ದೈವಾರಾಧನೆಯ ಕಟ್ಟುಪಾಡು ಮುರಿದು ನೇಮೋತ್ಸವ – ಕ್ರೈಸ್ತ ಸಮುದಾಯದ ವ್ಯಕ್ತಿಯಿಂದ ದೈವ ನರ್ತನ!

2 Min Read

– ಮೂಲ ನಂಬಿಕೆ ಮತ್ತು ಸಂಪ್ರದಾಯಕ್ಕೆ ಚ್ಯುತಿ
– ಪಂಬದ ಸಮುದಾಯದ ಸಂಶೋಧಕಿ ಡಾ.ರತಿ ಆರೋಪ

ಮಂಗಳೂರು: ತುಳುನಾಡಿನ ದೈವಾರಾಧನೆಗೆ ಅದರದ್ದೇ ಆದ ಕಟ್ಟುಪಾಡುಗಳಿವೆ.16 ಸಮುದಾಯಗಳ ಒಟ್ಟುಗೂಡುವಿಕೆಯಲ್ಲಿ ನೇಮ, ಕೋಲಗಳು ನಡೆದರೂ ದೈವ ನರ್ತಕರು (Daiva Nartaka) ಮಾತ್ರ ಪಂಬದ, ಪರವ ಹಾಗೂ ನಲಿಕೆ ಜನಾಂಗದವರೇ ಆಗಬೇಕೆಂಬ ನಿಯಮ ಇದೆ. ಇದೀಗ ಈ ನಿಯಮವನ್ನು ಧಿಕ್ಕರಿಸಿ ಕ್ರಿಶ್ಚಿಯನ್ ಸಮುದಾಯದ ವ್ಯಕ್ತಿಯಿಂದ ನೇಮಕ್ಕೆ ನರ್ತನ ಸೇವೆ ಮಾಡಿಸಲಾಗಿದೆ  ಎಂಬ ಭಾರೀ ವಿವಾದ ಈಗ ಎದ್ದಿದೆ.

ದೈವಾರಾಧನೆ ತುಳುನಾಡಿನ(Tulunadu) ನಂಬಿಕೆ ಅಸ್ಮಿತೆ. ದೈವದ ನರ್ತನ ಸೇವೆ ಎನ್ನುವುದು ಪರವ, ಪಂಬದ ಹಾಗೂ ನಲಿಕೆ ಸಮುದಾಯಕ್ಕೆ ಸೀಮಿತ. ಇದುವರೆಗೆ ನಡೆದುಕೊಂಡ ನಿಯಮ ಅದು. ಆದರೆ ಈಗ ಅಪಚಾರ ಆಗಿದೆ ಎನ್ನುವ ಮಾತು ಕೇಳಿ ಬಂದಿದೆ. ಇತ್ತೀಚೆಗೆ ಮಂಗಳೂರಿನ ಬೋಳೂರು ದೈವಸ್ಥಾನವೊಂದರಲ್ಲಿ ನಡೆದ ದೈವಗಳ ನೇಮದ ವೇಳೆ ಬಂಟ ದೈವಕ್ಕೆ ಕ್ರಿಶ್ಚಿಯನ್(Christian) ಸಮುದಾಯದ ವ್ಯಕ್ತಿ ನೇಮ ಕಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ದೈವಸ್ಥಾನದ ಆಡಳಿತ ಮಂಡಳಿ ಈ ಬಾರಿಯ ನೇಮ ಕಟ್ಟುವ ಜವಾಬ್ದಾರಿಯನ್ನು ಕಾಸರಗೋಡಿನ ಚಿಪ್ಪಾರು ಬಾಯಾರಿನ ಗಣೇಶ ಪಂಬದ ಅವರಿಗೆ ವಹಿಸಿತ್ತು.ಇವರು ಪದವಿನಂಗಡಿಯ ದಿವಂಗತ ಗಣೇಶ ಪಂಬದರ ಕ್ರಿಶ್ಚಿಯನ್ ಪತ್ನಿಯಿಂದ ಜನಿಸಿದ ಪುತ್ರನಿಂದ ಬಂಟ ದೈವಕ್ಕೆ ನೇಮ ಕಟ್ಟಿಸಿದ್ದು ಆಕ್ಷೇಪಕ್ಕೆ ಕಾರಣವಾಗಿದೆ. ಇದನ್ನೂ ಓದಿ: ನಿಮ್ಮ ನೆಚ್ಚಿನ ಸಾಧಕರನ್ನು ಪದ್ಮ ಪ್ರಶಸ್ತಿಗೆ ಶಿಫಾರಸು ಮಾಡಿ!

