ಅಡುಗೆ ಮಾಡುವಾಗ ಸಿಲಿಂಡರ್ ಸ್ಫೋಟ – ಮನೆಯಲ್ಲಿದ್ದ ನಾಲ್ವರಿಗೆ ಗಂಭೀರ ಗಾಯ

Public TV
1 Min Read

ಹಾಸನ: ಅಡುಗೆ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ (Cylinder Explosion) ಪರಿಣಾಮ ಮನೆಯಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅರಕಲಗೂಡು (Arakalgud) ಪಟ್ಟಣದ, ಹೆಂಟಗೆರೆ ವಾರ್ಡ್. ನಂ.17 ರಲ್ಲಿ ನಡೆದಿದೆ.‌

ಹೆಂಟಿಗೆರೆ ಗ್ರಾಮದ ದೊಡ್ಡೇಗೌಡ ಎಂಬವರ ಮನೆಯಲ್ಲಿ ಅಸ್ಸಾಂ ಮೂಲದ ಕಾರ್ಮಿಕರು ವಾಸವಿದ್ದು ಬೆಳಿಗ್ಗೆ ಅಡುಗೆ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಗ್ಯಾಸ್ ಸಿಲಿಂಡ‌ರ್ ಸ್ಫೋಟಗೊಂಡಿದೆ. ಅಲೀಂ ಬೇಗಂ (23), ರೋಹಿತ್ ಖಾತನ್ (19), ಇಸ್ತಾರ್ ಉಲ್ಲಾ (23), ಅಹಿಸ್ಲಮ್ (25) ಸೇರಿ ನಾಲ್ವರಿಗೆ ಸುಟ್ಟಗಾಯಗಳಾಗಿವೆ. ಇಬ್ಬರು ಕಾರ್ಮಿಕರ ಕೈ ಕಾಲುಗಳು ಸಂಪೂರ್ಣ ಸುಟ್ಟು ಹೋಗಿವೆ. ಅಲ್ಲದೇ ಮನೆಯಲ್ಲಿದ್ದ ವಸ್ತುಗಳೆಲ್ಲಾ ಬೆಂಕಿಗಾಹುತಿಯಾಗಿವೆ.

ಗಾಯಾಳುಗಳಿಗೆ ಅರಕಲಗೂಡು ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article