ಡಾಟರ್ ಆಫ್ ಪಾರ್ವತಮ್ಮನ ಟ್ರೈಲರ್ ಬಂತು!

Public TV
1 Min Read

ಬೆಂಗಳೂರು: ಹರಿಪ್ರಿಯಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಡಾಟರ್ ಆಫ್ ಪಾರ್ವತಮ್ಮ ಚಿತ್ರದ ಬಗ್ಗೆ ಎಲ್ಲ ವರ್ಗದ ಪ್ರೇಕ್ಷಕರೂ ಆಕರ್ಷಿತರಾಗಿದ್ದಾರೆ. ಹಂತ ಹಂತವಾಗಿ ಜನರ ಗಮನವನ್ನು ಸೆಳೆಯುತ್ತಾ ಬಂದಿರೋ ಡಾಟರ್ ಆಫ್ ಪಾರ್ವತಮ್ಮ ಚಿತ್ರದ ಅಸಲಿ ಮ್ಯಾಟರ್ ಏನೆಂಬುದರ ಝಲಕ್ ಈಗ ಟ್ರೈಲರ್ ಮೂಲಕ ಪ್ರೇಕ್ಷಕರ ಮುಂದೆ ಅನಾವರಣಗೊಂಡಿದೆ.

ಜೆ ಶಂಕರ್ ನಿರ್ದೇಶನ ಮಾಡಿರೋ ಡಾಟರ್ ಆಫ್ ಪಾರ್ವತಮ್ಮ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಕೆಲವೇ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣಗಳ ತುಂಬಾ ಅಬ್ಬರ ಶುರುವಿಟ್ಟಿದೆ. ಈವರೆಗೂ ಥರ ಥರದ ಪಾತ್ರಗಳಿಗೆ ಜೀವ ತುಂಬುತ್ತಲೇ ಪರಿಪೂರ್ಣ ನಟಿಯಾಗಿ ಗುರುತಿಸಿಕೊಂಡಿರುವವರು ಹರಿಪ್ರಿಯಾ. ನಾಯಕಿ ಪ್ರಧಾನವಾದ ಈ ಚಿತ್ರದಲ್ಲಿ ಹರಿಪ್ರಿಯಾ ಬೇರೆಯದ್ದೇ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆಂಬ ಮಾತುಗಳಿದ್ದವು. ಅದೀಗ ಟ್ರೈಲರ್ ಮೂಲಕ ನಿಜವಾಗಿದೆ.

ಒಂದು ಕ್ರೈಂ ಮತ್ತು ಅದರ ಸುತ್ತಾ ನಡೆಯೋ ಥ್ರಿಲ್ಲರ್ ಕಥಾನಕವನ್ನು ಡಾಟರ್ ಆಫ್ ಪಾರ್ವತಮ್ಮ ಚಿತ್ರ ಒಳಗೊಂಡಿದೆ. ಇಲ್ಲಿ ಹೆಣ್ಣು ಮಗಳೊಬ್ಬಳ ನಿಗೂಢ ಕೊಲೆಯ ಸಿಕ್ಕು ಬಿಡಿಸುವ, ದುಷ್ಟರನ್ನು ಎದುರು ಹಾಕಿಕೊಂಡು ಜಯಿಸಿಕೊಳ್ಳುವ ಇನ್ವೆಸ್ಟಿಗೇಟಿವ್ ಆಫಿಸರ್ ಆಗಿ ಹರಿಪ್ರಿಯಾ ನಟಿಸಿದ್ದಾರೆ. ಇದರೊಂದಿಗೆ ಅಮ್ಮ ಮಗಳ ಭಾವನಾತ್ಮಕ ಕಥೆಯನ್ನೂ ಕೂಡಾ ಈ ಚಿತ್ರ ಒಳಗೊಂಡಿದೆ. ಸುಮಲತಾ ಅಂಬರೀಶ್ ಹರಿಪ್ರಿಯಾರ ತಾಯಿಯಾಗಿ ನಟಿಸಿದ್ದಾರೆ. ಇದಿಷ್ಟು ಸುಳಿವನ್ನು ಈ ಪಾದರಸದಂಥಾ ಟ್ರೈಲರ್ ಜಾಹೀರು ಮಾಡಿದೆ.

ಈ ಚಿತ್ರವನ್ನು ದಿಶಾ ಎಂಟರ್ ಪ್ರೈಸಸ್ ಮೂಲಕ ಕೆಎಂ ಶಶಿಧರ್ ನಿರ್ಮಾಣ ಮಾಡಿದ್ದಾರೆ. ವಿಜಯಲಕ್ಷ್ಮಿ ಹಾಗೂ ಕೃಷ್ಣೇಗೌಡರೂ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಸುರೇಶ್ ಆರ್ಮುಗಂ ಸಂಕಲನ, ಅರುಳ್ ಕೆ ಸೋಮಸುಂದರನ್ ಛಾಯಾಗ್ರಹಣ, ಮಿಥುನ್ ಮುಕುಂದನ್ ಸಂಗೀತ, ಪ್ರಗತಿ ರಿಷಬ್ ಶೆಟ್ಟಿ ಮತ್ತು ಪುಟ್ಟರಾಜು ಅವರ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ.

Share This Article
Leave a Comment

Leave a Reply

Your email address will not be published. Required fields are marked *