ಪಂಬದ ಸಮುದಾಯವು ಮಾತೃ ಪ್ರಧಾನ ವ್ಯವಸ್ಥೆಯನ್ನು ಪಾಲಿಸಿಕೊಂಡು ಬರುತ್ತಿದೆ. ನೇಮ ಕಟ್ಟಿದ ವ್ಯಕ್ತಿಯು ದಿ.ಗಣೇಶ ಪಂಬದರ ಜೈವಿಕ ಪುತ್ರರೇ ಆಗಿದ್ದರೂ, ತಾಯಿ ಕ್ರಿಶ್ಚಿಯನ್ ಸಮುದಾಯದವರಾಗಿದ್ದ ಕಾರಣ ನಿಯಮದ ಪ್ರಕಾರ ಹಾಗೂ ಅಳಿಯ ಕಟ್ಟಿನ ಪ್ರಕಾರ ಆತ ಕ್ರಿಶ್ಚಿಯನ್ ಸಮುದಾಯದವರೇ ಆಗುತ್ತಾರೆ. ಆದ್ದರಿಂದ ಆತನಿಂದ ನೇಮ ಕಟ್ಟಿಸಿದ್ದು ತಪ್ಪು.ಈ ಬಗ್ಗೆ ಆಕ್ಷೇಪಣೆ ಮಾಡಿದ್ದಕ್ಕೆ ತನ್ನನ್ನು ನಿಂದಿಸಲಾಗಿದೆ ಎಂದು ಈ ಬಗ್ಗೆ ಆಕ್ಷೇಪ ಎತ್ತಿರುವ ಸಂಶೋಧಕಿ ಹಾಗೂ ಸ್ವತಃ ಪಂಬದ ಸಮುದಾಯದವೇ ಆಗಿರುವ ಡಾ.ರತಿಯವರು ಹೇಳಿದ್ದಾರೆ.

ಈ ವಿಚಾರ ತನಗೆ ತಡವಾಗಿ ತಿಳಿದು ಬಂದಿದ್ದು, ಆದರೆ ಗಣೇಶ ಪಂಬದ ಮುಂದಕ್ಕೆ ತಮಗೆ ತೊಂದರೆ ಬರಬಹುದೆಂದು ಈ ಬಗ್ಗೆ ಆಕ್ಷೇಪ ಎತ್ತುತ್ತಿಲ್ಲ ಎನ್ನಲಾಗಿದೆ. ಆದರೂ ಆತ ಮುಂದೆ ಎಲ್ಲಿಯೂ ನೇಮ ಕಟ್ಟಬಾರದು, ಜೊತೆಗೆ ಆಗಿರುವ ತಪ್ಪಿಗೆ ದೈವದೆದುರು ಕ್ಷಮಾಯಾಚನೆ ಮಾಡಬೇಕೆಂದು ಒತ್ತಾಯಿಸುತ್ತೇನೆ. ಇದರ ವಿರುದ್ಧ ತಾರ್ಕಿಕ ಅಂತ್ಯ ಸಿಗುವವರೆಗೆ ಇದರ ವಿರುದ್ಧ ತಾನು ಕಾನೂನು ಹೋರಾಟ ನಡೆಸುತ್ತೇನೆ ಎಂದು ಡಾ.ರತಿ ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ದೈವ ನರ್ತನ ಎನ್ನುವುದು ಬಹಳ ಭಕ್ತಿ ಜವಾಬ್ದಾರಿ. ಇದೀಗ ಅಪಚಾರ ಆಗಿದೆ ಎಂಬ ಚರ್ಚೆ ಜೋರಾಗಿದೆ. ಇದು ಮುಂದೆ ಯಾವ ಹಂತಕ್ಕೆ ತಲುಪಲಿದೆ ಎಂಬುದು ಕಾದು ನೋಡಬೇಕಿದೆ.

Share This Article