ಗುರುವಾರ ಗುಜರಾತ್ ತೀರಕ್ಕೆ ಅಪ್ಪಳಿಸಲಿದೆ ‘ವಾಯು’ – 3 ಲಕ್ಷ ಮಂದಿ ಸ್ಥಳಾಂತರ

Public TV
1 Min Read

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಎದ್ದಿರುವ `ವಾಯು’ ಚಂಡಮಾರುತ ವಾಯು ವೇಗದಲ್ಲಿ ಗುಜರಾತ್‍ನತ್ತ ಮುನ್ನುಗ್ಗುತ್ತಿದ್ದು ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಲಕ್ಷದ್ವೀಪ ಸಮೀಪ ವಾಯುಭಾರ ಕುಸಿತದಿಂದ ಚಂಡಮಾರುತ ಸೃಷ್ಟಿಯಾಗಿದ್ದು ಗುರುವಾರ ಮಧ್ಯಾಹ್ನದ ವೇಳೆ ಗುಜರಾತ್ ಕರಾವಳಿ ತೀರಕ್ಕೆ ಅಪ್ಪಳಿಸಲಿದೆ. ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಸದ್ಯ ವಾಯು ಚಂಡಮಾರುತ ಗುಜರಾತ್‍ನ ವಾರ್‍ವೇಲ್‍ನಿಂದ ದಕ್ಷಿಣಕ್ಕೆ 290 ಕಿಲೋಮೀಟರ್ ದೂರದಲ್ಲಿದೆ. ಗಂಟೆಗೆ 145ರಿಂದ 155 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿರುವ ಗಾಳಿ ಮತ್ತು ಮಳೆ ಭೀತಿ ಸೃಷ್ಟಿಸಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಗುಜರಾತ್‍ನಲ್ಲಿ ಸುಮಾರು 3 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದ್ದು, 3 ದಿನಗಳ ಕಾಲ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. 39 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್‌)ಟೀಂ ಹಾಗೂ ಸೇನೆಯ 34 ತುಕಡಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಕೇರಳದಲ್ಲಿ ಭಾರೀ ಮಳೆಯಿಂದ ಭೂಕುಸಿತವಾಗುವ ಸಂಭವವಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ರಾಜ್ಯದಲ್ಲೂ ಮಳೆ: ಚಂಡಮಾರುತದ  ಪರಿಣಾಮದಿಂದ ರಾಜ್ಯದ ಕರಾವಳಿ ಭಾಗದಲ್ಲೂ ಭಾರೀ ಮಳೆ ಆಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿದಿವೆ. ಚಾರ್ಮಾಡಿ ಘಾಟ್‍ನಲ್ಲಿ ಬೃಹತ್ ಮರಗಳು ಉರುಳಿಬಿದ್ದಿವೆ. ಬೆಂಗಳೂರು, ಮೈಸೂರು ಭಾಗದಲ್ಲಿ ದಿನವಿಡೀ ಮೋಡಕವಿದ ವಾತಾವರಣ ಇತ್ತು. ಆದರೆ ವಾಯು ಚಂಡಮಾರುತ ಪರಿಣಾಮ ಮುಂಗಾರು ಮಾರುತಗಳು ದುರ್ಬಲಗೊಂಡಿದ್ದು, ರಾಜ್ಯಕ್ಕೆ ಮುಂಗಾರು ಆಗಮನ ವಿಳಂಬವಾಗಲಿದೆ.

ಮುಂದಿನ ಮೂರು ದಿನಗಳಲ್ಲಿ ಯಾವ ದಿನ ಬೇಕಾದ್ರೂ ರಾಜ್ಯಕ್ಕೆ ಮುಂಗಾರು ಎಂಟ್ರಿ ಕೊಡಬಹುದು ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ಮಾಹಿತಿ ನೀಡಿದ್ದಾರೆ. 8 ವರ್ಷದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಮುಂಗಾರು ಆಗಮನ ತಡವಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *