ಬಪ್ಪನಾಡು ದುರ್ಗೆಗೆ ಭಕ್ತರಿಂದ 5 ಕೋಟಿ ಮೌಲ್ಯದ ಚಿನ್ನದ ಪಲ್ಲಕ್ಕಿ ಸಮರ್ಪಣೆ

Public TV
2 Min Read

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪವಿತ್ರ ಪುಣ್ಯಕ್ಷೇತ್ರ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀದೇವಿಯ ಕೋರಿಕೆಯಂತೆ ಭಕ್ತರು ಕೋಟ್ಯಂತರ ರೂ. ಮೌಲ್ಯದ ಚಿನ್ನದ ಪಲ್ಲಕ್ಕಿಯನ್ನ ಸಮರ್ಪಣೆ ಮಾಡಿದ್ದಾರೆ.

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಬಪ್ಪನಾಡು ಕ್ಷೇತ್ರದ ಅತ್ಯಂತ ಪವಿತ್ರ ಪುಣ್ಯ ಕ್ಷೇತ್ರವಾಗಿದೆ. ಸುಮಾರು 800 ವರ್ಷಗಳ ಇತಿಹಾಸವಿರುವ ಈ ದೇವಸ್ಥಾನವನ್ನು ಮುಸ್ಲಿಂ ವ್ಯಾಪಾರಿಯಾಗಿದ್ದ ಬಪ್ಪ ಬ್ಯಾರಿ ತನ್ನ ಕನಸಿನಲ್ಲಿ ದೇವಿ ಕಾಣಿಸಿಕೊಂಡ ಕಾರಣ ಗುಡಿ ಕಟ್ಟಿ ನಂಬಿದ್ದರು ಎನ್ನುವ ಪ್ರತೀತಿ ಇದೆ. ದೇವಾಲಯದ ಮುಖ್ಯ ದೇವತೆ ಶ್ರೀ ದುರ್ಗಾಪರಮೇಶ್ವರಿಯಾಗಿದ್ದು, ಲಿಂಗ ರೂಪದಲ್ಲಿ ಆರಾಧಿಸಲ್ಪಡುತ್ತಾಳೆ. ಎಲ್ಲ ಜನಾಂಗ ಮತ್ತು ಜಾತಿಗಳ ಜನರ ಪಾಲಿಗೆ ಆರಾಧ್ಯ ದೇವತೆಯಾಗಿರುವ ದುರ್ಗಾಪರಮೇಶ್ವರಿಗೆ ಚಿನ್ನದ ಪಲ್ಲಕ್ಕಿಯನ್ನ ಸಮರ್ಪಣೆ ಮಾಡಬೇಕು ಎನ್ನುವುದು ಅಷ್ಟಮಂಗಳ ಪ್ರಶ್ನೆಯ ವೇಳೆ ಗೊತ್ತಾಗಿತ್ತು.

ಚಿನ್ನದ ಪಲ್ಕಕ್ಕಿಗೆ ಕೋಟ್ಯಂತರ ರೂಪಾಯಿ ವ್ಯಯವಾಗುವ ಕಾರಣದಿಂದ ಒಂದಷ್ಟು ಆತಂಕವಾಗಿತ್ತು. ಆದರೆ ಕ್ಷೇತ್ರದ ಆಡಳಿತ ಮಂಡಳಿ ಮತ್ತು ಭಕ್ತರು ಚಿನ್ನದ ಪಲ್ಲಕ್ಕಿ ನಿರ್ಮಾಣಕ್ಕೆ ಮುಂದಾಗಿದ್ದು, 2018ರ ವಿಜಯದಶಮಿ ದಿನ ಭಕ್ತರಿಂದ ದೇಣಿಗೆ ಸಂಗ್ರಹಿಸಲು ಆರಂಭಿಸಿದರು. ಆ ಬಳಿಕ ನಡೆದಿದ್ದು ಅಕ್ಷರಶಃ ಪವಾಡ. ಚಿನ್ನ, ನಗದು ಸೇರಿದಂತೆ ಭಾರೀ ಪ್ರಮಾಣದ ದೇಣಿಗೆ ಕ್ಷೇತ್ರಕ್ಕೆ ಹರಿದು ಬಂತು. ಕೇವಲ 1 ವರ್ಷ 4 ತಿಂಗಳ ಅಂತರದಲ್ಲಿ ಬರೋಬ್ಬರಿ 5 ಕೋಟಿ ಮೌಲ್ಯದ 11 ಕೆ.ಜಿ. ತೂಕದ ಬೃಹತ್ ಸ್ವರ್ಣ ಪಲ್ಕಕ್ಕಿ ಎದ್ದು ನಿಂತಿದೆ. ಅದನ್ನು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ದುರ್ಗಾಪರಮೇಶ್ವರಿಗೆ ಅರ್ಪಣೆ ಮಾಡಲಾಗಿದೆ.

ಈ ಚಿನ್ನದ ಪಲ್ಲಕ್ಕಿ ನಿರ್ಮಾಣದ ಕಾರ್ಯ 1 ವರ್ಷ 4 ತಿಂಗಳ ಹಿಂದೆ ಆರಂಭವಾದರೂ ದೇಣಿಗೆ ಸಂಗ್ರಹಿಸುವ ಕೆಲಸ ನಡೆಯುತ್ತಿತ್ತು. ಈ ವೇಳೆ ಅನೇಕ ಭಕ್ತರು ಚಿನ್ನ, ತಮ್ಮ ಒಡವೆಗಳು ಸೇರಿ ನಗದು ರೂಪದಲ್ಲೂ ದೇಣಿಗೆ ನೀಡಿದ್ದಾರೆ. ಹೀಗೆ ಕೋಟಿ ಕೋಟಿ ರೂಪಾಯಿ ಸಂಗ್ರಹವಾದ ಬೆನ್ನಲ್ಲೇ ದೇವಸ್ಥಾನದ ಆಡಳಿತ ಮಂಡಳಿ ಉಡುಪಿಯ ಗುಜ್ಹಾಡಿಯ ಸ್ವರ್ಣ ಜ್ಯೂವೆಲ್ಲರಿಗೆ ಚಿನ್ನದ ಪಲ್ಲಕ್ಕಿ ನಿರ್ಮಾಣದ ಜವಾಬ್ದಾರಿ ವಹಿಸಿದೆ.

ದೇವಸ್ಥಾನದ 1.50 ಕೆ.ಜಿ ಹಳೆಯ ಚಿನ್ನ, ಭಕ್ತರಿಂದ ಸಂಗ್ರಹವಾದ 6 ಕೆ.ಜಿ ಚಿನ್ನ ಮತ್ತು ದೇಣಿಗೆ ಬಂದ ನಗದನ್ನು ಸೇರಿಸಿ ಪಲ್ಲಕ್ಕಿ ನಿರ್ಮಾಣದ ಕೆಲಸ ಉಡುಪಿಯಲ್ಲಿ ಶುರುವಾಗಿತ್ತು. ಆಂಧ್ರ ಪ್ರದೇಶ ಮೂಲದ ಶಿಲ್ಪಿ ಅರ್ಜುನ್ ಮತ್ತು ಅವರ ತಂಡ ಸುಮಾರು ಎರಡು ತಿಂಗಳ ಕಾಲ ಶ್ರಮ ವಹಿಸಿ ಭವ್ಯ ಸ್ವರ್ಣ ಪಲ್ಲಕ್ಕಿ ನಿರ್ಮಾಣ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಕ್ಷೇತ್ರಕ್ಕೆ ತರಲಾಗಿದ್ದ ಪಲ್ಲಕ್ಕಿಯನ್ನು ಇಂದು ದೇವರಿಗೆ ಅರ್ಪಣೆ ಮಾಡಲಾಯ್ತು. ಕ್ಷೇತ್ರದಲ್ಲಿ ಶತ ಚಂಡಿಕಾಯಾಗದ ಜೊತೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪಲ್ಲಕ್ಕಿಯನ್ನ ದೇವಿಗೆ ಅರ್ಪಿಸಲಾಗಿದೆ. ಇಷ್ಟು ದಿನ ಬೆಳ್ಳಿಯ ಪಲ್ಲಕ್ಕಿಯಲ್ಲಿ ವಾರ್ಷಿಕ ಜಾತ್ರೋತ್ಸವದ ವೇಳೆ ವಿರಾಜಮಾನಳಾಗುತ್ತಿದ್ದ ದುರ್ಗೆ ಇನ್ನು ಮುಂದೆ ಸ್ವರ್ಣ ಪಲ್ಲಕ್ಕಿಯಲ್ಲಿ ವಿರಾಜಮಾನಳಾಗಲಿದ್ದಾಳೆ. ಇದು ಭಕ್ತರಿಗೂ ಖುಷಿ ಕೊಟ್ಟಿದೆ.

ಕಳೆದ ವರ್ಷ ನಡೆದ ಬ್ರಹ್ಮಕಲಶೋತ್ಸವದಲ್ಲಿ ಉಳಿಕೆಯಾಗಿದ್ದ ಒಂದೂವರೆ ಕೋಟಿ ರೂಪಾಯಿಯನ್ನೂ ಈ ಚಿನ್ನದ ಪಲ್ಲಕ್ಕಿಗೆ ದೇಣಿಗೆಯಾಗಿ ಹಾಕಲಾಗಿದೆ. ಒಟ್ಟಿನಲ್ಲಿ ಬಪ್ಪನಾಡಿನ ಭಕ್ತ ಸಾಗರ ಹರಿಸಿದ ದೇಣಿಗೆ ಚಿನ್ನದ ಪಲ್ಲಕ್ಕಿ ಸಮರ್ಪಣೆಗೆ ಸಾಕ್ಷಿಯಾಗಿದೆ. ಈ ಮೂಲಕ ತನ್ನ ಇಷ್ಟಾರ್ಥ ಈಡೇರಿಸಿಕೊಂಡ ದೇವಿ ಭಕ್ತರನ್ನು ಕಾಯುತ್ತಾ, ಬಪ್ಪನಾಡಿನಲ್ಲಿ ಸಾಮರಸ್ಯ ಕಾಯುವ ದೇವತೆಯಾಗಿ ಕಂಗೊಳಿಸುತ್ತಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *