ಮೋಡಿ ಮಾಡುವ ತಯಾರಿಯಲ್ಲಿ ಡಾರ್ಲಿಂಗ್ ಕೃಷ್ಣ

Public TV
2 Min Read

ಬೆಂಗಳೂರು: ಲವ್ ಮಾಕ್ಟೇಲ್ ಮೂಲಕ ಸಿನಿಮಾಸಕ್ತರಲ್ಲಿ ಮತ್ತು ತರಿಸಿರುವ ನಟ ನಿರ್ದೇಶಕ ಡಾರ್ಲಿಂಗ್ ಕೃಷ್ಣಾ ತಮ್ಮ ಮುಂದಿನ ಯೋಜನೆ ಕುರಿತು ಮಾತನಾಡಿದ್ದಾರೆ. ಲವ್ ಮಾಕ್ಟೇಲ್ ಸಿನಿಮಾ ಯಶಸ್ವಿ ಕಂಡಿದ್ದು, ವಿಭಿನ್ನ ಕಥಾ ಹಂದರದ ಮೂಲಕ ಡಾರ್ಲಿಂಗ್ ಕೃಷ್ಣ ಮನೆಮಾತಾಗಿದ್ದಾರೆ. ಇದೀಗ ಮತ್ತೆ ತಾವೇ ಚಿತ್ರಕಥೆ, ನಿರ್ದೇಶನ ಮಾಡಲು ಮುಂದಾಗಿದ್ದಾರೆ.

ಸಿನಿಮಾ ಬಿಡುಗಡೆಯಾಗಿ ವಾರದ ನಂತರ ಒಂದೇ ಚಿತ್ರ ಮಂದಿರದಲ್ಲಿ ಇತ್ತು. ಇದರಿಂದ ಕೃಷ್ಣ ತೀವ್ರ ಆತಂಕಗೊಂಡಿದ್ದರು. ನಂತರದ ದಿನಗಳಲ್ಲಿ ಥೀಯೇಟರ್‍ಗಳು ಸಿಗಲು ಆರಂಭಿಸಿದವೂ ಅಷ್ಟೇ ಆಸಕ್ತಿಯಿಂದ ಪ್ರೇಕ್ಷಕರು ಸಹ ಬರಲಾರಂಭಿಸಿದರು. ಹೀಗಾಗಿ ಮಾಲ್‍ಗಳಲ್ಲಿಯೂ ಭರ್ಜರಿ ಮೂರು, ನಾಲ್ಕು ಪ್ರದರ್ಶನಗಳನ್ನು ಕಾಣಲು ಪ್ರಾರಂಭಿಸಿತು. ಹೀಗೆ ಥೀಯೇಟರ್‍ಗಳು ಹೆಚ್ಚಾಗುತ್ತಾ, ಲವ್ ಮಾಕ್ಟೇಲ್ ಹೌಸ್ ಫುಲ್ ಪ್ರದರ್ಶನ ಕಾಣಲು ಪ್ರಾರಂಭಿಸಿತು. ಜನವರಿ 31ರಂದು ತೆರೆಕಂಡ ಲವ್ ಮಾಕ್ಟೇಲ್ ಮೋಡಿ ಈಗಲೂ ಮುಂದುವರಿದಿದ್ದು, ಸತತ ಐದು ವಾರಗಳಿಂದ ಯಶಸ್ಸು ಕಾಣುತ್ತಿದೆ. ಈ ಚಿತ್ರಕ್ಕೆ ಸ್ವತಃ ಡಾರ್ಲಿಂಗ್ ಕೃಷ್ಣ ಅವರೇ ಬಂಡವಾಳ ಹಾಕಿ, ತಾವೇ ನಿರ್ದೇಶಿಸುವ ಸಾಹಸ ಮಾಡಿದ್ದರು. ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ ಕೂಡ. ಅದಕ್ಕೆ ಸಾಕ್ಷಿಯೇ ಚಿತ್ರದ ಸಕ್ಸಸ್.

ಲವ್ ಮಾಕ್ಟೇಲ್ ಗುಂಗಲ್ಲೇ ಇರುವ ಪ್ರೇಕ್ಷಕರಿಗೆ ಇದೀಗ ನಟ ಡಾರ್ಲಿಂಗ್ ಕೃಷ್ಣ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ. ಹೌದು ಅವರೂ ಸಹ ಇನ್ನೂ ಲವ್ ಮಾಕ್ಟೇಲ್ ಗುಂಗಲ್ಲೇ ಇದ್ದು, ಇದರ ಮಧ್ಯೆ ಈಗಾಗಲೇ ಅವರಿಗೆ ಎರಡ್ಮೂರು ಕಥೆಗಳು ತಲೆಗೆ ಬಂದಿವೆಯಂತೆ. ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು ಎಂದು ತಲೆ ಕೆಡಸಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಇದೀಗ ಎರಡ್ಮೂರು ಕಥೆಗಳು ಹೊಳೆದಿವೆ, ಆದರೆ ಯಾವುದಕ್ಕೆ ಸಿನಿಮಾ ರೂಪ ನೀಡುವುದು ಎಂಬ ಗೊಂದಲದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

