ಚಂದ್ರ ಗ್ರಹಣದ ನಂತ್ರ ರಾಜ್ಯಕ್ಕೆ ದಲಿತ ಸಿಎಂ – ಜ್ಯೋತಿಷಿ ಅಮ್ಮಣ್ಣಾಯ ಭವಿಷ್ಯ

Public TV
2 Min Read

ಉಡುಪಿ: ಚಂದ್ರ ಗ್ರಹಣದ ನಂತರ ರಾಜ್ಯಕ್ಕೆ ದಲಿತ ಸಿಎಂ ಆಯ್ಕೆಯಾಗುವ ಸಾಧ್ಯತೆ ಇದೆ. ಮೈತ್ರಿ ಸರ್ಕಾರಕ್ಕೆ ನಿಮ್ಮ ವರ್ಗದವರು ಅಧಿಕಾರ ಚುಕ್ಕಾಣಿ ಹಿಡಿಯಲು ಗ್ರಹಣ ಸಹಕಾರ ಕೊಡುತ್ತದೆ ಎಂದು ಖ್ಯಾತ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.

ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ರಾಜಕಾರಣಿಗಳ ಪರವಾಗಿ ಮಾತನಾಡಲ್ಲ. ಕರ್ನಾಟಕದ ಜನತೆಯ ಪರವಾಗಿ ಹೇಳುತ್ತೇನೆ. ವಾತಾವರಣಕ್ಕೆ ಹಿತವಾಗಿ ರಾಜಕಾರಣ ಇದ್ದರೆ ಮಾತ್ರ ರಾಜ್ಯದ ಭವಿಷ್ಯ ಚೆನ್ನಾಗಿರುತ್ತದೆ. ರಾಜ್ಯಕ್ಕೂ ಜನಕ್ಕೂ ಅದು ಹಿತ ಎಂದು ಹೇಳಿದರು. ಮೈತ್ರಿ ಸರ್ಕಾರದ ರಚನೆ ಪ್ರಕೃತಿಯ ಸ್ಥಿತಿಗೆ ವಿರೋಧವಿದೆ. ಬೆಳಕಿಗೆ ತಕ್ಕಂತೆ ಜನ ಬದುಕಬೇಕು. ರಾಜ್ಯದ ಜನ ಬಿಜೆಪಿ ಕಡೆ ಒಲವು ತೋರಿರುವಾಗ, ಜೆಡಿಎಸ್- ಬಿಜೆಪಿ ಮೈತ್ರಿಯಾಗಿದ್ದರೆ ಸರ್ಕಾರ ಐದು ವರ್ಷ ಪೂರೈಸುತ್ತಿತ್ತು. ಕೇಂದ್ರದ ಅನುದಾನ ಬಂದು ಅಭಿವೃದ್ಧಿ ಆಗುತಿತ್ತು. ಈಗಿನ ಸ್ಥಿತಿಯಲ್ಲಿ ಸರ್ಕಾರ ಬೀಳುವ ಸಾಧ್ಯತೆಯೇ ಹೆಚ್ಚು ಎಂದರು.

ಗ್ರಹಗತಿಯಲ್ಲಿ ದುರ್ಯೋಗಕ್ಕೂ- ಸುಯೋಗಕ್ಕೂ ಗ್ರಹಣದ ನಂತರ ಭಂಗವಿದೆ. ಸರ್ಕಾರ ಅಸ್ಥಿರವಾಗಿದೆ. ಕರ್ನಾಟಕ ಜನಕ್ಕೆ ಜವಾಬ್ದಾರಿಯುತ ವ್ಯಕ್ತಿಯ ನೇತೃತ್ವ ಇಲ್ಲ. ಅಸಂಬದ್ಧ ಮಾತು, ಅಸಂಬದ್ಧ ನಡವಳಿಕೆಯನ್ನು ಜನ ಸಹಿಸುತ್ತಿಲ್ಲ ಎಂದರು. ದಲಿತ ಸಿಎಂ ಎಂದಾಗ ಮಲ್ಲಿಕಾರ್ಜುನ ಖರ್ಗೆ ಹೆಸರು ಮೇಲ್ಪಂಕ್ತಿಗೆ ಬರುತ್ತದೆ. ಖರ್ಗೆ ರಾಜಕೀಯ ಮುತ್ಸದ್ಧಿ. ಮಲ್ಲಿಕಾರ್ಜುನ ಖರ್ಗೆಯನ್ನು ಈ ಮೊದಲೇ ಸಿಎಂ ಮಾಡಿದರೆ ಇಂತಹ ಯಾವುದೇ ಗೊಂದಲಗಳು ಬರುತ್ತಿರಲಿಲ್ಲ ಎಂದರು.

