‘ಜಾಜಿ’ ಆಲ್ಬಂ ಸಾಂಗ್ ರಿಲೀಸ್ ಮಾಡಿದ ದರ್ಶನ್

Public TV
2 Min Read

ಹೊಸಪ್ರತಿಭೆಗಳ ಸದಾ ಜೊತೆಯಾಗಿ ನಿಲ್ಲುವ ನಟ ದರ್ಶನ್​ (Darshan) ಅವರು ‘ಜಾಜಿ’ (Jaaji) ಆಲ್ಬಂ ಸಾಂಗ್​ (Album Song) ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಕೈ ನೋವಿನ ನಡುವೆಯೂ ಕನ್ನಡದ ಪ್ರತಿಭೆಯನ್ನು ಪ್ರೋತ್ಸಾಹಿಸಲು ದರ್ಶನ್ ಅವರು ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದರು. ಶಾಸಕ ಸತೀಶ್ ರೆಡ್ಡಿ, ನಿರ್ಮಾಪಕಿ ಶೈಲಜಾ ನಾಗ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಸೇರಿದಂತೆ ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಮಾಜಿ ಉಪ ಮಹಾಪೌರರಾದ  ಮೋಹನ್​ ರಾಜು ಹಾಗೂ ಬಿ.ಸುನೀತಾ ಮೋಹನ್ ರಾಜು ಅವರ ಪುತ್ರಿ ಜಾಜಿ ನಟಿಸಿರುವ ಆಲ್ಬಂ ಸಾಂಗ್​ (Album Song) ಬಿಡುಗಡೆ ಆಗಿದೆ. ಈ ಹಾಡಿನ ಹೆಸರು ಕೂಡ ‘ಜಾಜಿ’. ಸುಮೋ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುನೀತಾ ಮೋಹನ್ ರಾಜು ಅವರು “ಜಾಜಿ” ಮ್ಯೂಸಿಕ್ ಸಾಂಗ್ ಅನ್ನು ನಿರ್ಮಿಸಿದ್ದು,  ಹರ್ಷಿತ್ ಗೌಡ ಸಾಹಿತ್ಯ ಬರೆದು ಸಂಗೀತ ನೀಡಿದ್ದಾರೆ. ಕುಮಾರ್ ಛಾಯಾಗ್ರಹಣ, ಮೋಹನ್ ನೃತ್ಯ ನಿರ್ದೇಶನ, ಐಶ್ವರ್ಯ ರಂಗರಾಜನ್ ಗಾಯನ ಹಾಗೂ ಜಾಜಿ ಅವರು ಅಭಿನಯಿಸಿರುವ “ಜಾಜಿ’ ಮ್ಯೂಸಿಕ್ ಸಾಂಗ್ ಡಿ ಬಿಟ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ.

ಹಾಡು ಬಿಡುಗಡೆ ಮಾಡಿ ಮಾತನಾಡಿದ  ದರ್ಶನ್​ ಅವರು, ಈ ಹಾಡು ಬಿಡುಗಡೆ ಮಾಡುವುದಕ್ಕೂ ಮುಂಚೆ ಕೆಲವು ವಿಷಯ ಹೇಳುತ್ತೇನೆ.  ಸ್ನೇಹಿತರಾದ ಮೋಹನ್ ರಾಜು ಅವರು ಸಿಕ್ಕಾಗ ತಮ್ಮ ಮಗಳು ನೃತ್ಯ ಕಲಿಯುತ್ತಿರುವ ವಿಷಯದ ಬಗ್ಗೆ ಹೇಳಿದರು. ಮಗಳ ಹೆಸರು ಜಾಜಿ ಎಂದರು. ಈಗಿನ ಟ್ರೆಂಡ್ ನಲ್ಲಿ ಜಾಜಿ ಎನ್ನುವ ಹೆಸರು‌ ಕೇಳಿ ಆಶ್ಚರ್ಯವಾಯಿತು. ಅವರ ಮಗನ ಹೆಸರು ಜಾಣ ಅಂತ ತಿಳಿದು ಇನ್ನೂ ಹೆಚ್ಚಿನ ಆಶ್ಚರ್ಯವಾಯಿತು. ಜಾಜಿ ಅವರ ನೃತ್ಯ ಎಷ್ಟು ಚೆನ್ನಾಗಿದೆ ಎಂದು ಈ ” ಜಾಜಿ”  ಹಾಡೇ ಹೇಳುತ್ತದೆ. ಡಿ ಬಿಟ್ಸ್ ಮೂಲಕ ಶೈಲಜಾ ನಾಗ್ ಹಾಗೂ ವಿ.ಹರಿಕೃಷ್ಣ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಮಗುವಿಗೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ನನ್ನ ಮಗಳು ಜಾಜಿ ದೊಡ್ಡ ಕಲಾವಿದೆಯಾಗಬೇಕೆಂಬುದು ನನ್ನ ತಂದೆ ರಂಗಭೂಮಿ ಕಲಾವಿದರಾದ ದಿ.ಬೋರೇಗೌಡರ ಕನಸ್ಸಾಗಿತ್ತು. ಆ ಕನಸು ಇಂದು ನನಸ್ಸಾಗಿದೆ. ನನ್ನ ಮಗಳ ಮೊದಲ ಹಾಡು “ಜಾಜಿ” ಇಂದು ಬಿಡುಗಡೆಯಾಗಿದೆ. ದರ್ಶನ್ ಅವರು ಅವಳಿಗೆ ಪ್ರೋತ್ಸಾಹ ನೀಡಿದ್ದು ನಿಜಕ್ಕೂ ಅವಳ ಪುಣ್ಯ ಎಂದರೆ ತಪ್ಪಾಗಲಾರದು. ಇನ್ನು ಮುಂದೆ ಅವಳ ಜವಾಬ್ದಾರಿ ಹೆಚ್ಚಿದೆ. ಹಾಡು ಚೆನ್ನಾಗಿ ಬರಲು ಸಹಕಾರ ನೀಡಿದ ಇಡೀ ತಂಡಕ್ಕೆ ಧನ್ಯವಾದ ಎಂದರು  ಸುನೀತಾ ಮೋಹನ್ ರಾಜು. ತಂದೆ ಮೋಹನ್ ರಾಜು ಅವರು ಕೂಡ ಮಾತನಾಡಿ ಮಗಳ ಪ್ರತಿಭೆಗೆ ಪ್ರೋತ್ಸಾಹ ನೀಡಲು ಬಂದಿರುವ ನಟ ದರ್ಶನ್ ಅವರು ಸೇರಿದಂತೆ ಎಲ್ಲಾ ಗಣ್ಯರಿಗೆ ಧನ್ಯವಾದ ಹೇಳಿದರು.

ನಾನು ಮೊದಲ ಬಾರಿಗೆ ನೃತ್ಯ ಪ್ರದರ್ಶನ ನೀಡಿದ್ದು ನನಗೆ ಎರಡುವರೆ ವರ್ಷ ಇದ್ದಾಗ. ಅದಕ್ಕೆ ಕಾರಣ ನನ್ನ ತಾತಾ. ಅವರ ಆಸೆಯಂತೆ ಇಂದು ಭರತನಾಟ್ಯ ಸೇರಿದಂತೆ ನಾಲ್ಕು ಪ್ರಕಾರದ ನೃತ್ಯಗಳನ್ನು ಕಲಿತಿದ್ದೀನಿ. ಈ ಹಾಡಿನಲ್ಲಿ ವಿಭಿನ್ನ ಶೈಲಿಯ ನೃತ್ಯವನ್ನು ಪ್ರದರ್ಶಿಸುವ ಪ್ರಯತ್ನ ಮಾಡಿದ್ದೇನೆ. ನನ್ನ ಮೊದಲ ಹಾಡನ್ನು ದರ್ಶನ್ ಸರ್ ಬಿಡುಗಡೆ ಮಾಡುತ್ತಾರೆ ಎಂದು ಕನಸ್ಸಿನಲ್ಲೂ ನೆನಸಿರಲಿಲ್ಲ. ಅವರಿಗೆ, ನನ್ನ ತಂದೆ ತಾಯಿಗೆ ಹಾಗೂ ಇಡೀ ತಂಡಕ್ಕೆ ನನ್ನ ಧನ್ಯವಾದ ಎಂದರು ಜಾಜಿ. ಹಾಡಿಗೆ ಸಂಗೀತ ನೀಡಿ, ಸಾಹಿತ್ಯ ಬರೆದಿರುವ ಹರ್ಷಿತ್ ಗೌಡ, ನೃತ್ಯ ನಿರ್ದೇಶಕ ಮೋಹನ್ ಹಾಗೂ ಡಿ ಬಿಟ್ಸ್ ಸಂಸ್ಥೆಯ ಶೈಲಜಾ ನಾಗ್ ಹಾಗೂ ವಿ.ಹರಿಕೃಷ್ಣ “ಜಾಜಿ” ಕುರಿತು ಮಾತನಾಡಿದರು.

Share This Article