ಕುಂಬಳಕಾಯಿ ಕಳ್ಳ ಅಂದ್ರೆ ಅಶ್ವಥ್ ನಾರಾಯಣ ಹೆಗಲು ಮುಟ್ಟಿಕೊಂಡು ನೋಡಿಕೊಂಡಿದ್ದೇಕೆ: ಡಿಕೆಶಿ ಪ್ರಶ್ನೆ

By
2 Min Read

ಬೆಂಗಳೂರು: ಕುಂಬಳಕಾಯಿ ಕಳ್ಳ ಅಂದರೆ ಅಶ್ವಥ್‌ ನಾರಾಯಣ ಹೆಗಲು ಮುಟ್ಟಿಕೊಂಡು ನೋಡಿಕೊಂಡಿದ್ದೇಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದ್ದಾರೆ.

ಅಶ್ವಥ್ ನಾರಾಯಣ ಹೇಳಿಕೆಗೆ ತಿರುಗೇಟು ನೀಡಿದ ಡಿಕೆಶಿ, ಮಾಧ್ಯಮಗಳು ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಪ್ರಭಾವಿ ಸಚಿವರ ಪಾತ್ರ ಇದೆ ಎಂದು ಬಿಚ್ಚಿಟ್ಟಿದ್ದಾರೆ. ನಾನು ಅದರ ಬಗ್ಗೆ ಮಾತನಾಡಿದ್ದು. ಕುಂಬಳಕಾಯಿ ಕಳ್ಳ ಅಂದ್ರೆ ಅಶ್ವಥ್ ನಾರಾಯಣ ಹೆಗಲು ಮುಟ್ಟಿ ನೋಡಿಕೊಂಡಿದ್ದೇಕೆ? ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಡಿಕೆಶಿ ಬಂಡವಾಳ ಬಿಚ್ಚಿಡ್ತೀನಿ, ಕೊಳಕಿನ ಜಾಲ ಬಿಡಿಸ್ತೀನಿ: ಅಶ್ವಥ್ ನಾರಾಯಣ ಕಿಡಿ

ಈ ಪ್ರಕರಣದ ವಿಚಾರವಾಗಿ ನನ್ನ ವಿರುದ್ಧ ದಾಖಲೆ ಇದ್ದರೆ ಶಿವಕುಮಾರ್ ಅವರು ಪ್ರಕಟಿಸಲಿ ಎಂದು ಸಚಿವ ಅಶ್ವಥ್ ನಾರಾಯಣ ಅವರು ನೀಡಿರುವ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಅವರು ದೊಡ್ಡವರು, ದೊಡ್ಡವರಾಗಬೇಕು ಎಂದುಕೊಂಡಿರುವವರು. ಅವರ ವಿಚಾರವನ್ನು ನಾನು ಬಿಚ್ಚಿಡಲಿಲ್ಲ. ಮಾಧ್ಯಮಗಳು, ಮಾಗಡಿಯ ಮೂವರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಹೇಳಿದಾಗ ಸಂತೋಷವಾಗಿತ್ತು. ಆನಂತರ ನಮ್ಮ ಪಕ್ಷದಲ್ಲಿದ್ದ ಕಾರ್ಯಕರ್ತರ ಕುಟುಂಬದವರು ಆಗಿದ್ದಾರೆ ಎಂದು ಹೇಳಿದ್ದು ಕೇಳಿ ಖುಷಿ ಆಯ್ತು. ಪರಿಸ್ಥಿತಿ ಹೀಗಿರುವಾಗ ಅನುಮಾನಗಳೆಲ್ಲವೂ ತಮ್ಮ ವಿರುದ್ಧವೇ ತಿರುಗುತ್ತಿದೆ ಎಂದು ಸಚಿವರು ಯಾಕೆ ಭಾವಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಅಧಿಕಾರದ ದರ್ಪ ಹಾಗೂ ಭ್ರಷ್ಟಾಚಾರ ಡಿ.ಕೆ.ಶಿವಕುಮಾರ್ ಅವರ ಕುಟುಂಬದಲ್ಲಿದೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಹೆಣದಲ್ಲಿ ಹಣ, ಸಹಾಯಕ ಪ್ರಾಧ್ಯಾಪಕ ಹುದ್ದೆ ಅಕ್ರಮ ಇವುಗಳನ್ನೆಲ್ಲಾ ನಾನು ಮಾಡಿದ್ದೀನಾ? ಈಗ ಸಾಲು ಸಾಲು ಹಗರಣಗಳು ಬೆಳಕಿಗೆ ಬಂದವಲ್ಲಾ ಅದನ್ನು ನಾವು ಮಾಡಿದ್ದೇವಾ? ನಮ್ಮ ಸರ್ಕಾರದಲ್ಲಿ ಈ ರೀತಿ ಆಗಿದೆಯಾ? ನಾವು ಕೇಳುತ್ತಿರುವುದು ಪಿಎಸ್ಐ ಅಕ್ರಮದ ಬಗ್ಗೆ ತನಿಖೆ ಮಾಡಿ, ನಂತರ ತೀರ್ಮಾನಿಸಿ ಎಂದು. ದರ್ಶನ್ ಗೌಡಗೆ ನೋಟಿಸ್ ಜಾರಿ ಮಾಡಿದ್ದೀರಿ. ಅವನ ವಿಚಾರಣೆ ಮಾಡಿದ ವರದಿ ಬಂದಿಲ್ಲ. ಆತ ಏಕಾಏಕಿ ಬಿಡುಗಡೆಯಾದ ಎಂದರೆ ಆತ ನಿರ್ದೋಷಿ ಎಂದು ಸಾಬೀತಾಯ್ತಾ? ಅವನ ವಿರುದ್ಧ ಯಾವ ರೀತಿ ತನಿಖೆ ನಡೆದಿದೆ? ಆತ ವಿಚಾರಣೆ ಮುಕ್ತನಾಗಲು ಯಾರು ಕಾರಣ? ಇದರ ಹಿನ್ನೆಲೆ ಏನು‌, ಯಾರು? ಮಾಧ್ಯಮಗಳಿಗೆ ಮಾಹಿತಿ ಎಲ್ಲಿಂದ ಬಂದಿದೆ ಎಂದು ಮೂಲದ ಬಗ್ಗೆ ಹೇಳುತ್ತೀರಾ? ನಾವು ನಮಗೆ ಯಾರು ಕರೆ ಮಾಡಿ ಹೇಳಿದ್ದಾರೆ ಎಂದು ಹೇಳಲು ಸಾಧ್ಯವೇ? ಸಮಯ ಬಂದಾಗ ಅದನ್ನೂ ಮಾಡುತ್ತೇವೆ ಎಂದು ಟಾಂಗ್‌ ನೀಡಿದ್ದಾರೆ. ಇದನ್ನೂ ಓದಿ: ಬದಲಾವಣೆ ಕಾಲ ಪ್ರಾರಂಭವಾಗಿದೆ, ಸಬೂಬುಗಳ ಕಾಲ ಮುಗಿದಿದೆ: ಬೊಮ್ಮಾಯಿ

ರಾಮನಗರಕ್ಕೂ ಶಿವಕುಮಾರ್ ಅವರಿಗೂ ಸಂಬಂಧವಿಲ್ಲ. ಅಮಿತ್ ಶಾ ಬರುತ್ತಾರೆ ಎಂಬ ಕಾರಣಕ್ಕೆ ಈ ರೀತಿ ಪೂರ್ವನಿಯೋಜಿತ ಷಡ್ಯಂತ್ರ ಮಾಡಲಾಗಿದೆ ಎಂಬ ಸುಧಾಕರ್ ಅವರ ಆರೋಪ ಕುರಿತು ಮಾತನಾಡಿ, ನಾನು ಹಳ್ಳಿಯವನು. ದೊಡ್ಡಾಲಹಳ್ಳಿ ಕೆಂಪೇಗೌಡನ ಮಗ ಶಿವಕುಮಾರ್. ಹಳ್ಳಿಯಿಂದ ಇಲ್ಲಿಗೆ ಬಂದು ರಾಜಕಾರಣ ಮಾಡುತ್ತಿದ್ದೇನೆ. ಅವರು ರಾಮನಗರ ಸ್ವಚ್ಛ ಮಾಡಲು ಬಂದಿದ್ದಾರೆ, ಮಾಡಲಿ ಸಂತೋಷ ಎಂದು ಕುಟುಕಿದ್ದಾರೆ.

ಡಿಕೆಶಿ ಬಂಡವಾಳ ಬಿಚ್ಚಿಡುತ್ತೇನೆ ಎಂಬ ಸವಾಲಿಗೆ ಪ್ರತಿಕ್ರಿಯಿಸಿ, ಮೊದಲು ಅವರು ವಿವಿಧ ನೇಮಕಾತಿ ಅಕ್ರಮದಲ್ಲಿ ಯುವಕರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಲಿ. ನಂತರ ಉಳಿದ ವಿಚಾರ ಮಾತನಾಡೋಣ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಆಸ್ತಿ, ಅಶ್ವಥ್ ನಾರಾಯಣ ಆಸ್ತಿಯನ್ನು ತನಿಖೆಗೆ ಒಳಪಡಿಸಲಿ: ಉಗ್ರಪ್ಪ

Share This Article
Leave a Comment

Leave a Reply

Your email address will not be published. Required fields are marked *