ಅಧಿಕಾರದಲ್ಲಿರುವವರ ಹಣೆಬರಹ ಸರಿ ಇಲ್ಲದಿದ್ದರೆ ಹೀಗೆಲ್ಲ ಆಗುತ್ತದೆ. ಕರ್ನಾಟಕದ ಸುಗಮ ಸ್ಥಿತಿಗೆ ಒಂದು ಕಾಲದಲ್ಲಿ ಶೋಷಿತರು, ನಿಮ್ಮ ವರ್ಗದವರು ಮೇಲ್ಪಂಕ್ತಿಗೆ ಬರಬೇಕು ಎಂದಿದ್ದರು. ಮೈತ್ರಿಯೊಳಗಿರುವ ನಾಯಕರ ಪರಿಸ್ಥಿತಿ ಸರಿಯಿಲ್ಲದಿರುವಾಗ ಖರ್ಗೆ ಸಿಎಂ ಆದರೂ ಬಾಳಲಿಕ್ಕಿಲ್ಲ. ಬಿಜೆಪಿ ಸರ್ಕಾರ ಬಂದರೂ ದಲಿತ ಸಿಎಂ ಆಗುವ ಅವಕಾಶ ಇದೆ ಎಂದು ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.

ದಲಿತ ನಾಯಕನಿಗೆ ಆ ಸ್ಥಾನಮಾನ ಕೊಟ್ಟರೆ ಎಲ್ಲರೂ ಬೆಂಬಲ ಕೊಡುತ್ತಾರೆ. ಚುನಾವಣೆಗೆ ಹೋಗದೆ ಇದ್ದರೂ ಚುನಾವಣೆಗೆ ಹೋದರೂ ದಲಿತ ಸಿಎಂ ಆದರೆ ಪಕ್ಷದ, ರಾಜ್ಯದ ಭವಿಷ್ಯ ಒಳ್ಳೆದಿರುತ್ತದೆ. ಪ್ರಜೆಗಳು ಪ್ರಬುದ್ಧರಾಗಿದ್ದಾರೆ- ಎಲ್ಲವನ್ನೂ ನೋಡುತ್ತಾರೆ. ಬಿಜೆಪಿಯಲ್ಲಿ ಯಡಿಯೂರಪ್ಪ ಮಾಸ್ ಲೀಡರ್. ದೊಡ್ಡ ಸಂಘಟಕ- ಅಭಿವೃದ್ಧಿಯ ಚಿಂತನೆ ಇರುವ ವ್ಯಕ್ತಿ. ಯಡಿಯೂರಪ್ಪ ಜಾತಕದ ಪ್ರಕಾರ ವೃಷಭದಲ್ಲಿ ಶನಿ ಇರುವಾಗ ಅವರ ಜಾತಕ ಸಿಎಂ ಗಾದಿಗೆ ಸೂಕ್ತವಾಗಿಲ್ಲ. ಗ್ರಹಗತಿ ಸರಿ ಇಲ್ಲದಿರುವಾಗ ಅವರು ಸಿಎಂ ರೇಸ್‍ನಿಂದ ಹಿಂದೆ ಉಳಿದುಕೊಳ್ಳುವುದು ಒಳ್ಳೆಯದು ಎಂದು ಅಮ್ಮಣ್ಣಾಯ ಹೇಳಿದರು.

ಬಿಜೆಪಿಯಲ್ಲಿ ಸಿಎಂ ಆಗುವ ಜಾತಕಫಲ ಇರುವ ಸಾಕಷ್ಟು ಜನ ದಲಿತ ನಾಯಕರು ಇರುವುದರಿಂದ ಈ ಬಗ್ಗೆ ದೃಷ್ಟಿ ನೆಡಬಹುದು. ಆರ್‍ಎಸ್‍ಎಸ್ ಗರಡಿಯಲ್ಲಿ ಪಳಗಿದವರು, ಯಡಿಯೂರಪ್ಪನವರ ಶಿಷ್ಯರು ಸಿಎಂ ಆಗುವ ಎಲ್ಲ ಅವಕಾಶ ಇದೆ. ಗಟ್ಟಿ ನಾಯಕತ್ವ ಇರುವ ಜಾತಕಫಲ ಚೆನ್ನಾಗಿರುವ ದಲಿತ ನಾಯಕ ಸಿಎಂ ಆಗುತ್ತಾರೆ ಎಂದು ಅಮ್ಮಣ್ಣಾಯ ಭವಿಷ್ಯ ನುಡಿದರು.

Share This Article
Leave a Comment

Leave a Reply

Your email address will not be published. Required fields are marked *