ಮುಂಬೈಗೆ ಸೈಕ್ಲೋನ್ `ಶಕ್ತಿʼಯ ಭೀತಿ – ಸೋಮವಾರ ಗುಜರಾತ್‌ಗೂ ಅಪ್ಪಳಿಸಲಿದೆ ಚಂಡಮಾರುತ

Public TV
3 Min Read

– `ಶಕ್ತಿ’ ಹೆಸರು ಕೊಟ್ಟಿದ್ದೇ ಲಂಕಾ; ಅ.7ರ ವರೆಗೆ ಮಹಾರಾಷ್ಟ್ರದಲ್ಲಿ ಭಾರೀ ಮಳೆ ಎಚ್ಚರಿಕೆ

ಮುಂಬೈ: ಅರಬ್ಬಿ ಸಮುದ್ರದಲ್ಲಿ ಶಕ್ತಿ ಚಂಡಮಾರುತ (Shakti Cyclone) ಅಬ್ಬರ ಹಿನ್ನೆಲೆ ಭಾರತೀಯ ಹವಾಮಾನ ಇಲಾಖೆ ಅ.7ರ ವರೆಗೆ ಮಹಾರಾಷ್ಟ್ರದಲ್ಲಿ (Maharashtra) ಭಾರೀ ಮಳೆಯ ಎಚ್ಚರಿಕೆ ನೀಡಿದೆ. ಇದು ಮುಂಗಾರು ಬಳಿಕ ಅರಬ್ಬಿ ಸಮುದ್ರದಲ್ಲಿ ಅಪ್ಪಳಿಸುವ ಮೊದಲ ಚಂಡಮಾರುತವಾಗಿದೆ.

ಚಂಡಮಾರುತ ಬೀಸುವ ಹಿನ್ನೆಲೆ ಮುಂಬೈ (Mumbai), ಥಾಣೆ, ಪಾಲ್ಘರ್, ರಾಯಗಡ್, ರತ್ನಗಿರಿ ಮತ್ತು ಸಿಂಧುದುರ್ಗ ಸೇರಿದಂತೆ ಮಹಾರಾಷ್ಟ್ರದ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನ ಇಲಾಖೆಯು ಮಹಾರಾಷ್ಟ್ರದ ಒಳಭಾಗಗಳಲ್ಲಿ, ಅದ್ರಲ್ಲೂ ಮುಖ್ಯವಾಗಿ ಪೂರ್ವ ವಿದರ್ಭ ಮತ್ತು ಮರಾಠವಾಡದ ಕೆಲ ಭಾಗಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ.

ಉತ್ತರ ಕೊಂಕಣದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ. ಈ ಬೆನ್ನಲ್ಲೇ ಸ್ಥಳೀಯ ಆಡಳಿತ ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚನೆ ನೀಡಿದೆ. ಇದನ್ನೂ ಓದಿ: ಕಂದಮ್ಮಗಳ ಜೀವ ತೆಗೆದ ಕೆಮ್ಮಿನ ಸಿರಪ್ – ಕೇಂದ್ರ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ

ಗುಜರಾತ್‌ಗೆ ಅಪ್ಪಳಿಸಲಿದೆ ಚಂಡಮಾರುತ
ಹವಾಮಾನ ಇಲಾಖೆ (IMD) ವಿಜ್ಞಾನಿ ಅಭಿಮನ್ಯು ಚೌಹಾಣ್ ಪ್ರಕಾರ, ಈಶಾನ್ಯ ಅರೇಬಿಯನ್‌ ಸಮುದ್ರದಲ್ಲಿ (Arabian Sea) ಚಂಮಾರುತ ತೀವ್ರಗೊಂಡಿದೆ. ಗಂಟೆಗೆ 18 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಹೀಗಾಗಿ ಅಕ್ಟೋಬರ್‌ 6ರಂದು ಬೆಳಗ್ಗಿನ ವೇಳೆಗೆ ಚಂಡಮಾರುತವು ಗುಜರಾತ್‌ ಕಡೆಗೆ ಬೀಸುವ ನಿರೀಕ್ಷೆಯಿದೆ. ಆದಾಗ್ಯೂ ರಾಜ್ಯದಲ್ಲಿ ಮಳೆಯ ಪರಿಣಾಮ ಕಡಿಮೆ ಇರಲಿದ್ದು, ಗಾಳಿಯು ಗಂಟೆಗೆ 40-55 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ವಿಧಾನಸಭೆ ಚುನಾವಣೆ; ತಯಾರಿ ಪರಿಶೀಲಿಸಿದ ಕೇಂದ್ರ ಚುನಾವಣಾ ಆಯೋಗ

ಶಕ್ತಿ ಚಂಡಮಾರುತ ಎದುರಿಸಲು ಸಕಲ ತಯಾರಿ
ಇನ್ನೂ ಶಕ್ತಿ ಚಂಡ ಮಾರುತ ಎದುರಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ಮಹಾರಾಷ್ಟ್ರ ಸರ್ಕಾರ (Maharashtra Government) ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ. ವಿಪತ್ತು ನಿರ್ವಹಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಬೇಕು, ಕರಾವಳಿ ಮತ್ತು ತಗ್ಗು ಪ್ರದೇಶಗಳಲ್ಲಿ ನೆಲೆಸಿರುವ ಜನರನ್ನ ಸ್ಥಳಾಂತರಿಸಲು ಕ್ರಮ ವಹಿಸಬೇಕು, ಮೀನುಗಾರರು ಸಮುದ್ರಕ್ಕಿಳಿದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದೆ. ‌

ಸೈಕ್ಲೋನ್‌ ಶಕ್ತಿ ಈಗ ಎಲ್ಲಿದೆ?
ಹವಾಮಾನ ಇಲಾಖೆ ಪ್ರಕಾರ, ಶಕ್ತಿ ಚಂಡಮಾರುತವು ಪ್ರಸ್ತುತ ಗುಜರಾತ್‌ನ ನಲಿಯಾದಿಂದ ನೃಋತ್ಯಕ್ಕೆ ಸುಮಾರು 270 ಕಿಮೀ ದೂರದಲ್ಲಿ, ಪೋರ್‌ಬಂದರ್‌ನಿಂದ ಪಶ್ಚಿಮಕ್ಕೆ 300 ಕಿಮೀ ಮತ್ತು ದಕ್ಷಿಣಕ್ಕೆ 360 ಕಿಮೀ ದೂರದಲ್ಲಿದೆ. ಸುಮಾರು 8 ಕಿಮೀ ವೇಗದಲ್ಲಿ ವಾಯುವ್ಯ ದಿಕ್ಕಿಗೆ ಚಲಿಸುತ್ತಿದ್ದು, 100 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಇದನ್ನೂ ಓದಿ: ಪಾಕಿನ ಎಫ್‌-16 , ಜೆಎಫ್‌-17 ಯುದ್ಧ ವಿಮಾನಗಳನ್ನು ಹೊಡೆದಿದ್ದೇವೆ: ಏರ್ ಚೀಫ್ ಮಾರ್ಷಲ್

`ಶಕ್ತಿ’ ಹೆಸರು ಕೊಟ್ಟಿದ್ದೇ ಶ್ರೀಲಂಕಾ
ʻಶಕ್ತಿʼ ಚಂಡಮಾರುತದ ಹೆಸರು ಗಮನ ಸೆಳೆದಿದೆ. ಆದ್ರೆ ಚಂಡಮಾರುತಕ್ಕೆ ʻಶಕ್ತಿʼ ಎಂದು ಹೆಸರು ಕೊಟ್ಟಿದ್ದೇ ಶ್ರೀಲಂಕಾ. ವಿಶ್ವ ಹವಾಮಾನ ಸಂಸ್ಥೆ (WMO) ಹಾಗೂ ಏಷ್ಯಾ ಮತ್ತು ಪೆಸಿಫಿಕ್‌ನ ಆರ್ಥಿಕ ಮತ್ತು ಸಾಮಾಜಿಕ ಆಯೋಗ (ESCAP) ನಿರ್ವಹಿಸುವ ಸಂಘಟಿತ ವ್ಯವಸ್ಥೆಯ ಅಡಿಯಲ್ಲಿ ಶ್ರೀಲಂಕಾ ʻಶಕ್ತಿʼ ಎಂದು ಹೆಸರಿಸಿದೆ. 2020ರಲ್ಲಿ ಪರಿಚಯಿಸಲಾದ ಈ ಸಂಘಟಿತ ವ್ಯವಸ್ಥೆಯು ಬಾಂಗ್ಲಾದೇಶ, ಭಾರತ, ಮಾಲ್ಡೀವ್ಸ್, ಮ್ಯಾನ್ಮಾರ್, ಓಮನ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಥೈಲ್ಯಾಂಡ್ ಸದಸ್ಯರಾಷ್ಟ್ರಗಳನ್ನು ಒಳಗೊಂಡಿದೆ.

ಚಂಡಮಾರುತವನ್ನು ಸುಲಭವಾಗಿ ಗುರುತಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇದಕ್ಕೆ ಹೆಸರುಗಳನ್ನು ನೀಡಲಾಗುತ್ತದೆ. ಈ ಋತುವಿನ ಮೊದಲ ಚಂಡಮಾರುತ ಇದಾಗಿದೆ. ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ‘ಶಕ್ತಿ’ ಅಬ್ಬರ – ಮಹಾರಾಷ್ಟ್ರದಲ್ಲಿ ಅ.7ರವರೆಗೆ ಭಾರೀ ಮಳೆ ಸಾಧ್ಯತೆ

Share This Article