ಸಿದ್ದರಾಮಯ್ಯರ ಮೇಲೆ ನಂಬಿಕೆ ಇದೆ, ಅವ್ರು ಆ ರೀತಿ ಹೇಳಿರಲ್ಲ: ಡಿಕೆಶಿ ತಿರುಗೇಟು

Public TV
3 Min Read

ಬೆಂಗಳೂರು: ಡಿಕೆಶಿ ಜೆಡಿಎಸ್ ಬಾವುಟ ಹಿಡಿದುಕೊಳ್ಳಬಾರದಿತ್ತು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ತುಮಕೂರು ಜಿಲ್ಲೆಯ ಶಿರಾದ ಪಟ್ಟನಾಯಕನಹಳ್ಳಿಯ ಸ್ಪಟಿಕಪುರಿ ಮಠದಲ್ಲಿ ಮಾತನಾಡಿದ ಮಾಜಿ ಸಚಿವರು, ನಾನು ಜೈಲಿನಿಂದ ಹೊರ ಬರಲು ಎಲ್ಲ ಸಮಾಜ, ಪಕ್ಷ, ಸಂಘಗಳು ಪಕ್ಷಾತೀತವಾಗಿ ಹೋರಾಟ ನಡೆಸಿವೆ. ಬೆಂಗಳೂರು ವಿಮಾನ ನಿಲ್ದಾಣದಿಂದ ನಾನು ಬರುವಾಗ ಜೆಡಿಎಸ್ ಕಾರ್ಯಕರ್ತರು ದಾರಿಯಲ್ಲಿ ನಿಂತು ಹಾರೈಸಿದರು. ನನ್ನನ್ನು ನೋಡಲು ಮಾಜಿ ಸಿಎಂ ಕುಮಾರಸ್ವಾಮಿ ಜೈಲಿಗೆ ಬಂದಿದ್ದರು. ಅವರನ್ನು ಬರಬೇಡಿ ಎನ್ನುವುದಕ್ಕೆ ಆಗುತ್ತಾ? ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅವರು ಕೂಡ ಬಂದಿದ್ದರು. ಆದರೆ ಅವರಿಗೆ ನನ್ನನ್ನು ಭೇಟಿಯಾಗಲು ಅವಕಾಶ ಸಿಗಲಿಲ್ಲ ಎಂದರು.

ಸಿದ್ದರಾಮಯ್ಯ ಅವರ ಮೇಲೆ ನಂಬಿಕೆ, ಗೌರವ ಇದೆ. ಅವರು ಆ ರೀತಿ ಮಾತನಾಡಿರುವುಕ್ಕೆ ಸಾಧ್ಯವಿಲ್ಲ. ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಪಿಎ ರಮೇಶ್ ನನ್ನ ಹುಡುಗ. ಸೋಮವಾರ ರಮೇಶ್ ಮನೆಗೂ ಹೋಗಿ ಕುಟುಂಬಕ್ಕೆ ಧೈರ್ಯ ತುಂಬುತ್ತೇನೆ ಎಂದರು. ಆದರೆ ಕೇಂದ್ರ ಸರ್ಕಾರ ಐಟಿ, ಇಡಿ ದುರ್ಬಳಕೆ ಬಗ್ಗೆ ಹೇಳಿಕೆ ನೀಡಲು ಡಿ.ಕೆ.ಶಿವಕುಮಾರ್ ನಿರಾಕರಿಸಿದರು.

ನಾನು ಪಕ್ಷಾತೀತ ನಾಯಕ, ನನಗೆ ಎಲ್ಲ ವರ್ಗದವರ ಆಶೀರ್ವಾದ ಇದೆ. ನಾನು ಅರೆಸ್ಟ್ ಆದಾಗ ನಂಜಾವಧೂತ ಶ್ರೀಗಳು ನನ್ನ ಪರವಾಗಿ ಹೋರಾಟ ಮಾಡಿದ್ರು. ಪಾದಯಾತ್ರೆ ನಡೆಸಿ ರಾಜ್ಯಕ್ಕೆ ಸಂದೇಶ ಕೊಟ್ಟರು. ನಾನು ಎಲ್ಲರ ಮನೆಗೆ ಹೋಗಿ ವೈಯಕ್ತಿಕವಾಗಿ ಭೇಟಿ ಆಗುವುದಕ್ಕೆ ಆಗುವುದಿಲ್ಲ. ಹಾಗಾಗಿ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದು, ರಾಜ್ಯದ ಜನಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದರು.

