ಇಂದಿನಿಂದ ಡಾಲಿ ನಟನೆಯ ‘ಕೋಟಿ’ ಸಿನಿಮಾ ಅಬ್ಬರ

Public TV
2 Min Read

ಹುನಿರೀಕ್ಷಿತ ‘ಕೋಟಿ’ (Kotee) ಸಿನಿಮಾ ಇದೀಗ ರಾಜ್ಯಾದ್ಯಂತ 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚೆನ್ನೈ ಮತ್ತು ಹೈದರಾಬಾದ್‌ನಲ್ಲೂ ಹಲವು ಶೋಗಳಿವೆ. ಈಗಾಗಲೇ ಬೆಂಗಳೂರು, ಮೈಸೂರು, ಶಿವಮೊಗ್ಗಗಳಲ್ಲಿ ಹೌಸ್‌ಫುಲ್ ಪೇಯ್ಡ್ ಪ್ರೀಮಿಯರ್ ಶೋಗಳು ನಡೆದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನೂ ಓದಿ:ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಯುವರಾಜ್‌ಕುಮಾರ್‌, ಸಪ್ತಮಿ ನಟನೆಯ ‘ಯುವ’ ಸಿನಿಮಾ

ಈ ಸಿನಿಮಾದಲ್ಲಿ ಧನಂಜಯ ‘ಕೋಟಿ’ ಎಂಬ ಒಬ್ಬ ಸಾಮಾನ್ಯ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೋಟಿಗೆ ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ರೂಪಾಯಿ ದುಡಿದು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಗುರಿಯಿರುತ್ತದೆ. ಈ ಕಥಾಹಂದರದ ‘ಕೋಟಿ’ ಇಡೀ ಫ್ಯಾಮಿಲಿಯೇ ಕೂತು ನೋಡುವಂತ ಸಿನಿಮಾ.

ಜೂನ್ 12ರಂದು ಬೆಂಗಳೂರಿನಲ್ಲಿ ನಡೆದ ಸೆಲೆಬ್ರಿಟಿ ಪ್ರೀಮಿಯರ್ ಶೋನಲ್ಲಿ 600ಕ್ಕೂ ಅಧಿಕ ಟಿವಿ ಮತ್ತು ಸಿನಿಮಾ ತಾರೆಗಳು ಸಿನಿಮಾ ವೀಕ್ಷಿಸಿದರು. ಸಿನಿಮಾದಲ್ಲಿನ ಧನಂಜಯ ಅವರ ಕಾಮನ್ ಮ್ಯಾನ್ ‘ಕೋಟಿ’ ಪಾತ್ರದ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಥಿಯೇಟರಿನ ಹೊರಗೂ ಸಿನಿಮಾ ಕ್ಲೈಮ್ಯಾಕ್ಸ್ ನೆರೆದಿದ್ದ ಜನರ ಮಾತಿನ ವಿಷಯವಾಗಿತ್ತು. ಈ ಸಿನಿಮಾದಲ್ಲಿ ವಿಶೇಷವಾಗಿ ಬರುವ ಒಂದು ಸ್ಟಾರ್ ಕ್ಯಾಮಿಯೋಗೆ ಭರ್ಜರಿ ಪ್ರತಿಕ್ರಿಯೆ ದೊರೆಯಿತು. ಇದೀಗ ರಾಜ್ಯಾದ್ಯಂತ ಬಿಡುಗಡೆಯಾಗಿರುವ `ಕೋಟಿ’ ಮುಂದಿನ ವಾರಗಳಲ್ಲಿ ಅಮೇರಿಕಾ, ಇಂಗ್ಲೆಂಡ್, ಯುರೋಪ್ ಮತ್ತು ಗಲ್ಫ್ ದೇಶಗಳಲ್ಲೂ ಬಿಡುಗಡೆಯಾಗಲಿದೆ.

ರಿಲೀಸ್‌ಗೂ ಮುನ್ನವೇ ಸಾಕಷ್ಟು ಸದ್ದು ಮಾಡಿರುವ ಅಪ್ಪಟ ಕನ್ನಡ ಮಣ್ಣಿನ ಕತೆಯಾದ ‘ಕೋಟಿ’ ವರ್ಷದ ಮೊದಲಾರ್ಧದಲ್ಲಿ ಯಾವುದೇ ದೊಡ್ಡ ಗೆಲುವು ಕಾಣದೆ ಕಂಗೆಟ್ಟಿರುವ ಕನ್ನಡ ಇಂಡಸ್ಟ್ರಿಗೆ ಗೆಲ್ಲುವ ಭರವಸೆಯಾಗಿ ಕಂಡಿದೆ. ಇದನ್ನೂ ಓದಿ:ಕಾನೂನಿಗಿಂತ ಯಾರೂ ದೊಡ್ಡವರಲ್ಲ – ದರ್ಶನ್‌, ಪವಿತ್ರಾಗೌಡಗೆ ನಟಿ ರಮ್ಯಾ ಕ್ಲಾಸ್‌!

‘ಕೋಟಿ’ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ (Daali Dhananjay) ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ (Moksha Kushal) ನಟಿಸಿದ್ದಾರೆ. ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ಜೊತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ಮ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ‘777 ಚಾರ್ಲಿ’ ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ. ಈ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್ ಅವರು ಬರೆದು ನಿರ್ದೇಶಿಸಿದ್ದಾರೆ. ‘ಕೋಟಿ’ ಇಂದಿನಿಂದ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ.

Share This Article