BPL Card) ಸಿಎಂ ಸಿದ್ದರಾಮಯ್ಯ ಸೂಚಿಸಿದ ಬೆನ್ನಲ್ಲೇ ಇಲಾಖೆಯಿಂದ ಬೋಗಸ್ ಕಾರ್ಡ್ ತಡೆಯುವ ಸಲುವಾಗಿ ರಾಜ್ಯಾದ್ಯಂತ ರೇಷನ್ ಕಾರ್ಡ್ ಪರಿಶೀಲನೆ ಕಾರ್ಯ ನಡೆದಿತ್ತು.
ಅಕ್ರಮ ಫಲಾನುಭವಿಗಳನ್ನು ಪತ್ತೆ ಹಚ್ಚಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಾಲ್ಕು ಬೇರೆ ಇಲಾಖೆಗಳ ಸಹಕಾರ ಪಡೆಯಲಿದೆ ಎಂದು ಹಿಂದೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಕಾರ್ಡ್‌ದಾರರ ಹೆಸರಲ್ಲಿ ವಾಹನ ಇವೆಯಾ ಎಂಬುದನ್ನು ಪತ್ತೆ ಹಚ್ಚಲು ಸಾರಿಗೆ ಇಲಾಖೆ, ಜಮೀನು ಎಷ್ಟಿದೆ ಎಂಬುದನ್ನು ತಿಳಿಯಲು ಕಂದಾಯ ಇಲಾಖೆ, ತೆರಿಗೆ ಪಾವತಿದಾರರಾ ಎಂಬುದನ್ನು ಪತ್ತೆ ಹಚ್ಚಲು ಆದಾಯ ತೆರಿಗೆ ಇಲಾಖೆಯ ನೆರವು ಪಡೆದು ಆಪರೇಷನ್‌ಗೆ ಮಾಡಲಿದೆ ಎಂದು ವರದಿಯಾಗಿತ್ತು.
ಯಾರ ಕಾರ್ಡ್ ರದ್ದಾಗುತ್ತೆ?
ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಿದಲ್ಲಿ, ಆದಾಯ ತೆರಿಗೆ ಪಾವತಿ ಮಾಡಿದ್ದರೆ, ನಿಗದಿಗಿಂತ ಹೆಚ್ಚು ಜಮೀನು ಹೊಂದಿದ್ದರೆ, ನಗರಗಳಲ್ಲಿ 1000 ಚದರಡಿಯ ಪಕ್ಕಾ ಮನೆ ಇದ್ದಲ್ಲಿ, ವೈಟ್ ಬೋರ್ಡ್ 4 ಚಕ್ರದ ವಾಹನ ಇದ್ದು ಬಿಪಿಎಲ್ ಕಾರ್ಡ್ ಮಾಡಿಸಿದವರ ಕಾರ್ಡ್ ರದ್ದಾಗಲಿದೆ.
ಬಿಪಿಎಲ್ ಕಾರ್ಡಿಗೆ (BPL Card) ಕೆಲವೊಂದು ಷರತ್ತು ಹಾಕುವ ಮೂಲಕ 25,000 ಕೋಟಿ ರೂ. ಉಳಿತಾಯಕ್ಕೆ ಸರ್ಕಾರ ಪ್ಲ್ಯಾನ್ ಮಾಡಿಕೊಂಡಿದೆ. ಕಳೆದ ಅಕ್ಟೋಬರ್‌ನಲ್ಲೇ ಸರ್ಕಾರ ಆಪರೇಷನ್ ಬಿಪಿಎಲ್ ಕಾರ್ಡ್‌ಗೆ (Operation BPL Card) ಚಾಲನೆ ನೀಡಿತ್ತು.