ನಾನೇನು ತಪ್ಪು ಮಾಡಿಲ್ಲ, ನನಗೆ ಅನ್ಯಾಯವಾಗಿದೆ ಅಂತ ಜನ ಬೀದಿಗಿಳಿದರು. ಕೃತಜ್ಞತೆ ಸಲ್ಲಿಸುವುದು ನನ್ನ ಕರ್ತವ್ಯ, ಹಾಗಾಗಿ ಭೇಟಿ ನೀಡಿದ್ದೇನೆ. ದಸರಾ ಹಬ್ಬದ ವೇಳೆ ತಂದೆ ಸಮಾಧಿಗೆ ಪೂಜೆ ಸಲ್ಲಿಸಲು ಆಗಿರಲಿಲ್ಲ. ಸೋಮವಾರ ತಂದೆ ಸಮಾಧಿಗೆ, ಕುಟುಂಬದ ಹಿರಿಯರಿಗೆ ಪೂಜೆ ಸಲ್ಲಿಸುತ್ತೇನೆ. ಮೈಸೂರಿಗೆ ಹೋಗಿ ಅಲ್ಲಿಯೂ ದೇವಸ್ಥಾನ, ಹಿರಿಯರ ಭೇಟಿ ಮಾಡಲಿದ್ದೇನೆ. ನನ್ನಿಂದ ನನ್ನ ಸ್ನೇಹಿತರ, ಸಂಬಂಧಿಕರ ಮನೆ ಮೇಲೂ ಐಟಿ ರೇಡ್ ಆಗಿತ್ತು. ಅವರ ಮನೆಗಳಿಗೆ ಹೋಗಿ ಮಾತನಾಡುತ್ತೇನೆ, ಧೈರ್ಯ ತುಂಬುತ್ತೇನೆ ಎಂದು ಹೇಳಿದರು.

ಸಿದ್ದರಾಮಯ್ಯ ಹೇಳಿದ್ದೇನು?:
ಕಾವೇರಿ ನಿವಾಸದಲ್ಲಿ ಕುಳಿತು ಸಿದ್ದರಾಮಯ್ಯ ತಮ್ಮ ಆಪ್ತರ ಜೊತೆಗೆ ಮಾತನಾಡುತ್ತಿದ್ದರು. ಈ ವೇಳೆ ಹುಣಸೂರು ಮಂಜುನಾಥ್ ಅವರು ಮಾತು ಆರಂಭಿಸಿ, ಲಿಂಗಾಯತ ಕಮ್ಯೂನಿಟಿ ಬಿಜೆಪಿ ಮೇಲೆ ಸ್ವಲ್ಪ ಡಿಸ್ಟರ್ಬ್ ಆಗಿದ್ದಾರೆ ಸರ್ ಎಂದರು. ಆಗ ಸಿದ್ದರಾಮಯ್ಯ, ಲಿಂಗಾಯತರು ಯಡಿಯೂರಪ್ಪಗೆ ಮೊದಲಿನ ತರ ಇರಲ್ಲಾ. ಒಕ್ಕಲಿಗರು ಕುಮಾರಸ್ವಾಮಿಗೆ ಮೊದಲಿನ ತರ ಇರಲ್ಲಾ ಎಂದಿದ್ದರು.

ಈ ಮಧ್ಯೆ ಧ್ವನಿಗೂಡಿಸಿದ ಪಿರಿಯಾಪಟ್ಟಣ ವೆಂಕಟೇಶ್, ಅದು ಸರಿ. ಆದರೆ ಎನ್ ಕ್ಯಾಶ್ ಮಾಡಿಕೊಳ್ಳೋಕೆ ನಮ್ಮವರೆ ತಯಾರಿಲ್ವಲ್ಲ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಕರೆಕ್ಟ್ ಎಂದು ಹೇಳಿದ್ದರು.

ಮಾತು ಮುಂದುರಿಸಿದ ವೆಂಕಟೇಶ್ ಅವರು, ಡಿ.ಕೆ.ಶಿವಕುಮಾರ್ ಜೆಡಿಎಸ್ ಬಾವುಟ ಹಿಡಿಯುತ್ತಾರೆ ಅಂದ್ರೆ ಏನರ್ಥ ಎಂದು ಪ್ರಶ್ನಿಸಿದರು. ಆಗ ಸಿದ್ದರಾಮಯ್ಯನವರು, ಅದು ಹೌದು, ಏನು ಅರ್ಥ? ಬರುವಾಗ ಜೆಡಿಎಸ್ ಕಾಂಗ್ರೆಸ್ ಬಾವುಟ ಹಿಡಿದುಕೊಂಡು ಬಂದ್ರು ಏನ್ ಹೇಳೋದು. ಏನು ಅರ್ಥ ಎಂದು ಅಸಮಾಧಾನ ಹೊರ ಹಾಕಿದರು. ಇದಕ್ಕೆ ಪಿರಿಯಾಪಟ್ಟಣ ವೆಂಕಟೇಶ್, ಏನ್ ಹೇಳೋದು ಎಂದು ಕುಟುಕಿದ್ದರು.

ನಾನು ನಿನ್ನೆ ಗದಗ್‍ನಲ್ಲಿ ಹೇಳಿ ಬಂದಿದ್ದೇನೆ. ಜೆಡಿಎಸ್‍ನವರ ಸಹವಾಸ ಇನ್ನು ಇಲ್ಲಾ ಅಂದಿದ್ದೀನೆ ಎಂದು ಸಿದ್ದರಾಮಯ್ಯ ಧ್ವನಿಗೂಡಿಸಿದರು. ಈ ವೇಳೆ ವೆಂಕಟೇಶ್ ಅವರು, ನೀವೆಲ್ಲಾ ಸ್ಟಿಕ್ಕಾನ್ ಆಗಬೇಕು. ಏನು ಆಗುತ್ತೋ ಆಗ್ಲಿ ಎಂದರು. ಆಗ ಸಿದ್ದರಾಮಯ್ಯನವರು ಕೂಡ, ಏನು ಆಗುತ್ತೋ ಆಗ್ಲಿ ಎಂದು ಗುಡುಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *