ಸಂಕಷ್ಟದಲ್ಲಿ ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆ ಬ್ರದರ್ಸ್

Public TV
1 Min Read

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಸಹೋದರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಮನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಯಾವುದೇ ಅಭ್ಯರ್ಥಿಯನ್ನು ಹಾಕಲಿಲ್ಲ. ಇದರಿಂದಾಗಿ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಗರಂ ಆಗಿದ್ದಾರಂತೆ.

ಮೈತ್ರಿ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಅಖಾಡಕ್ಕೆ ಇಳಿದಿದ್ದು, ಜೆಡಿಎಸ್‍ಗೆ ಬೆಂಬಲ ನೀಡಿದ್ದಕ್ಕೆ ರಾಮನಗರ ಕ್ಷೇತ್ರದ ಕೈ ಪಾಳಯದ ಮುಖಂಡರು ಹಾಗೂ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಅತ್ತ ಧರಿ ಇತ್ತ ಪುಲಿ ಎಂಬಂತಾದ ಟ್ರಬಲ್ ಶೂಟರ್ ಗಳು ರಾಮನಗರದಲ್ಲಿ ಈ ಬಾರಿ ತೆರೆ ಮರೆಯ ಆಟ ಆಡಬೇಕಾದ ಅನಿವಾರ್ಯ ಎದುರಾಗಿದೆ ಎಂದು ಹೇಳಲಾಗುತ್ತಿದೆ.

ರಾಜ್ಯ ಮಟ್ಟದ ಹೊಂದಾಣಿಕೆ ಏನೇ ಇರಲಿ, ಜಿಲ್ಲೆಯಲ್ಲಿ ಅದನ್ನೇ ಮುಂದವರಿಸಲು ನಾವು ಸಿದ್ಧರಿಲ್ಲ. ನೀವು ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಂಡರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಕೆಲಸ ಮಾಡಲ್ಲ ಅಂತಾ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಅವರಿಗೆ ಎಚ್ಚರಿಕೆ ನೀಡಿದ್ದಾರಂತೆ. ಕಾರ್ಯಕರ್ತರ ಅಸಮಾಧಾನ ಕಂಡು ಕಂಗಾಲಾದ ಸಂಸದ ಡಿ.ಕೆ.ಸುರೇಶ್ ಅವರು ಸೋಮವಾರ ಅನಿತಾ ಕುಮಾರಸ್ವಾಮಿ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲವಂತೆ.

ಇತ್ತ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರನ್ನೇ ಚುನಾವಣೆ ಉಸ್ತುವಾರಿಯಾಗಿ ನೇಮಿಸಿದೆ. ಪಕ್ಷದ ಮಾತಿನಂತೆ ಕ್ಷೇತ್ರದ ಪ್ರಚಾರದಲ್ಲಿ ತೊಡಗುವಂತಿಲ್ಲ. ಕಾರ್ಯಕರ್ತರ ಮಾತಿನಂತೆ ಪ್ರಚಾರದಿಂದ ದೂರ ಉಳಿಯುವಂತಿಲ್ಲ. ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಡಿ.ಕೆ.ಸುರೇಶ್ ಸಿಲುಕಿಕೊಂಡಿದ್ದಾರೆ.

ಸಚಿವ ಡಿ.ಕೆ.ಶಿವಕುಮಾರ್ ಅವರು ಬಳ್ಳಾರಿ ಉಸ್ತುವಾರಿ ಜವಾಬ್ದಾರಿ ಹೊತ್ತು, ರಾಮನಗರದ ಸಹವಾಸವೇ ಬೇಡ ಅಂತಾ ಕಾಲ್ಕಿತ್ತಿದ್ದಾರಂತೆ. ಸಂಸದ ಡಿ.ಕೆ.ಸುರೇಶ್ ಇದ್ದು ಇಲ್ಲದಂತೆ ದೋಸ್ತಿಗಳ ಜೊತೆಗೆ ಬಂದರೂ, ಬರದಂತಹ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದ್ದಾರೆ. ಸುಮ್ಮನಿದ್ದು ಬಿಡೋಣ ಅಂತಾ ಡಿ.ಕೆ ಸಹೋದರರು ನಿರ್ಧಾರಕ್ಕೆ ಮುಂದಾದರೆ, ಅವರನ್ನು ಆಯ್ಕೆಗೆ ಶ್ರಮಿಸಿದ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿವ ಆತಂಕ ಉಂಟಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *