ಬಿರುಕು ಬಿಟ್ಟ ಕೊಠಡಿ, ಶಿಥಿಲಾವಸ್ಥೆ ಕಟ್ಟಡದಲ್ಲಿ ಪಾಠ- ಸಿದ್ದರಾಮಯ್ಯ ಮಗನ ಕ್ಷೇತ್ರದ ಶಾಲೆಯ ದುಸ್ಥಿತಿ

Public TV
2 Min Read

ಮೈಸೂರು: ಒಂದು ಕಡೆ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಕಡೆ ಈಗ ಅವರ ಮಗ ಪ್ರತಿನಿಧಿಸುತ್ತಿರೋ ವರುಣಾ ಕ್ಷೇತ್ರದಲ್ಲಿನ ಸರ್ಕಾರಿ ಶಾಲೆ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಮುಚ್ಚುವ ಸ್ಥಿತಿಗೆ ಬಂದಿದೆ.

ನಂಜನಗೂಡು ತಾಲೂಕಿನ ಹಾಡ್ಯಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಮಾಜಿ ಸಿಎಂ ಸಿದ್ದರಾಮಯ್ಯ ಎರಡು ಬಾರಿ ಪ್ರತಿನಿಧಿಸಿ ಈಗ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರೋ ವರುಣಾ ವಿಧಾನಸಭಾ ಕ್ಷೇತ್ರದಲ್ಲಿದೆ. ಮಕ್ಕಳು ಪ್ರಾಣದ ಹಂಗು ತೊರೆದು ಇಲ್ಲಿ ಪಾಠ ಪ್ರವಚನಗಳನ್ನ ಕೇಳುವ ದುಃಸ್ಥಿತಿ ಈ ಶಾಲೆಯಲ್ಲಿದೆ. 1ನೇ ತರಗತಿಯಿಂದ 5ನೇ ತರಗತಿವರೆಗೆ ಸುಮಾರು 100 ಮಕ್ಕಳು ಈ ಶಾಲೆಯಲ್ಲಿ ಜೀವ ಕೈಯಲ್ಲಿ ಬಿಗಿ ಹಿಡಿದುಕೊಂಡು ಓದುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಕನ್ನಡವೇ ಬೇಕು ಎನ್ನುತ್ತಿದ್ದಾರೆ ಮಾಜಿ ಸಿಎಂ..!

ಯಾವುದೇ ಕ್ಷಣದಲ್ಲಾದರೂ ಈ ಶಾಲೆಯ ಕಟ್ಟಡ ಕುಸಿಯುವ ಸ್ಥಿತಿಯಲ್ಲಿದೆ. ಶಿಥಿಲವಾಗಿರುವ ಕಟ್ಟಡದಲ್ಲೇ ತರಗತಿಗಳು ನಡೆಯುತ್ತಿವೆ. ಕಟ್ಟಡದಲ್ಲಿ ಭಾರೀ ಬಿರುಕುಗಳು ಇರುವ ಕಾರಣ ಶಾಲೆಯ ಹೊರಭಾಗದ ಜಗುಲಿಯೇ ಕ್ಲಾಸ್ ರೂಂಗಳಾಗಿದೆ. ಬಿಸಿಲು ಬಂದಾಗ ಬಿರುಕು ಬಿಟ್ಟ ಕೊಠಡಿಯಲ್ಲಿ ಮಕ್ಕಳು ಆಶ್ರಯ ಪಡೆಯಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಇದನ್ನೂ ಓದಿ: ನಿಮ್ಮ ಮಕ್ಕಳನ್ನ ಖಾಸಗಿ ಶಾಲೆಗೆ ಸೇರಿಸಿದ್ರೇ ಆಯ್ತಾ? ಉನ್ನತ ಶಿಕ್ಷಣ ಸಚಿವ ಜಿಟಿಡಿ ಪ್ರಶ್ನೆ

ಒಂದರ್ಥದಲ್ಲಿ ವಿದ್ಯಾರ್ಥಿಗಳು ಅನಿವಾರ್ಯವಾಗಿ ಜೀವದ ಹಂಗು ತೊರೆದು ಈ ಶಾಲೆಗೆ ಬರುತ್ತಿದ್ದಾರೆ. ಪರ್ಯಾಯ ಕಟ್ಟಡಕ್ಕಾಗಿ ಗ್ರಾಮಸ್ಥರು, ಶಾಲೆಯ ಎಸ್‍ಡಿಎಂಸಿ ಸದಸ್ಯರು, ಸ್ಥಳೀಯ ಶಾಸಕರಿಗೆ ಎಷ್ಟೇ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ ಅಂತ ಎಸ್‍ಡಿಎಂಸಿ ಸದಸ್ಯ ಎಸ್.ಟಿ.ರವಿ ಆರೋಪಿಸಿದ್ದಾರೆ.

ಶಾಲಾ ಕಟ್ಟಡದ ಈ ಸ್ಥಿತಿ ಕಂಡು ಪೋಷಕರು ತಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸಲು ಹೆದರುವ ಸ್ಥಿತಿ ಬಂದಿದೆ. ಖಾಸಗಿ ಶಾಲೆಗಳ ಹಾವಳಿಯ ಮಧ್ಯೆ ಈ ಸರ್ಕಾರಿ ಶಾಲೆ ಉತ್ತಮವಾಗಿ ನಡೆಯುತ್ತಿದ್ದರು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಮುಚ್ಚಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಕುಮಾರ್ ಹೇಳಿದ್ದಾರೆ.

ಈ ಸರ್ಕಾರಿ ಶಾಲೆ ಉಳಿಯಬೇಕು. ಇಲ್ಲಿನ ಮಕ್ಕಳು ನೆಮ್ಮದಿಯಾಗಿ ಪಾಠ ಕೇಳಬೇಕಾದರೆ ತುರ್ತಾಗಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಶಾಸಕರು ಮುಂದಾಗಬೇಕು. ಇಲ್ಲದೆ ಇದ್ದರೆ ಈ ಶಾಲೆ ಮುಚ್ಚಿ ಹೋಗುವುದು ನಿಶ್ಚಿತವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *