50 ವರ್ಷಗಳ ಬಳಿಕ ದಂಡಿ ಮಾರಮ್ಮನ ಅದ್ಧೂರಿ ತೆಪ್ಪೋತ್ಸವ – ವೈಭವ ಕಣ್ತುಂಬಿಕೊಂಡ ಭಕ್ತಗಣ

Public TV
1 Min Read

ತುಮಕೂರು: ಬರೊಬ್ಬರಿ 50 ವರ್ಷಗಳಿಂದ ಕೈಬಿಟ್ಟಿದ್ದ ತುಮಕೂರು (Tumakuru) ಜಿಲ್ಲೆ ಮಧುಗಿರಿಯ (Madhugiri) ಆದಿದೇವತೆ ಶ್ರೀ ದಂಡಿನ ಮಾರಮ್ಮ (Dandina Maramma)  ದೇವಿಯ ತೆಪ್ಪೋತ್ಸವ ವೈಭವೋಪೇತವಾಗಿ ನೆರವೇರಿದೆ. ಸಹಸ್ರಾರು ಭಕ್ತರು ತೆಪ್ಪೋತ್ಸವವನ್ನು ಕಣ್ತುಂಬಿಕೊಂಡು ಧನ್ಯರಾಗಿದ್ದಾರೆ.

ಮಾರಮ್ಮನ ತೆಪ್ಪೋತ್ಸವ ಮಾಡದೇ ಇದ್ದುದರಿಂದ ಕೆರೆಗಳಪಾಳ್ಯದ ರಾಜ್ಯದ ಹೆದ್ದಾರಿಯಲ್ಲಿ ಅಪಘಾತಗಳು ಮಿತಿಮೀರಿತ್ತು. ನೂರಾರು ಜನರು ಅಸುನೀಗಿದ್ದಾರೆ. ಮಾರಮ್ಮಳ ಮುನಿಸೇ ಇದಕ್ಕೆ ಕಾರಣ ಎನ್ನಲಾಗಿತ್ತು. ಈ ಹಿನ್ನೆಲೆ ಅದ್ಧೂರಿಯಾಗಿ ತೆಪ್ಪೋತ್ಸವ ನಡೆಸಲಾಗಿದೆ. ಇದನ್ನೂ ಓದಿ: Republic Day | ನಾಳೆ ಬೆಳಗ್ಗೆ 6 ರಿಂದಲೇ ಮೆಟ್ರೋ ಸಂಚಾರ

ಚೋಳನಹಳ್ಳಿ ಕೆರೆಯಲ್ಲಿ ತೆಪ್ಪದಲ್ಲಿ ಶೃಂಗಾರಗೊಂಡ ಮಾರಮ್ಮ ಸಂಚರಿಸಿದ್ದಾಳೆ. ಸುತ್ತಲೂ ನೆರೆದಿದ್ದ ಭಕ್ತರಿಗೆ ದರ್ಶನ ನೀಡಿದ್ದಾಳೆ. 50 ವರ್ಷದಿಂದ ಈ ಕ್ಷಣಕ್ಕಾಗಿ ಕಾಯುತಿದ್ದ ಮಧುಗಿರಿ ತಾಲೂಕಿನ ಜನ ನಮಿಸಿ ಕೃತಾರ್ಥರಾದರು. ಗೋಧೂಳಿ ಮುಹೂರ್ತದಲ್ಲಿ ಆರಂಭವಾದ ತೆಪ್ಪೋತ್ಸವ ಮಂತ್ರ ಘೋಷಗಳ ಮೂಲಕ ಸಾಗಿತ್ತು. ಬಳಿಕ ಇಡೀ ಕೆರೆಯ ಸುತ್ತ ತೆಪ್ಪದಲ್ಲಿ ಮಾರಮ್ಮಳ ಮೆರವಣಿಗೆ ಮಾಡಲಾಯಿತು. ಕಾಶಿಯಿಂದ ಬಂದ ಪಂಡಿತರು ಕಾರ್ಯಕ್ರಮಕ್ಕೆ ಮೆರಗು ತುಂಬಿದರು. ಈ ಅಪರೂಪದ ಕ್ಷಣಕ್ಕೆ ಸಚಿವ ಕೆ.ಎನ್ ರಾಜಣ್ಣ, ಗೃಹ ಸಚಿವ ಪರಮೇಶ್ವರ್, ಡಿಸಿ ಶುಭಾ ಕಲ್ಯಾಣ್, ಹಾಸನ ಡಿಸಿ ಸತ್ಯಭಾಮಾ, ಹಾಸನ ಎಸ್ಪಿ ಸುಜಿತಾ, ಶ್ರೀ ಸಿದ್ದಲಿಂಗಸ್ವಾಮಿಜಿಗಳು, ಸಿದ್ದರಬೆಟ್ಟ ಶ್ರೀಗಳು ಸಾಕ್ಷಿಯಾದರು. ಇದನ್ನೂ ಓದಿ: ಭಾರತಕ್ಕೆ ಜಯ – ಮುಂಬೈ ದಾಳಿಕೋರ ತಹಾವೂರ್ ರಾಣಾ ಹಸ್ತಾಂತರಕ್ಕೆ ಅಮೆರಿಕ ಸುಪ್ರೀಂ ಅನುಮತಿ

ಕೆರೆ ಮಧ್ಯದಲ್ಲಿ ತೇಲುವ ತೆಪ್ಪದಲ್ಲಿ ಭಕ್ತಿಯ ಗಾನಸುಧೆ ಮೊಳಗಿತ್ತು. ವಿವಿಧ ಧಾರ್ಮಿಕ ನೃತ್ಯ ದೇವಲೋಕವನ್ನೇ ಸೃಷ್ಟಿಸಿತ್ತು. ಬಾನಂಗಳದಲ್ಲಿ ಬಾಣ ಬಿರುಸುಗಳ ಚಿತ್ತಾರ ಕಣ್ಮನ ಸೆಳೆದಿತ್ತು. ಕೆರೆಯ ತುಂಬೆಲ್ಲಾ ಮಾಡಿದ ದೀಪಾಲಂಕಾರ ಕಣ್ಣಿಗೆ ಹಬ್ಬವಾಗಿತ್ತು. ಇದನ್ನೂ ಓದಿ: ಇನ್ಸ್ಟಾದಲ್ಲಿ ಯುವತಿಗೆ ಲೈಕ್, ನಿಶ್ಚಿತಾರ್ಥ ಮಾಡಿಕೊಂಡಿದ್ದ ಹುಡುಗಿಯಿಂದ ತರಾಟೆ – ಯುವಕ ಆತ್ಮಹತ್ಯೆ

Share This Article