ಮೈಸೂರು: ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಗಳೇ ದಲಿತ ಮಹಿಳೆಯ ವಿವಸ್ತ್ರಗೊಳಿಸಿ 8 ಗಂಟೆ ನಿಲ್ಲಿಸಿದ್ದ ಆರೋಪ ಕೇಳಿಬಂದಿದೆ. ಹಿರಿಯ ಅಧಿಕಾರಿಗಳ ಅಟ್ಟಹಾಸಕ್ಕೆ ಬೇಸತ್ತು ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಸರ್ಕಾರದ ಪ್ರತಿಷ್ಠಿತ ಸಂಸ್ಥೆ ಎಂಎಸ್‌ಐಎಲ್ ಕಚೇರಿಯಲ್ಲಿ ಅಮಾನವೀಯ ಘಟನೆ ನಡೆದಿದೆ ಎನ್ನಲಾಗಿದೆ. 8 ವರ್ಷದಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡಿರುವ ಮಹಿಳೆ, ಕಳೆದ 1 ವರ್ಷದಿಂದ ನಿರಂತರವಾಗಿ ದೌರ್ಜನ್ಯ ಮಾಡಿದ್ದಾರೆಂದು ಆರೋಪ ಮಾಡಿದ್ದಾರೆ. ದಲಿತೆ ಎಂಬ ಕಾರಣಕ್ಕೆ ಕೆಲಸದಿಂದ ತೆಗೆದುಹಾಕಲು ಹುನ್ನಾರ ಮಾಡಿದ್ರಂತೆ. ಇದೇ ನೆಪದಲ್ಲಿ ಚೆಕ್ ಕಳ್ಳತನದ ಆರೋಪ ಹೊರಿಸಿದ ಅಧಿಕಾರಿಗಳು, ಸುಮಾರು 8 ಗಂಟೆಯವರೆಗೂ ವಿವಸ್ತ್ರಗೊಳಿಸಿ ನಿಲ್ಲಿಸಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಆರಂಭ – ಬೆಂಗಳೂರಲ್ಲಿ ಬಿರುಗಾಳಿ ಸಹಿತ ಮಳೆ
ಈ ಸಂಬಂಧ ಜನರಲ್ ಮ್ಯಾನೇಜರ್ ಚಂದ್ರಶೇಖರ್, ಡೆಪ್ಯೂಟಿ ಮ್ಯಾನೇಜರ್ ನಳಿನಿ, ಸಿಇಒ ವೀಣಾ ಎಂಬುವವರ ಮೇಲೆ ಮಹಿಳೆ ವೆಸ್ಟ್ ಡಿಸಿಆರ್‌ಇ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಗೃಹ ಸಚಿವ ಪರಮೇಶ್ವರ್, ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತೆ ಎಂದಿದ್ದಾರೆ.

