ಮಂಗಳೂರಲ್ಲಿ ಸಾಲು ಸಾಲು ಹತ್ಯೆ ಬೆನ್ನಲ್ಲೇ ಇಬ್ಬರು ಐಪಿಎಸ್‌ ಅಧಿಕಾರಿಗಳ ಎತ್ತಂಗಡಿ

By
2 Min Read
  • ನೂತನ ಕಮಿಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ, ಎಸ್‌ಪಿಯಾಗಿ ಡಾ‌.ಅರುಣ್.ಕೆ ನೇಮಕ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina Kannada) ನಡೆದ ಸಾಲು ಸಾಲು ಹತ್ಯೆಗಳ ಬಳಿಕ ಇಬ್ಬರು ಐಪಿಎಸ್‌ ಅಧಿಕಾರಿಗಳನ್ನು ಸರ್ಕಾರ ಎತ್ತಂಗಡಿ ಮಾಡಿದೆ. ಮಂಗಳೂರು (Mangaluru) ಪೊಲೀಸ್ ಕಮಿಷನರ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹಾಗೂ ದಕ್ಷಿಣ ಕನ್ನಡ ಎಸ್‌ಪಿ ಯತೀಶ್.ಎನ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಇಬ್ಬರನ್ನೂ‌ ಏಕಕಾಲಕ್ಕೆ ವರ್ಗಾವಣೆ ಮಾಡಿ‌ ಸರ್ಕಾರ ಆದೇಶ ಹೊರಡಿಸಿದೆ. ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆ ಕೇಸ್ – ಸಫ್ವಾನ್ ಗ್ಯಾಂಗ್‌ನ ಇಬ್ಬರು ಆರೋಪಿಗಳು ಅರೆಸ್ಟ್

ಮಂಗಳೂರು ನೂತನ ಪೊಲೀಸ್ ಆಯುಕ್ತರಾಗಿ ಸುಧೀರ್ ಕುಮಾರ್ ರೆಡ್ಡಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ‌.ಅರುಣ್.ಕೆ ಅವರನ್ನು ನೇಮಕ ಮಾಡಲಾಗಿದೆ. ಮಂಗಳೂರು ನಗರ ಹಾಗೂ ದ.ಕ.ಜಿಲ್ಲಾ ವ್ಯಾಪ್ತಿಯಲ್ಲಿ ನಡೆದ ಸರಣಿ ಹತ್ಯೆಯ ಬಳಿಕ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಮಂಗಳೂರು ನಗರ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಒಂದು ತಿಂಗಳೊಳಗೆ ಮೂರು‌ ದ್ವೇಷದ ಹತ್ಯೆ ನಡೆದಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿರೋ ಹಿನ್ನಲೆಯಲ್ಲಿ ಪೊಲೀಸ್ ಅಧಿಕಾರಿಗಳ ತಲೆದಂಡವಾಗಿದೆ.

ಜಿಲ್ಲೆಯ ಕೊಳತ್ತಮಜಲು ಎಂಬಲ್ಲಿ ಮರಳು ಅನ್‌ಲೋಡ್ ಮಾಡುತ್ತಿದ್ದ ರಹೀಂ ಹಾಗೂ ಕಲಂದರ್ ಮೇಲೆ, ಇಬ್ಬರು ದುಷ್ಕರ್ಮಿಗಳು ತಲ್ವಾರ್‌ನಿಂದ ದಾಳಿ ನಡೆಸಿದ್ದರು. ಈ ವೇಳೆ ರಹೀಂ ಸ್ಥಳದಲ್ಲೇ ಮೃತಪಟ್ಟಿದ್ದರು. ಇತ್ತೀಚೆಗೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಎಂಬವರ ಹತ್ಯೆಯಾಗಿತ್ತು. ಸುಹಾಸ್‌ ಶೆಟ್ಟಿ ಬರುತ್ತಿದ್ದ ಇನ್ನೋವಾ ಕಾರನ್ನು ಮೀನಿನ ಟೆಂಪೋ ಹಾಗೂ ಒಂದು ಸ್ವಿಫ್ಟ್ ಕಾರು ಹಿಂಬಾಲಿಸಿಕೊಂಡು ಬಂದಿತ್ತು. ನಂತರ ಮೀನಿನ ಟೆಂಪೋವನ್ನು ಸುಹಾಸ್ ಇದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆಸಲಾಗಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ಇನ್ನೋವಾ ಕಾರು ಸಲೂನ್‌ಗೆ ನುಗ್ಗಿತ್ತು. ಬಳಿಕ ಸ್ವಿಫ್ಟ್ ಕಾರಿನಲ್ಲಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಸಾರ್ವಜನಿಕ ರಸ್ತೆಯಲ್ಲೇ ಅವರನ್ನು ಬರ್ಬರವಾಗಿ ಕೊಲೆಗೈದು ಅಲ್ಲಿಂದ ಪರಾರಿಯಾಗಿದ್ದರು. ಇದರ ಬೆನ್ನಲ್ಲೇ ಜಿಲ್ಲೆಯಲ್ಲಿ ಹಲವಾರ ಅಹಿತಕರ ಘಟನೆಗಳು ನಡೆದಿದ್ದವು. ಇದನ್ನೂ ಓದಿ: ಅಬ್ದುಲ್‌ ರಹಿಮಾನ್‌ ಹತ್ಯೆ ಕೇಸ್‌ – ಮೂವರು ಆರೋಪಿಗಳ ಬಂಧನ

Share This Article