ಸಿನಿಮಾ ಆಯ್ಕೆ ಮಾಡಿಕೊಳ್ಳುವುದು ಹಾಗೂ ನಿರ್ದೇಶಿಸುವುದರ ಕುರಿತು ತುಂಬಾ ಜಾಗೃತಿ ವಹಿಸಬೇಕಾಗಿದೆ. ಏಕೆಂದರೆ ಲವ್ ಮಾಕ್ಟೇಲ್ ಸಿನಿಮಾ ಮಾಡುವಾಗ ನಿರೀಕ್ಷೆಗಳು ಇರಲಿಲ್ಲ. ಆದರೆ ಇದೀಗ ನನ್ನ ಮೇಲೆ ನಿರೀಕ್ಷೆ ಹೆಚ್ಚಿದೆ. ಹೀಗಾಗಿ ಎಚ್ಚರಿಕೆಯಿಂದ ಸಿನಿಮಾ ಆಯ್ಕೆ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ. ಅಲ್ಲದೆ ಬೇರೆ ನಿರ್ದೇಶಕರ ಸಿನಿಮಾದಲ್ಲಿ ನಟಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಕಥೆಗಳನ್ನು ಕೇಳುತ್ತಿದ್ದೇನೆ, ಚೆನ್ನಾಗಿದ್ದರೆ ಖಂಡಿತ ನಟಿಸುತ್ತೇನೆ ಎಂದಿದ್ದಾರೆ.

ಇನ್ನೂ ವಿಶೇಷ ಎಂದರೆ ಕನ್ನಡದಲ್ಲಿ ಯಶಸ್ವಿಯಾಗಿರುವ ಲವ್ ಮಾಕ್ಟೇಲ್ ಚಿತ್ರಕ್ಕೆ ಹಿಂದಿ, ತೆಲುಗು ಹಾಗೂ ತಮಿಳಿನಿಂದ ರಿಮೇಕ್ ಹಕ್ಕುಗಳಿಗೆ ಬೇಡಿಕೆ ಬಂದಿದೆಯಂತೆ. ಈ ಖುಷಿ ವಿಚಾರವನ್ನು ಸಹ ಡಾರ್ಲಿಂಗ್ ಕೃಷ್ಣ ಹಂಚಿಕೊಂಡಿದ್ದಾರೆ. ಅಲ್ಲದೆ ಲವ್ ಮಾಕ್ಟೇಲ್ ಸಕ್ಸಸ್ ಬೆನ್ನಲ್ಲೇ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ತಮ್ಮ ನೈಜ ಪ್ರೇಮ ಕಥೆ ಕುರಿತು ಸಹ ಹಂಚಿಕೊಂಡರು. ಇವರಿಬ್ಬರ ಈ ನೈಜ ಕೆಮಿಸ್ಟ್ರಿಯೇ ಸಿನಿಮಾ ಯಶಸ್ಸಿಗೂ ಕಾರಣ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಡಾರ್ಲಿಂಗ್ ಕೃಷ್ಣ ಸದ್ಯ `ಲೋಕಲ್ ಟ್ರೇನ್’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಸಿನಿಮಾ ಬಹುತೇಕ ಮುಕ್ತಾಯದ ಹಂತ ತಲುಪಿದೆ. ಇದು ಕಾಲೇಜಿನಲ್ಲಿ ನಡೆಯುವ ಪ್ರೀತಿಯ ಕಥಾ ಹಂದರವನ್ನು ಹೊಂದಿದೆಯಂತೆ. ಹಾಗೆಯೇ `ವರ್ಜಿನ್’ ಚಿತ್ರದ ಚಿತ್ರೀಕರಣ ಸಹ ನಡೆಯುತ್ತಿದ್ದು, ಇದು ಕಾಲೇಜು ನಂತರದ ಜೀವನದಲ್ಲಿ ನಡೆಯುವ ಪ್ರೀತಿಯ ಕಥೆಯನ್ನು ಹೊಂದಿದೆಯಂತೆ. ಈ ಎಲ್ಲದರ ಮಧ್ಯೆ ಕೃಷ್ಣ ಅವರು ತಮ್ಮಲ್ಲಿರುವ ಕಥೆಯನ್ನು ಸಿನಿಮಾ ಮಾಡುವ ಕುರಿತು ಸಹ ಚಿಂತನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *