ಮೊಂಥಾ ಚಂಡಮಾರುತ ಎಫೆಕ್ಟ್: ಕರ್ನಾಟಕ, ಆಂಧ್ರ, ತೆಲಂಗಾಣದ ಗಡಿಜಿಲ್ಲೆಗಳಲ್ಲಿ ವರುರ್ಣಾಭಟ

Public TV
2 Min Read

– ದೇಶದ ವಿವಿಧೆಡೆ ಅ.28, 29ರಂದು ಭಾರೀ ಮಳೆ
– ಆಂಧ್ರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಮೊಂಥಾ ಚಂಡಮಾರುತದ (Montha Cyclone) ಪರಿಣಾಮ ಕರ್ನಾಟಕ, ಆಂಧ್ರ, ತೆಲಂಗಾಣದ ಗಡಿ ಜಿಲ್ಲೆಗಳಲ್ಲಿ ವರುಣ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ಆಂಧ್ರಪ್ರದೇಶ ಹಾಗೂ ಒಡಿಶಾದ ಕರಾವಳಿಯತ್ತ ಚಂಡಮಾರುತ ಮುನ್ನುಗ್ಗುತ್ತಿರುವ ಹಿನ್ನೆಲೆ ದೇಶದ ವಿವಿಧೆಡೆ ಅ.28 ಹಾಗೂ ಅ.29ರಂದು ವ್ಯಾಪಕ ಮಳೆಯಾಗಲಿದೆ. ಕರ್ನಾಟಕದ ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಇನ್ನೂ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಚಂಡಮಾರುತದಿಂದಾಗಿ ಈಗಾಗಲೇ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರ (ಅ.28) ಬೆಂಗಳೂರಿನಿಂದ ಹೊರಡಲಿರುವ ಕೆಲವು ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.ಇದನ್ನೂ ಓದಿ: ಆಂಧ್ರ, ಒಡಿಶಾಕ್ಕೆ ಅಪ್ಪಳಿಸಲಿದೆ `ಮೊಂಥಾ’ ಸೈಕ್ಲೋನ್ – ಕರ್ನಾಟಕ ಸೇರಿ ತಮಿಳುನಾಡಿಗೆ ಮಳೆಯಾರ್ಭಟ

ಚಂಡಮಾರುತದ ಪರಿಣಾಮ ಬೆಂಗಳೂರಿನಲ್ಲಿ (Bengaluru) ವಾತಾವರಣ ತಂಪಾಗಿದ್ದು, ಅಲ್ಲಲ್ಲಿ ಜಿಟಿಜಿಟಿ ಮಳೆಯಾಗುತ್ತಿದೆ. ನಗರದ SMVTಯಿಂದ ಹೊರಡುವ ಏಳು ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದ್ದು, ಹೊರಡುವ ಸಮಯಕ್ಕಿಂತ 12 ಗಂಟೆ ತಡವಾಗಿ ಹೊರಡಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಆಂಧ್ರ ಕರಾವಳಿ ತೀರ ಪ್ರದೇಶಕ್ಕೆ ಉತ್ತರ-ವಾಯುವ್ಯ ದಿಕ್ಕಿನಲ್ಲಿ ಚಲಿಸುತ್ತಾ ಇಂದು ಸಂಜೆ ಅಥವಾ ರಾತ್ರಿಯ ವೇಳೆಗೆ ಆಂಧ್ರಪ್ರದೇಶದ ಮಚಲಿಪಟ್ಟಣ ಮತ್ತು ಕಳಿಂಗಪಟ್ಟಣ ನಡುವೆ, ಕಾಕಿನಾಡದ ಸುತ್ತಮುತ್ತಲಿನ ಕರಾವಳಿಯನ್ನು ದಾಟಲಿದೆ. ಈ ಚಂಡಮಾರುತವು ಗಂಟೆಗೆ 90 ರಿಂದ 100 ಕಿ.ಮೀ ವೇಗದಲ್ಲಿ ಚಲಿಸುವ ಸಾಧ್ಯತೆಯಿದೆ. ಅಲ್ಲದೇ ಚಂಡಮಾರುತವು 2-4.6 ಮೀಟರ್ ಎತ್ತರದ ಅಲೆಗಳೊಂದಿಗೆ ಬಂದು ಅಪ್ಪಳಿಸಿದ್ದು, ಆಂಧ್ರದ 1,419 ಹಳ್ಳಿಗಳು ಮತ್ತು 44 ಪಟ್ಟಣಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಜೊತೆಗೆ ಆಂಧ್ರಪ್ರದೇಶ, ಒಡಿಶಾ, ಪುದುಚೇರಿ, ತಮಿಳುನಾಡು ಮತ್ತು ಛತ್ತೀಸ್‌ಗಢಗಳಲ್ಲಿ ರಾಷ್ಟ್ರೀಯ ವಿಪತ್ತು ಪಡೆಯ 22 ತಂಡಗಳನ್ನು ಸರ್ಕಾರ ನಿಯೋಜಿಸಿದೆ.

ಈಗಾಗಲೇ ಆಂಧ್ರದ ಹಲವು ನಗರಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಪರಿಸ್ಥಿತಿ ಅಸ್ತವ್ಯಸ್ಥವಾಗಿದೆ. ಆಂಧ್ರಪ್ರದೇಶದ ಅನಕಾಪಲ್ಲಿ, ಕಾಕಿನಾಡ, ಕೋನಾಸೀಮಾ, ಶ್ರೀಕಾಕುಳಂ, ನೆಲ್ಲೂರು, ವಿಶಾಖಪಟ್ಟಣಂ, ತಿರುಪತಿ, ಪಶ್ಚಿಮ ಗೋದಾವರಿಯಲ್ಲಿ ಮುಂದಿನ 10 ದಿನಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆ ಆಂಧ್ರಪ್ರದೇಶದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಹಲವು ಗ್ರಾಮಗಳು ಜಲಾವೃತಗೊಂಡಿದ್ದು, ಜನರನ್ನು ನಿರಾಶ್ರಿತ ಕೇಂದ್ರಗಳಿಗೆ ಶಿಫ್ಟ್ ಮಾಡಲಾಗಿದೆ. ಇನ್ನೂ ಆಂಧ್ರಪ್ರದೇಶದ ಪೂರ್ವ ಕರಾವಳಿಯಲ್ಲಿ ಸಂಚರಿಸುವ 65 ರೈಲುಗಳ ಓಡಾಟ ಸ್ಥಗಿತಗೊಂಡಿದೆ.

ಮೊಂಥಾ ಚಂಡಮಾರುತದ ಹಿನ್ನೆಲೆ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರು ತಡರಾತ್ರಿ ರಾಜ್ಯದ ಪರಿಸ್ಥಿತಿಯನ್ನು ಪರಿಶೀಲಿಸಲು ವೀಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲನಾ ಸಭೆ ನಡೆಸಿದ್ದು, ಯಾವುದೇ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಜನರಿಗೆ ಸ್ಪಂದಿಸಲು ಜಿಲ್ಲೆಗೊಬ್ಬರು ಅಧಿಕಾರಿಯನ್ನು ನೇಮಕ ಮಾಡಿ ಎಂದು ಸೂಚನೆ ನೀಡಿದ್ದಾರೆ.ಇದನ್ನೂ ಓದಿ: Cyclone Montha| ಎರಡು ದಿನ ಬೆಂಗಳೂರು ಸೇರಿದಂತೆ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

 

Share This Article