ವೀರರಾಣಿ ಅಬ್ಬಕ್ಕ ಉತ್ಸವ ಸಮಾರೋಪ- ಪ್ರೇಕ್ಷಕರನ್ನು ರಂಜಿಸಿದ ಕಲಾವಿದರು

Public TV
2 Min Read

– ಅಬ್ಬಕ್ಕ ಭವನಕ್ಕೆ ಶೀಘ್ರ ಚಾಲನೆ: ಸಚಿವ ಕೋಟ
– ಅಬ್ಬಕ್ಕ ಉತ್ಸವ ರಾಜ್ಯದಾದ್ಯಂತ ನಡೆಯಲಿ: ಉಷಾ ಪಿ. ರೈ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಆಶ್ರಯದಲ್ಲಿ ಅಸೈಗೋಳಿಯ ಕೇಂದ್ರ ಮೈದಾನದಲ್ಲಿ ಎರಡು ದಿನ ನಡೆದ ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವದ ಸಮಾರೋಪ ಸಮಾರಂಭ ಇಂದು ನಡೆಯಿತು. ಈ ವೇಳೆ ವಿವಿಧ ಕಲಾವಿದರು ಪ್ರೇಕ್ಷಕರನ್ನು ರಂಜಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು, ಅಬ್ಬಕ್ಕ ಭವನ ಕಾಮಗಾರಿ ಎಂಟು ಕೋಟಿ ರೂಪಾಯಿ ವೆಚ್ಚದಲ್ಲಿ ಶೀಘ್ರ ಆರಂಭಗೊಳ್ಳಲಿದೆ. ರಾಣಿ ಅಬ್ಬಕ್ಕ ತಾಯ್ನಾಡಿಗಾಗಿ ಮಾತ್ರವಲ್ಲದೆ ತನ್ನ ಬದುಕನ್ನೇ ತ್ಯಾಗ ಮಾಡಿದರು. ಇಂದು ರಾಷ್ಟ್ರ ಪ್ರೇಮಿಗಳಿಗೆ ಯಾರದ್ದಾದರೂ ಹೆಸರು ನೆನಪು ಬರುವುದಾದರೆ ಮೊದಲ ಹೆಸರು ಅಬ್ಬಕ್ಕಳದ್ದಾಗಿರಬೇಕು. ಅಬ್ಬಕ್ಕ ಉತ್ಸವ ಯಶಸ್ವಿಯಾಗಿ ನಡೆದಿದ್ದು ಜಿಲ್ಲಾಡಳಿತಕ್ಕೆ ಗೌರವ ತಂದಿದೆ ಎಂದು ತಿಳಿಸಿದರು.

ಅಬ್ಬಕ್ಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಹಿತಿ, ಕಾದಂಬರಿಗಾರ್ತಿ ಉಷಾ ಪಿ.ರೈ, ಕುಟುಂಬ ಮತ್ತು ನಾಡಿನ ಜನರನ್ನು ಉಳಿಸಲು ಅಬ್ಬಕ್ಕ ಮಾಡಿದ ಹೋರಾಟ ಆಕೆಯ ಶೌರ್ಯಕ್ಕೆ ಸಾಕ್ಷಿ, ಆಕೆಯ ಸೈನ್ಯದಲ್ಲಿ ಎಲ್ಲಾ ಧರ್ಮದವರು ಇದ್ದರು. ಇದರಲ್ಲಿ ಪ್ರಮುಖವಾಗಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕೊನೆಗಾಲದಲ್ಲಿ ಅಬ್ಬಕ್ಕ ಮಸೀದಿಯಲ್ಲಿ ರಕ್ಷಣೆ ಪಡೆದಿದ್ದಳು ಎಂದು ಅಭಿಪ್ರಾಯಪಟ್ಟರು.

ಚರಿತ್ರೆಗಾರರು ಅಬ್ಬಕ್ಕಳನ್ನು ಹಿಂದಿನ ಕಾಲದಲ್ಲಿ ಮರೆತ ಕಾರಣ ನಾವು ಶಾಲೆಯಲ್ಲಿ ಓದುತ್ತಿದ್ದಾಗ ಅಬ್ಬಕ್ಕಳ ಚರಿತ್ರೆ ಪುಸ್ತಕಗಳನ್ನು ಓದಲು ಸಾಧ್ಯವಾಗಲಿಲ್ಲ. ಆದರೆ ಹೊರ ಜಿಲ್ಲೆಯ ಚರಿತ್ರೆಗಾರರು ಹೆಚ್ಚಾಗಿ ನೆನಪಿಸಿಕೊಂಡಿದ್ದರು ಮಹತ್ವದ ವಿಷಯವಾಗಿದೆ. ನಾವು ಎಲ್ಲೇ ಇದ್ದರೂ ನಾವು ಜನಿಸಿದ ಬೆಳೆದ ಊರನ್ನು ಮರೆಯಬಾರದು. ಅಬ್ಬಕ್ಕ ಉತ್ಸವ ಕೇವಲ ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತವಾಗದೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ನಡೆಯಲಿ ಎಂದು ಹಾರೈಸಿದರು.

ಹಿಂದಿನ ಕಾಲದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರ ನಡುವೆ ಘರ್ಷಣೆ ನಡೆದ ನೆನಪಿಲ್ಲ. ಈಗಿನ ಮಕ್ಕಳು ನಡೆದುಕೊಳ್ಳುವ ರೀತಿ ಭಯ ಹುಟ್ಟಿಸುತ್ತದೆ. ಜಾತಿ, ಮತಗಳ ಕಾರಣಕ್ಕೆ ಬೆಂಕಿ ಹೊತ್ತಿ ಉರಿದಾಗ ಬೇಸರವಾಗುತ್ತದೆ. ಹಿಂದೆಲ್ಲಾ ಇಲ್ಲದ ಎಡ, ಬಲ ಎನ್ನುವ ಪದ ಇಂದು ಹುಟ್ಟಿಕೊಂಡಿರುವುದರಿಂದ ಮಾತನಾಡಲು ಹಿಂಜರಿಕೆಯಾಗುತ್ತದೆ. ಆಳುವವರು ಯಾರೇ ಆದರೂ ದೇಶ ನಮ್ಮದು ಎಂದು ಭಾವಿಸಿದಾಗ ಯಾವುದೇ ಅಹಿತಕರ ಘಟನೆಗಳು ನಡೆಯದು. ಹೆತ್ತವರು ಮಕ್ಕಳಿಗೆ ಕೊಡುವ ದೊಡ್ಡ ಆಸ್ತಿ ವಿದ್ಯೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾಹಿತಿ, ಕಾಂದಬರಿಗಾರ್ತಿ ಉಷಾ ಪಿ.ರೈ ಹಾಗೂ ಅಂತರರಾಷ್ಟ್ರೀಯ ಕ್ರೀಡಾಪಟು ಶ್ರೀಮಾ ಪ್ರಿಯದರ್ಶಿನಿ ಅವರಿಗೆ ಅಬ್ಬಕ್ಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್, ಸಹಾಯಕ ಆಯುಕ್ತ ಮದನ್ ಮೋಹನ್, ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್, ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ ಮೊದಲಾದವರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *