ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ (Dandeli Crocodile Park) 2012ರಲ್ಲಿ ನಡೆದಿದ್ದ ಎಸಿಎಫ್ ಮದನ್ ನಾಯ್ಕ್ ಹತ್ಯೆ ಪ್ರಕರಣದ ಅಪರಾಧಿಗೆ ಯಲ್ಲಾಪುರ ಸಂಚಾರಿ ನ್ಯಾಯಾಲಯ (Court) ಶಿಕ್ಷೆ ಪ್ರಕಟಿಸಿದೆ.
2012ರಲ್ಲಿ ಈ ಕೊಲೆಯಾಗಿದ್ದು, 14 ವರ್ಷದ ನಂತರ ಈ ತೀರ್ಪು ಬಂದಿದೆ. ಹತ್ಯೆ ಮಾಡಿದ್ದ ಪ್ರಶಾಂತ್ ರಾಮು ಲಂಬಾಣಿಗೆ 10 ವರ್ಷ ಜೈಲು, 11,000 ರೂ. ದಂಡ, ಆನಂದ್ ರೂಪಸಿಂಗ್ ನಾಯ್ಕ, ಸುರೇಶ್ ಶಂಕರಪ್ಪ ನಾಯ್ಕ, ಶೈಲಜಾ , ದಾನಾಬಾಯಿ, ಮಾದುರೀ ರಾಥೋಡ್, ರಾಧ ನಾಯ್ಕಗೆ ತಲಾ ಒಂದು ಸಾವಿರ ರೂ. ದಂಡ ವಿಧಿಸಲಾಗಿದೆ. ಜೊತೆಗೆ ಎಸಿಎಫ್ ಕುಟುಂಬ ಅವಲಂಭಿತರಾದ ಪತ್ನಿ, ಪುತ್ರ, ಪುತ್ರಿಗೆ 50,000 ರೂ. ಪರಿಹಾರ ನೀಡುವಂತೆ ಯಲ್ಲಾಪುರ ಸಂಚಾರಿ ನ್ಯಾಯಲಯದ ನ್ಯಾಯಾದೀಶ ಕಿರಣ್ ಕಿಣಿಯವರು ಆದೇಶಿಸಿದ್ದಾರೆ. ಸರ್ಕಾರದ ಪರ ಶಿರಸಿಯ ರಾಜೇಶ್ ಮಾಳಗೇಕರ್ ವಾದ ಮಂಡಿಸಿದ್ದರು. ಇದನ್ನೂ ಓದಿ: ದಂಪತಿ ಏಕಾಂತದಲ್ಲಿದ್ದಾಗ ಮಾಸ್ಟರ್ ಕೀ ಬಳಸಿ ರೂಮ್‌ಗೆ ನುಗ್ಗಿದ ಸಿಬ್ಬಂದಿ; ಲೀಲಾ ಪ್ಯಾಲೇಸ್ ಹೋಟೆಲ್‌ಗೆ 10 ಲಕ್ಷ ದಂಡ
ಏನಿದು ಪ್ರಕರಣ?
2012ರ ಮೇ 6 ರಂದು ದಾಂಡೇಲಿ ಮೊಸಳೆ ಪಾರ್ಕ್‌ನಲ್ಲಿ ಬಾಗಲಕೋಟೆಯಿಂದ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರು ಮೊಸಳೆಗಳಿಗೆ ಮಾಂಸವನ್ನು ಹಾಕುತಿದ್ದರು. ಈ ವೇಳೆ ಇಲ್ಲಿನ ಅರಣ್ಯ ಇಲಾಖೆಯ ಎಸಿಎಫ್ ಆಗಿದ್ದ ಮದನ್ ನಾಯ್ಕ್ ರವರು ಪ್ರವಾಸಿಗರಿಗೆ ಮೊಸಳೆಗೆ ಮಾಂಸ ಹಾಕದಂತೆ ತಿಳಿ ಹೇಳಿದ್ದರು. ಇದರಿಂದ ಕೆರಳಿದ ಪ್ರವಾಸಿಗರು ಎಸಿಎಫ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು.
ಹಲ್ಲೆಯಿಂದ ತಲೆಗೆ ಗಂಭೀರ ಗಾಯವಾಗಿತ್ತು. ಮೇ 8 ರಂದು ಎಸಿಎಫ್ ಮದನ್ ನಾಯ್ಕ್ ಮೃತಪಟ್ಟಿದ್ದರು. ಈ ಕುರಿತು ಅವರ ಪತ್ನಿ ಸುಮತಿ ದೂರು ನೀಡಿದ್ದರು. ಹಲ್ಲೆ ಮಾಡಿದವರೆಲ್ಲರೂ ಸರ್ಕಾರಿ ನೌಕರರಾಗಿದ್ದು, ಪೊಲೀಸ್ ತನಿಖೆಯಲ್ಲೂ ಪ್ರಭಾವ ಬೀರಿದ್ದರು. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿ.ಐ.ಡಿಗೆ ವಹಿಸಿತ್ತು. ಇದನ್ನೂ ಓದಿ: ರೈತನಿಗೆ ಪರಿಹಾರ ವಿಳಂಬ – ಜಿಲ್ಲಾಧಿಕಾರಿ ಕಾರು ಜಪ್ತಿ

